ಸೋಮವಾರ ಜಂಬೂ ಸವಾರಿ, ನವರಾತ್ರಿಗೆ ತೆರೆ
ಮೈಸೂರು, ಅ.14 : ವಿಶ್ವವಿಖ್ಯಾತ ಜಂಬೂ ಸವಾರಿಗೆ ಮೈಸೂರಿನಲ್ಲಿ ಸಿದ್ಧತೆ ಪ್ರಾರಂಭವಾಗಿದೆ. ಸೋಮವಾರ ಮಧ್ಯಾಹ್ನ ಮಕರ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.
ಅರಮನೆಯಿಂದ ಬನ್ನಿಮಂಟಪದವರೆಗಿನ 5 ಕಿ.ಮೀ. ಜಂಬೂ ಸವಾರಿ ನೋಡಲು ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದಾರೆ. ಎರಡನೇ ಬಾರಿ ಅರ್ಜುನ 750 ಕೆ.ಜಿ.ತೂಕದ ಅಂಬಾರಿ ಹೊತ್ತು, ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿದ್ದಾನೆ.

ಮಧ್ಯಾಹ್ನ 1.12 ರಿಂದ 1.40ರೊಳಗೆ ಸಲ್ಲುವ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ.ಅರಮನೆಯಲ್ಲಿ ಜಂಬೂ ಸವಾರಿಯ ಅಂತಿಮ ಸಿದ್ಧತೆಗಳು ಪ್ರಾರಂಭವಾಗಿವೆ.
ಅಂಬಾರಿ ಹೊತ್ತು ಸಾಗುವ ಅರ್ಜುನನಿಗೆ ಕುಮ್ಕಿ ಆನೆಗಳಾದ ಸರಳಾ, ವರಲಕ್ಷ್ಮೀ ಸಾಥ್ ನೀಡಲಿವೆ. ಅಭಿಮನ್ಯು, ಕರ್ನಾಟಕ ಪೊಲೀಸ್ ಬ್ಯಾಂಡ್ ಇರುವ ಆನೆಗಾಡಿಯನ್ನು ಎಳೆಯಲಿದ್ದಾನೆ. ನಿಶಾನೆ ಆನೆ ಹಿಂದಿನ ನೌಪತ್ ಆನೆಯಾಗಿ ಶ್ರೀರಾಮ ಅಥವಾ ಗಜೇಂದ್ರ ಸಾಗಲಿವೆ.
ಜಂಬೂ ಸವಾರಿ ಮೆರವಣಿಗೆಯಲ್ಲಿ 42 ಟ್ಯಾಬ್ಲೊಗಳು, 60ಕ್ಕೂ ಹೆಚ್ಚಿನ ಕಲಾತಂಡಗಳು ಸೇರಿದಂತೆ 117ಕ್ಕೂ ಅಧಿಕ ವಿವಿಧ ತಂಡಗಳು ಪಾಲ್ಗೊಳ್ಳಲಿವೆ. ಜಂಬೂ ಸವಾರಿಯ ನಂತರ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯಿತಿನೊಂದಿಗೆ ದಸರಾಕ್ಕೆ ಅಧಿಕೃತವಾಗಿ ತೆರೆ ಬೀಳಲಿದೆ.
ಪಂಜಿನ ಕವಾಯಿತಿನಲ್ಲಿ ಈ ಬಾರಿ ಸೇನೆಯ ಯೋಧರು ಟೆಂಟ್ ಪಿಗ್ಗಿಂಗ್ ನಡೆಸಿ ಕೊಡಲಿದ್ದಾರೆ. ಅಲ್ಲದೆ, ಸೇನೆಯ ವೈಟ್ ಹಾರ್ಸ್ ತಂಡ ಬೈಕ್ ಸಾಹಸ ಪ್ರದರ್ಶನವಿದೆ. ಸಂಜೆ 7 ಗಂಟೆಗೆ ನಡೆಯುವ ಈ ಕಾರ್ಯಕ್ರಮಕ್ಕೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಅತ್ಯುತ್ತಮ ಟ್ಯಾಬ್ಲೊಗೆ 10 ಸಾವಿರ ರೂ.ಬಹುಮಾನ ನೀಡಲಾಗುತ್ತದೆ. ಆರು ವಿಭಾಗಗಳ ಪೈಕಿ ಉತ್ತಮ ಟ್ಯಾಬ್ಲೊಗೆ ತಲಾ ಪ್ರಥಮ, ಇಲಾಖಾ ವಿಭಾಗದಲ್ಲಿ ಎರಡು ಬಹುಮಾನಗಳಿದ್ದು, ಒಟ್ಟು ಬಹುಮಾನ ವೆಚ್ಚ 80 ಸಾವಿರ ರೂ.ಆಗಲಿದೆ.












Click it and Unblock the Notifications