Mysuru Dasara: ರಾಜಮನೆತನವನ್ನು ಆಹ್ವಾನಿಸಿದ ಸಚಿವ ಡಾ. ಹೆಚ್. ಸಿ ಮಹದೇವಪ್ಪ
ಮೈಸೂರು ದಸರಾ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಎಲ್ಲಾ ಸಾಂಸ್ಕೃತಿಕ ನಗರಿಯಲ್ಲಿ ದಸರಾ ಆಚರಣೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಶನಿವಾರ ರಾಜ್ಯ ಸರ್ಕಾರದ ಪರವಾಗಿ ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಿದರು. ಪ್ರತಿ ವರ್ಷ ಸರ್ಕಾರ ರಾಜಮನೆತನವನ್ನು ಅಧಿಕೃತವಾಗಿ ಆಹ್ವಾನಿಸುವುದು ಸಂಪ್ರದಾಯವಾಗಿದೆ.
ಭಾನುವಾರ ಮೈಸೂರು ಅರಮನೆಯಲ್ಲಿರುವ ನಿವಾಸದಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿ ಮಾಡಿದ ಸಚಿವರು, ಸಂಪ್ರದಾಯದಂತೆ ಫಲ ತಾಂಬೂಲ ಸಮೇತ ಆಹ್ವಾನ ಪತ್ರಿಕೆಯನ್ನು ನೀಡಿ ದಸರಾ ಉತ್ಸವಕ್ಕೆ ಆಹ್ವಾನಿಸಿದರು. ಪ್ರತಿವರ್ಷದಂತೆ ಸರ್ಕಾರದಿಂದ ರಾಜಮನೆತನಕ್ಕೆ ನೀಡಲಾಗುವ ಗೌರವಧನದ ಚೆಕ್ ಅನ್ನು ಕೂಡ ನೀಡಲಾಯಿತು.

ಯುವ ದಸರಾ ಸಿದ್ಧತೆ ಪರಿಶೀಲನೆ
ನಗರದ ಹೊರವಲಯದ ಉತ್ತನಹಳ್ಳಿ ಸಮೀಪದಲ್ಲಿ ನಡೆಯಲಿರುವ ಯುವ ದಸರಾ ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಮಹದೇವಪ್ಪ, ಕಾರ್ಯಕ್ರಮದ ಸಿದ್ಧತೆಯನ್ನು ಪರಿಶೀಲನೆ ನಡೆಸಿದರು. ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಅವರು, ದಸರಾ ಮಹೋತ್ಸವದಲ್ಲಿ "ಯುವ ದಸರಾ" ಹೆಚ್ಚು ಜನರನ್ನು ಆಕರ್ಷಿಸುವ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಮೈಸೂರು ನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಜನರು ಕಾರ್ಯಕ್ರಮ ನೋಡಲು ಬರಲಿದ್ದು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಸೂಚನೆ ಕೊಟ್ಟರು.
ಯುವ ದಸರಾ ಕಾರ್ಯಕ್ರಮ ವೀಕ್ಷಣೆಗೆ ಯುವ ಜನತೆ ಹೆಚ್ಚಾಗಿ ಬರುವ ಕಾರಣ, ಯಾವುದೇ ಸಮಸ್ಯೆ ಉಂಟಾಗದಂತೆ ವ್ಯವಸ್ಥೆ ಕಲ್ಪಿಸಬೇಕು, ಸೂಕ್ತ ಭದ್ರತೆ ಒದಗಿಸುವ ಜೊತೆಗೆ ಗೊಂದಲಕ್ಕೆ ಅವಕಾಶ ಇಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ನಗರದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೂ ದಾರಿಯುದ್ದಕ್ಕೂ ಬೀದಿ ದೀಪ ಅಳವಡಿಸಬೇಕು, ವಾಹನ ಪಾರ್ಕಿಂಗ್ ಸ್ಥಳದಲ್ಲಿ ವ್ಯವಸ್ಥಿತವಾಗಿರಬೇಕು, ಸರಿಯಾದ ಸೂಚನಾ ಫಲಕಗಳನ್ನು ಅಳವಡಿಸುವ ಮೂಲಕ ಗೊಂದಲಕ್ಕೆ ಅವಕಾಶವಿಲ್ಲದಂತೆ ನೋಡಿಕೊಳ್ಳಬೇಕು ಎಂದರು.
ಮುಖ್ಯವಾಗಿ ಕಾರ್ಯಕ್ರಮಕ್ಕೆ ಬರುವ ಮಹಿಳೆಯರು, ಯುವತಿಯರಿಗೆ ಹೆಚ್ಚಿನ ಭದ್ರತೆ ನೀಡಬೇಕು. ರಾತ್ರಿ ವೇಳೆ ಕಾರ್ಯಕ್ರಮ ನಡೆಯುವ ಕಾರಣ, ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ಅಕ್ಟೋಬರ್ 6ರಿಂದ ಅಕ್ಟೋಬರ್ 10ರವರೆಗೂ ಯುವ ದಸರಾ ಕಾರ್ಯಕ್ರಮ ನಡೆಯಲಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು, ಎ.ಆರ್. ರೆಹಮಾನ್, ಇಳಯರಾಜ, ಹಿನ್ನಲೆ ಗಾಯಕಿ ಶ್ರೇಯಾ ಘೋಷಾಲ್ ಅವರಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಪ್ರತಿ ದಿನ ಕಾರ್ಯಕ್ರಗಳು ನಡೆಯಲಿವೆ.












Click it and Unblock the Notifications