Maha Shivratri 2023: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶಿವರಾತ್ರಿ ಸಂಭ್ರಮ ಹೇಗಿತ್ತು?, ಇಲ್ಲಿದೆ ವಿವರ
ದೇಶದ್ಯಾಂತ ಮಹಾಶಿವರಾತ್ರಿ ಸಂಭ್ರಮ ಜೋರಾಗಿದ್ದು, ಹಾಗೆಯೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯಾವ ರೀತಿ ಸಂಭ್ರಮ ಇತ್ತು ಅನ್ನುವುದನ್ನು ಇಲ್ಲಿ ತಿಳಿಯಿರಿ.
ಮೈಸೂರು, ಫೆಬ್ರವರಿ, 18: ರಾಜ್ಯದೆಲ್ಲೆಡೆ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಹಾಗೆಯೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಕೂಡ ಅದ್ಧೂರಿಯಾಗಿ ಶಿವರಾತ್ರಿ ಹಬ್ಬವನ್ನು ಆಚರಿಸಿದ್ದಾರೆ. ಹಾಗೆಯೇ ಇಲ್ಲಿನ ಹಬ್ಬದ ಸಂಭ್ರಮ ಹೇಗಿತ್ತು ಅನ್ನುವುದನ್ನು ಕೂಡ ವಿವರಿಸಲಾಗಿದೆ.
ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಭಕ್ತರು ಶಿವನ ದೇವಾಲಯಕ್ಕೆ ಭೇಟಿ ನೀಡಿ ವಿಶೇಷಪೂಜೆ ಪುನಸ್ಕಾರ ನೆರವೇರಿಸಿದರು. ಬೆಳಗ್ಗೆ ಅಭಿಷೇಕ, ವಿಶೇಷ ಪೂಜೆ ನಂತರ ಲಿಂಗಕ್ಕೆ ಕೊಳಗ ಧಾರಣೆ ಮಾಡಿದರು. ಬಳಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮೈಸೂರು ಅರಮನೆಯ ಪ್ರಸಿದ್ಧ ತ್ರಿನೇಶ್ವರ ದೇವಸ್ಥಾನ, ಕಾಮೇಶ್ವರ-ಕಾಮೇಶ್ವರಿ ದೇವಸ್ಥಾನ, ಚಾಮರಾಜಪುರಂನ ಶ್ರೀ ಪ್ರಸನ್ನ ವಿಶ್ವೇಶ್ವರ ದೇವಸ್ಥಾನ, ಕೆ.ಜಿ.ಕೊಪ್ಪಲಿನ ಚಂದ್ರಮೌಳೇಶ್ವರ ದೇವಸ್ಥಾನ, ಮಾತೃಮಂಡಳಿ ವೃತ್ತದ ಚಂದ್ರಮೌಳೇಶ್ವರ ದೇವಸ್ಥಾನ, ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ದೇಗುಲ, ಮಹದೇಶ್ವರ ಸ್ವಾಮಿ ದೇಗುಲ, ಅಶೋಕಪುರಂನ ಮುಕ್ಕಣ್ಣೇ ಶ್ವರ ಸ್ವಾಮಿ ದೇಗುಲ, ಕುಂಬಾರ ಕೊಪ್ಪಲಿನ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನ, ಲಷ್ಕರ್ ಮೊಹಲ್ಲಾದ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ನಗರದ ವಿವಿಧ ಶಿವ ದೇಗುಲಗಳಲ್ಲಿ ಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು.

ಶಿವಲಿಂಗಕ್ಕೆ ಅಭಿಷೇಕ ಮಾಡಿದ ಭಕ್ತರು
ನಂಜನಗೂಡು ರಸ್ತೆಯ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ಆಶ್ರಮದ ನಾದ ಮಂಟಪದಲ್ಲಿ ಮಹಾಗಣಪತಿ ಹೋಮ ಮತ್ತು ರುದ್ರ ಹೋಮ, ಶ್ರೀಚಕ್ರ ಪೂಜೆ, ಪೂರ್ಣಾಹುತಿ ಮಾಡಲಾಯಿತು. ಸಚ್ಚಿದಾನಂದ ಲಿಂಗಕ್ಕೆ ರುದ್ರಾಭಿಷೇಕ ನೆರವೇರಿತು. ಬಳಿಕ ಭಕ್ತರು ಶಿವಲಿಂಗಕ್ಕೆ ಸಹಸ್ರ ಕಳಶಾಭಿಷೇಕವನ್ನು ನೆರವೇರಿಸಿದರು. ಸಂಗೀತ ಕಾರ್ಯಕ್ರಮ, ದ್ವಂದ್ವ ಗಾಯನ, ಭರತ ನಾಟ್ಯ ಪ್ರದರ್ಶನ ಸೇರಿದಂತೆ ಇತರ ಕಾರ್ಯಕ್ರಮಗಳು ಕೂಡ ಗಮನ ಸೆಳೆದವು.

ಭಕ್ತರಿಗೆ ಪುಷ್ಪಾರ್ಚನೆ ಮಾಡಿದ ಸ್ವಾಮೀಜಿ
ಚಾಮುಂಡಿ ಬೆಟ್ಟದ ತಪ್ಪಲಿನ ಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶಿವಲಿಂಗಕ್ಕೆ ಅಭಿಷೇಕ, ಪುಷ್ಪಾರ್ಚನೆ ಮಾಡಿ, ಹಲವು ಭಕ್ತರಿಗೆ ಲಿಂಗದೀಕ್ಷೆ ನೀಡಿದರು. ಮಠದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ದಕ್ಷಿಣ ಕಾಶಿ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿಗೆ ವಿಶೇಷ ಪೂಜೆಯನ್ನು ಸಹ ನೆರವೇರಿಸಲಾಯಿತು. ಶಿವರಾತ್ರಿ ಪ್ರಯುಕ್ತ ದೇವಾಲಯಕ್ಕೆ ಭಕ್ತ ಸಾಗರ ಹರಿದು ಬಂದಿತ್ತು. ಶ್ರೀಕಂಠೇಶ್ವರನಿಗೆ ವಿಶೇಷ ಹೂವು ಹಾಗೂ ಬಿಲ್ವಪತ್ರೆಗಳಿಂದ ಅಲಂಕಾರ ಮಾಡಲಾಗಿತ್ತು.

ಸರದಿಯಲ್ಲಿ ನಿಂತು ದರ್ಶನ ಪಡೆದ ಭಕ್ತರು
ರಾಮಾನುಜ ರಸ್ತೆಯ ಶ್ರೀಜಗದ್ಗುರು ಶೈವಶಿಲ್ಪಿ ಬ್ರಹ್ಮಶ್ರೀ ಗುರುಕುಲದ ಆವರಣದಲ್ಲಿರುವ ಚತುರ್ವೇದ ಪುರುಷರು (7 ಲಿಂಗ) ಹಾಗೂ 101 ಶಿವಲಿಂಗ ಸೇರಿದಂತೆ 108 ಶಿವಲಿಂಗಗಳ ದರ್ಶನ ಪಡೆಯಲು ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು. ಕಾಮ-ಕಾಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು. ವಿಜಯ ವಿಶ್ವೇಶ್ವರ ಸ್ವಾಮಿಗೆ ಏಕಾದಶಾವರ ರುದ್ರಾಭಿಷೇಕ, ಮಧ್ಯಾಹ್ನ ಉತ್ಸವ ಜರುಗಿತು. ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಾಮಾನುಜ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ವಾಹನ ಸವಾರರಿಗೆ ಯಾವುದೇ ತೊಂದರೆ ಆಗದಂತೆ ಪರ್ಯಾಯ ಮಾರ್ಗದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ರಾಜವಂಶಸ್ಥ ಯದುವೀರ್ ಹೇಳಿದ್ದೇನು?
ಇನ್ನು ಅರಮನೆಯ ಪ್ರಸಿದ್ಧ ತ್ರಿನೇಶ್ವರ ದೇವಸ್ಥಾನದಲ್ಲೂ ಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ ದೇವರ ದರ್ಶನ ಪಡೆದರು. ಪತ್ನಿ ತ್ರಿಷಿಕಾ, ಪುತ್ರ ಆದ್ಯವೀರನೊಂದಿಗೆ ಪೂಜೆ ಸಲ್ಲಿಸಿದ್ದು, ತ್ರಿನೇಶ್ವರ ಲಿಂಗಕ್ಕೆ ಧರಿಸಿರುವ ಚಿನ್ನದ ಕೊಳಗಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಮಾತನಾಡಿದ ಯದುವೀರ್, "ಇದು ಪುರಾತನ ದೇವಾಲಯವಾಗಿದೆ. ಶ್ರೀರಂಗಪಟ್ಟಣದಲ್ಲಿ ರಾಜರು ಇದ್ದಾಗಿನಿಂದಲೂ ದೇಗುಲದಲ್ಲಿ ಪೂಜೆ ನಡೆಯುತ್ತಾ ಬಂದಿದೆ. ನಮ್ಮ ಮನೆತನದಿಂದ ಪ್ರತಿ ಬಾರಿ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತೇವೆ. ಹಾಗೂ ಎಲ್ಲಾ ರಾಜರು ದೇವಾಲಯಕ್ಕೆ ಬಹಳಷ್ಟು ಕೊಡುಗೆ ಕೊಟ್ಟಿದ್ದಾರೆ. ಅದರಂತೆಯೇ ಜಯಚಾಮರಾಜೇಂದ್ರ ಒಡೆಯರ್ ಚಿನ್ನದ ಕೊಳಗವನ್ನು ಕೊಟ್ಟಿದ್ದಾರೆ," ಎಂದರು.












Click it and Unblock the Notifications