ಮೈಸೂರಿನಲ್ಲಿ ಮಳೆ ಅಬ್ಬರಕ್ಕೆ ಜನಜೀವನ ತತ್ತರ
ಮೈಸೂರು, ಆಗಸ್ಟ್ 9 : ಮೈಸೂರಿನ ಹಲವೆಡೆ ಸುರಿಯುತ್ತಿರುವ ಮಹಾಮಳೆಗೆ ಜನಜೀವನ ತತ್ತರಿಸಿದೆ. ವರ್ಷಧಾರೆಗೆ ಮೈಸೂರು- ಊಟಿ ಸಂಪರ್ಕಿಸುವ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿದ್ದರೆ, ಕೆಲವೆಡೆ ಸೇತುವೆಗಳು ಮುಳುಗಡೆಯಾಗಿವೆ. ಕೃಷಿ ಭೂಮಿ ಜಲಾವೃತವಾಗಿದೆ.

ಅಬ್ಬಾ, ನೀರು ತುಂಬಿದ ಸೇತುವೆ ಮೇಲೇ ಬಸ್ ಚಾಲನೆ
ಹ್ಯಾಂಡ್ ಪೋಸ್ಟ್ ನಿಂದ ಕೋಟೆಗೆ ಹೋಗುವ ರಸ್ತೆಯ ಮಧ್ಯ ಭಾಗ ಜಲಾವೃತಗೊಂಡಿದ್ದು, ಕೋಟೆ ಪ್ಯಾಲೇಸ್ ಬಳಿ ನೀರು ಪ್ರವಾಹದ ರೀತಿಯಲ್ಲಿ ಉಕ್ಕಿ ಹರಿಯುತ್ತಿತ್ತು. ತಾರಕ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆಯಾಗುತ್ತಿರುವುದರಿಂದ ಹೆಗ್ಗಡಾಪುರ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಕಬಿನಿ ಜಲಾಶಯದ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ತಾಲೂಕಿನ ಹೆಬ್ಬಳ್ಳ ಜಲಾಶಯಕ್ಕೆ ಲಕ್ಷ್ಮಣತೀರ್ಥ ನದಿಯಿಂದ ಒಳಹರಿವು ಹೆಚ್ಚಿದ್ದು, ಬರಿದಾಗಿದ್ದ ಕೆರೆ ಮೈದುಂಬಿಕೊಳ್ಳುತ್ತಿದೆ.

ಬಹುತೇಕ ಕೆರೆಗಳು ಭರ್ತಿಯ ಹಂತ ತಲುಪಿದ್ದು, ಬೀಚನಹಳ್ಳಿ ಸಮೀಪದ ನೇರಳೆ, ಗಣೇಶನಗುಡಿ ಕೆರೆ ಕೋಡಿ ಬಿದ್ದ ಪರಿಣಾಮ ಗ್ರಾಮದ ವೆಂಕಟೇಶ್ ಅವರ ಮನೆಯೊಳಗೆ ನೀರು ನುಗ್ಗಿ ಸಂಕಷ್ಟ ಎದುರಿಸಿದರು. ಮೊದಲು ಮಳೆಯ ಹಿನ್ನೆಲೆಯಲ್ಲಿ ಸಂತಸಗೊಂಡಿದ್ದ ರೈತರೀಗ ಮಹಾಮಳೆಗೆ ಕಂಗಾಲಾಗಿದ್ದಾರೆ. ಭತ್ತ, ರಾಗಿ, ಮುಸುಕಿನ ಜೋಳ, ಶುಂಠಿ, ಅರಿಶಿಣ, ಹತ್ತಿ ಹಾಕಿದ್ದ ರೈತ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹತ್ತಿ ಸಿಡಿದು ಬಿಡಿಸುವ ವೇಳೆಗೆ ಮಳೆ ಬಂದು ಹಾಳು ಮಾಡಿದೆ. ಇನ್ನು ಕೇರಳದ ಶುಂಠಿ ಬೆಳೆಗಾರರಂತೂ ದಿಕ್ಕು ತೋಚದಂತಾಗಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ ಶುಂಠಿ ಬೆಳೆದಿದ್ದು, ವಿಪರೀತ ಮಳೆಗೆ ಶುಂಠಿ ಬುಡದಲ್ಲಿ ಕೊಳೆಯುವ ಭೀತಿ ಎದುರಾಗಿದೆ. ಇನ್ನು ಕೆಲವೆಡೆ ನದಿ ನೀರು ಉಕ್ಕಿ ಹರಿದು ಬೆಳೆ ಬೆಳೆದಿದ್ದ ಜಮೀನುಗಳೆಲ್ಲ ಜಲಾವೃತಗೊಂಡಿವೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಂತರಸಂತೆ ವಲಯದ ದಮ್ಮನಕಟ್ಟೆಯಿಂದ ನಡೆಯುವ ಸಫಾರಿಯನ್ನು ಮಳೆಯಿಂದ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಕಾಡಿನ ರಸ್ತೆಯಲ್ಲಿ ಹೂತುಕೊಳ್ಳುವುದರಿಂದ ಬಸ್ ಸಂಚಾರ ಸಾಧ್ಯವಿಲ್ಲ. ಬಿಡುವು ಕೊಡದಂತೆ 120 ಮಿ.ಮೀ. ಮಳೆಯಾಗುತ್ತಿದ್ದು, ಆದ್ದರಿಂದ ಸಫಾರಿಯನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಪ್ರವಾಸಿಗರು ಸಹಕರಿಸಬೇಕು ಎಂದು ಅಂತರಸಂತೆ ಆರ್ಎಫ್ಒ ವಿನಯ್ ತಿಳಿಸಿದ್ದಾರೆ.

ಇನ್ನು ಮೈಸೂರಿನ ಎಚ್.ಡಿ.ಕೋಟೆ 34, ನಂಜನಗೂಡು 27, ಹುಣಸೂರು 13, ಪಿರಿಯಾಪಟ್ಟಣ 7, ಮೈಸೂರಿನಲ್ಲಿ 6 ಮನೆಗಳು ಮಳೆಗೆ ಹಾನಿಯಾಗಿವೆ.












Click it and Unblock the Notifications