ಮೈಸೂರಿನಲ್ಲೂ ಜನತಾದರ್ಶನ ನಡೆಸಿದ ಸಿಎಂ
ಮೈಸೂರು, ಅ.7 : ಪ್ರತಿ ಜಿಲ್ಲೆಯಲ್ಲೂ ಜನತಾ ದರ್ಶನ ಕಾರ್ಯಕ್ರಮ ನಡೆಸುವುದಾಗಿ ಘೋಷಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ತಮ್ಮ ತವರು ಜಿಲ್ಲೆಯಲ್ಲಿ ಭಾನುವಾರ ಜನತಾ ದರ್ಶನ ನಡೆಸುವ ಮೂಲಕ ಜನರ ನೋವನ್ನು ಆಲಿಸಿದ್ದಾರೆ.
ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಇದರ ನಡುವೆಯೇ ಸಿಎಂ ಸಿದ್ದರಾಮಯ್ಯ ಭಾನುವಾರ ಸರ್ಕಾರಿ ಅತಿಥಿ ಗೃಹದಲ್ಲಿ ಜನತಾ ದರ್ಶನ ನಡೆಸಿದರು. ಸುಮಾರು ಎರಡೂವರೆ ತಾಸು ಅಹವಾಲು ಆಲಿಸಿ, ಜನರ ಕಷ್ಟ ಸುಖಗಳಿಗೆ ಕಿವಿಯಾದರು.

ಜನತಾದರ್ಶನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಜಿಲ್ಲೆಗಳಿಗೆ ಭೇಟಿ ನೀಡಿದಾಗ ಜನತಾದರ್ಶನ ನಡೆಸುತ್ತೇನೆ. ಕೋಲಾರ ಜಿಲ್ಲೆಗೆ ಹೋಗಿದ್ದಾಗಲೂ ನಡೆಸಿದ್ದೇನೆ. ಜನತಾ ದರ್ಶನ ನಡೆಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೂ ಸೂಚಿಸುತ್ತೇನೆ ಎಂದರು.
ಜನತಾದರ್ಶನಕ್ಕೆ ಹೆಚ್ಚು ಜನರ ಆಗಮಿಸಿದರೆ, ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ಅರ್ಥವಲ್ಲ. ಮುಖ್ಯಮಂತ್ರಿಗಳಿಗಂದ ತ್ವರಿತ ನೆರವು ಸಿಗಬಹುದು ಎಂದು ಆಗಮಿಸುತ್ತಾರೆ. ರಾಜ್ಯದಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. (ಇನ್ನು ಜಿಲ್ಲಾ ಜನತಾದರ್ಶನ)
ಜನತಾದರ್ಶನದಲ್ಲಿ ಬಂದ ಅಹವಾಲುಗಳನ್ನು 15 ದಿನಗಳಲ್ಲಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹುಂಡಿಗೆ ಬನ್ನಿ ಎಂದ್ರು : ಕೆಲಸ ಕೊಡಿಸಿ ಎನ್ನುವ ಹೆಚ್ಚಿನ ಮನವಿಗಳು ಮೈಸೂರಿನ ಜನತಾ ದರ್ಶನದಲ್ಲೂ ಸಿಎಂಗೆ ಎದುರಾದವು. ವರ್ಗಾವಣೆ ಆಗಬೇಕು, ನಿವೇಶನ ಕೊಡಿಸಿ ಎಂದೂ ಕೆಲವರು ಕೇಳಿಕೊಂಡರು. ರಾಜ್ಯೋತ್ಸವ ಪ್ರಶಸ್ತಿಗೂ ಅರ್ಜಿ ತಂದವರಿದ್ದರು. ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಿಂದ ಜನರು ಈ ಜನತಾದರ್ಶನ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿಯಿಂದ ಆಗಮಿಸಿದ್ದ ವಯಸ್ಸಾದ ಮಹಿಳೆಯೊಬ್ಬರು, ''ಸಿಎಂ ಆದ ಮೇಲೆ ಊರಿಗೆ ಬಂದಿಲ್ಲ. ಈಗಲಾದರೂ ಊರಿಗೆ ಬನ್ನಿ ''ಎಂಬ ಕೋರಿಕೆ ಇಟ್ಟರು. ಅಜ್ಜಿಯ ಮನವಿಗೆ ಸ್ಪಂದಿಸಿದ ಸಿಎಂ, 'ಬರ್ತೀನಮ್ಮ' ಎಂದು ಭರವಸೆ ನೀಡಿದರು.
ಅದೇ ಗತ್ತು ಗಮ್ಮತ್ತು : ಬೆಂಗಳೂರಿನ ಹೊರಗೆ ಮೊದಲ ಜನತಾ ದರ್ಶನ ನಡೆಸಿದರೂ ಸಿಎಂ ಗತ್ತು ಹಾಗೇ ಇತ್ತು. ತಾವು ತಿಳಿದ ವ್ಯಕ್ತಿಗಳಿಗೆ ಯಾಕೆ ಬಂದೆ?, ನಿಂಗೇನೊ ಇಲ್ಲಿ ಕೆಲಸ, ಸೈಟಿಗೆ ಸಿನಿಯಾರಿಟಿ ಬರಲಿ ಹೋಗ್, ರಾಜ್ಯೋತ್ಸವ ಪ್ರಶಸ್ತಿನಾ ಆಯಿತು ನಡಿ, ನಡಿ, ಯಾವ ಸೀಮೆ ಲೀಡರ್‌ಗಳಯ್ಯ ನೀವು ಎನ್ನುತ್ತಲೇ ಸಿಎಂ ಜನರ ಅಹವಾಲು ಸ್ವೀಕರಿಸಿದರು.











Click it and Unblock the Notifications