ಮೈಸೂರು; ಸ್ಥಳೀಯರಂತೆ ಕನ್ನಡ ಮಾತನಾಡುವ ಬೆಲ್ಜಿಯಂ ಪ್ರಜೆ ಹೆಂದ್ರಿಕ್ ಹರದಮನ್
ಮೈಸೂರು, ಅಕ್ಟೋಬರ್, 31: ಹುಟ್ಟಿದ್ದು ಬೆಲ್ಜಿಯಂನಲ್ಲಿಯೇ ಆದರೂ ಇವರು ಡೆನ್ಮಾರ್ಕ್‌ನ ಪ್ರಜೆ ಆಗಿದ್ದಾರೆ. ಇವರನ್ನು ಆಕರ್ಷಿಸಿದ್ದು ಮಾತ್ರ ಸವಿ ಕನ್ನಡ. 56 ವರ್ಷದ ವಿದೇಶಿ ಪ್ರಜೆ ಹೆಂದ್ರಿಕ್ ಹರದಮನ್ ಕನ್ನಡ ಕಲಿತು ಕನ್ನಡದಲ್ಲೇ ವ್ಯವಹರಿಸುತ್ತಿದ್ದಾರೆ. ಈ ವಿದೇಶಿ ಪ್ರಜೆ ಇದೀಗ ಕನ್ನಡದ ಕಂಪನ್ನು ಪರಿಚಯಿಸುವ ಪುಸ್ತಕವನ್ನೂ ಬರೆಯುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.
ಕರ್ನಾಟಕದಲ್ಲಿ ಕೆಲವರು ಕನ್ನಡ ಮಾತನಾಡಲು ಮೂಗು ಮೂರಿಯುವ ಸಮಯದಲ್ಲೇ, ವಿದೇಶಿ ಪ್ರಜೆ ಹೆಂದ್ರಿಕ್ ಎಂಬುವವರು ಕನ್ನಡವನ್ನು ಕಲಿತು ಮಾತನಾಡುತ್ತಿರುವುದು ನಾಡಿನ ಜನರಲ್ಲಿ ಹೆಮ್ಮೆ ಮೂಡಿಸಿದೆ. ಹೆಂದ್ರಿಕ್ ಹುಟ್ಟಿದ್ದು ಬೆಲ್ಜಿಯಂನಲ್ಲಿ. ಆದರೆ ಇವರು ಡೆನ್ಮಾರ್ಕ್‌ನಲ್ಲಿ ವಾಸವಿದ್ದಾರೆ. ಹೀಗಿದ್ದರೂ ಹೆಂದ್ರಿಕ್ ಕನ್ನಡದ ಮೇಲೆ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ಸದ್ಯ ಮೈಸೂರಿನಲ್ಲಿ ನೆಲೆಸಿರುವ ಹೆಂದ್ರಿಕ್ ಕನ್ನಡದ ಬಗ್ಗೆ ಪುಸ್ತಕವನ್ನೂ ಬರೆದಿದ್ದಾರೆ.
ಸಂಶೋಧನೆಗೆಂದು ಕಳೆದ 7 ವರ್ಷದ ಹಿಂದೆ ಹೆಂದ್ರಿಕ್ ಮೈಸೂರಿಗೆ ಬಂದದಿದ್ದರು. ಇದೀಗ ಕನ್ನಡಿಗಿರಾಗಿಯೇ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಕನ್ನಡ ಭಾಷೆ ಮೇಲಿದ್ದ ಪ್ರೀತಿಯಿಂದ ಟಿವಿ ನೋಡುತ್ತಾ, ಕನ್ನಡದಲ್ಲಿ ವ್ಯವಹರಿಸುತ್ತಲೇ ಕನ್ನಡವನ್ನು ಕಲಿತುಕೊಂಡಿದ್ದಾರೆ. ಅಲ್ಲದೆ ಪುಸ್ತಕಗಳನ್ನು ಅಧ್ಯಯನ ಮಾಡುತ್ತಾ ಕನ್ನಡ ಬರೆಯುವುದನ್ನೂ ಕರಗತ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಂದ್ರಿಕ್ ಅವರು ಒಂದು ಮಳಿಗೆಯನ್ನು ತೆರೆದು ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದ್ದರು. ಮಳಿಗೆಯಲ್ಲಿ ಪಝಲ್ ಮತ್ತು ಸುಡುಕು ಪುಸ್ತಕಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು.

ಸಮ್ಮೇಳನಗಳಿಗೆ ಆಗಮಿಸುವ ಹೆಂದ್ರಿಕ್
ಹೆಂದ್ರಿಕ್ ಕನ್ನಡವನ್ನು ಅಲ್ಪಸ್ಪಲ್ಪ ಮಾತನಾಡುವ ಕನ್ನಡಿಗನಲ್ಲ. ಬದಲಿಗೆ ಸ್ಪಷ್ಟವಾಗಿ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ತಮ್ಮ ದಿನನಿತ್ಯದ ಜೀವನದಲ್ಲಿ ಕನ್ನಡದಲ್ಲೇ ಇತರರೊಂದಿಗೆ ವ್ಯವಹರಿಸುತ್ತಾರೆ. ಅಷ್ಟೆ ಅಲ್ಲ, ಕನ್ನಡದಲ್ಲಿಯೂ ಬರೆಯುತ್ತಾರೆ, ಓದುತ್ತಾರೆ. ಇವರ ಕನ್ನಡ ಪ್ರೀತಿ ಮೆಚ್ಚಿ ಮೈಸೂರು ಜಿಲ್ಲಾಡಳಿತ ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಸಾಮಾನ್ಯವಾಗಿ ಹೆಂದ್ರಿಕ್ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಕಡೆಗೆಲ್ಲ ಹೋಗುತ್ತಾರೆ. ಅಲ್ಲಿ ಕನ್ನಡದ ಬಗ್ಗೆ ಅರಿವು ಮೂಡಿಸುತ್ತಾರೆ.

ಉಚಿತವಾಗಿ 500 ಪುಸ್ತಕಗಳ ವಿತರಣೆ
ಈ ಹಿಂದೆ ಮಡಿಕೇರಿ, ವಿಜಯಪುರ, ಚನ್ನರಾಯಪಟ್ಟಣದಲ್ಲಿ ನಡೆದ ಸಮ್ಮೇಳನಕ್ಕೆ ಹೋಗಿ ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದರು. ಬೆಂಗಳೂರಿನಲ್ಲಿ 12ನೇ ವಿಶ್ವ ಸುಡುಕು ಚಾಂಪಿಯನ್‌ಶಿಪ್‌ನಲ್ಲಿ 35ಕ್ಕೂ ಹೆಚ್ಚು ದೇಶಗಳಿಂದ ವಿದೇಶಿಗರು ಭಾಗವಹಿಸಿದ್ದರು. ಈ ವೇಳೆ ಹೆಂದ್ರಿಕ್ ಹರದಮನ್ ಸಂಪಾದಿಸಿರುವ 'ಕನ್ನಡ ಕಿರು ಪರಿಚಯ' ಎಂಬ ಹೆಸರಿನ 500 ಪುಸ್ತಕಗಳನ್ನು ಉಚಿತವಾಗಿ ಹಂಚಿದ್ದಾರೆ.

ಇಂಗ್ಲೀಷ್ ವ್ಯಾಮೋಹ ಬಿಡುವಂತೆ ಮನವಿ
''ಕನ್ನಡ ಭಾಷೆ ಶ್ರೀಮಂತವಾಗಿದೆ. ಆದರೂ ಕನ್ನಡಿಗರು ಯಾಕೆ ಕನ್ನಡ ಮಾತನಾಡುವಾಗ ಅನ್ಯಭಾಷೆಗಳನ್ನು ಬಳಸುತ್ತಾರೆ ಎಂಬುದು ಅರ್ಥವಾಗುವುದಿಲ್ಲ. ನನಗೆ ಮಕ್ಕಳ ಕಥೆ ಬರೆಯಲು ಇಷ್ಟ ಆಗುತ್ತದೆ. ಹಾಗಾಗಿ ಕನ್ನಡದಲ್ಲೇ ಒಂದು ಮಕ್ಕಳ ಕಥೆಯನ್ನು ಬರೆಯುತ್ತಿದ್ದೇನೆ. ಒಂದು ಕತೆ ಈಗಾಗಲೇ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲೀಷ್ ಕಲಿಸಬೇಕು ಎಂಬ ವ್ಯಾಮೋಹವನ್ನು ಮೊದಲು ಬಿಡಬೇಕು,'' ಎಂದು ಹೆಂದ್ರಿಕ್ ಮನವಿ ಮಾಡಿದ್ದಾರೆ.

ವಿದೇಶಿ ಪ್ರಜೆಯ ಅಪ್ಪಟ ಕನ್ನಡ ಪ್ರೇಮ
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಕನ್ನಡಿಗರೇ ಕನ್ನಡವನ್ನು ಮಾತನಾಡಲು ಹಿಂಜರಿಯುತ್ತಿದ್ದಾರೆ. ಆದರೆ ಹೊರದೇಶದಿಂದ ಬಂದವರು ಮಾತ್ರ ನಮ್ಮ ಭಾಷೆಯನ್ನು ಗೌರವದಿಂದ ಕಾಣುತ್ತಾ ಕನ್ನಡದ ಮೇಲಿನ ಪ್ರೀತಿಯನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತಿದ್ದಾರೆ. ನಮ್ಮಲ್ಲಿ ಇಂಗ್ಲೀಷ್ ಮೊರೆ ಹೋಗುವವರೇ ಹೆಚ್ಚಾಗಿಬಿಟ್ಟಿದ್ದಾರೆ. ಕನ್ನಡ ಗೊತ್ತಿದ್ದರೂ ಕೂಡ ಕೆಲವರು ನಮಗೆ ಕನ್ನಡ ಬರಲ್ಲ ಎನ್ನುವಂತೆ ನಟಿಸುತ್ತಾರೆ. ಹೀಗೆ ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ನಮ್ಮವರೇ ಹೆಚ್ಚಾಗಿ ಬಳಸದಿರುವುದನ್ನು ಕಾಣಬಹುದಾಗಿದೆ. ಆದರೆ ವಿದೇಶಗಳಿಂದ ಬಂದವರು ಸ್ವಲ್ಪ ದಿನಗಳಲ್ಲಿಯೇ ಕನ್ನಡವನ್ನು ಕಲಿತುಕೊಂಡು ಮಾತನಾಡಲು ಆರಂಭಿಸುತ್ತಾರೆ. ಹಾಗೆಯೇ ಮೈಸೂರಿಲ್ಲಿ ಡೆನ್ಮಾರ್ಕ್‌ನ ಪ್ರಜೆ ಹೆಂದ್ರಿಕ್ ಎಂಬಾತ ಕನ್ನಡವನ್ನು ಕಲಿತುಕೊಂಡು ಕನ್ನಡದಲ್ಲಿಯೇ ವ್ಯವಹರಿಸುತ್ತಿರುವುದು ಗಮನ ಸೆಳೆದಿದೆ. ಕನ್ನಡಿಗರಿಗೆ ಭಾಷೆ ವ್ಯಾಮೋಹವನ್ನು ಬಿಟ್ಟುಕೊಡದಂತೆ ಮನವಿಯನ್ನು ಮಾಡಿರುವುದು ಇನ್ನು ವಿಶೇಷವಾಗಿದೆ.











Click it and Unblock the Notifications