Get Updates
Get notified of breaking news, exclusive insights, and must-see stories!

Mysuru: ಮೈಸೂರಿನ ಅರ್ಬನ್ ಹಾತ್‌ನಲ್ಲಿ ಹಸ್ತ ಶಿಲ್ಪಪ್ರದರ್ಶನ: ಏನಿದರ ವಿಶೇಷತೆ?

ಮೈಸೂರು, ಫೆಬ್ರವರಿ 17: ಮೈಸೂರು ನಗರದ ಮೇಟಗಳ್ಳಿಯಲ್ಲಿರುವ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ವರ್ಷಪೂರ್ತಿ ಒಂದಲ್ಲ ಒಂದು ರೀತಿಯ ಮೇಳಗಳು, ಪ್ರದರ್ಶನಗಳು ನಡೆಯುತ್ತಲೇ ಇರುತ್ತವೆ. ಇಲ್ಲಿ ನಡೆಯುವ ಪ್ರತಿಯೊಂದು ಮೇಳ ಅಥವಾ ಪ್ರದರ್ಶನ ತನ್ನದೇ ಆದ ವಿಶೇಷತೆಗಳನ್ನು ಹೊಂದಿರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದೀಗ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ 144 ಮೇಳಗಳನ್ನು ನಡೆಸಲಾಗಿದ್ದು ಇದೀಗ 145ನೇ ಮೇಳ ನಡೆಯುತ್ತಿದೆ. ಈ ಬಾರಿ ನಡೆಯುತ್ತಿರುವ ಮೇಳ ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಏಕೆಂದರೆ ಇಲ್ಲಿಗೆ ತೆರಳಿದವರಿಗೆ ಹಸ್ತಶಿಲ್ಪ ಪ್ರದರ್ಶನ ಗಮನಸೆಳೆಯುತ್ತಿದೆ. ಹೀಗಾಗಿ ಈ ಅಪರೂಪದ ಪ್ರದರ್ಶನಕ್ಕಾಗಿ ಪ್ರೇಕ್ಷಕರು ಅತ್ತ ದೌಡಾಯಿಸುತ್ತಿರುವುದು ಎದ್ದು ಕಾಣಿಸುತ್ತಿದೆ.

Handicraft Exhibition at JSS Urban Haat in Mysore A Unique Showcase

ಮೈಸೂರಿನಲ್ಲಿ ಮೇಳಗಳು, ವಸ್ತುಪ್ರದರ್ಶನಗಳು ಆಗಿಂದಾಗ್ಗೆ ನಡೆಯುತ್ತಲೇ ಇರುತ್ತವೆ. ದಸರಾ ವಸ್ತುಪ್ರದರ್ಶನದಿಂದ ಆರಂಭವಾಗಿ ಕೆಲವು ಮೈದಾನ ಮತ್ತು ಛತ್ರಗಳು ವಿಶೇಷ ಪ್ರದರ್ಶನಕ್ಕೆಂದೇ ಮೀಸಲಾಗಿರುವುದನ್ನು ನಾವು ಕಾಣಬಹುದಾಗಿದೆ. ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದ ಇಲ್ಲಿಗೆ ಬಂದು ಮೇಳ ಮತ್ತು ಪ್ರದರ್ಶನಗಳನ್ನು ಏರ್ಪಡಿಸಿ ಒಂದಷ್ಟು ದಿನ ಇಲ್ಲಿದ್ದು ಹಿಂತಿರುಗುವುದು ನಡೆಯುತ್ತಾ ಬಂದಿದೆ.

ಇದೆಲ್ಲದರ ನಡುವೆ ಜೆಎಸ್‌ಎಸ್ ಅರ್ಬನ್ ಹಾತ್ ವಿಶಿಷ್ಟವಾಗಿ ಗಮನಸೆಳೆಯುತ್ತದೆ. ಈ ಸ್ಥಳವನ್ನು ಮೇಳ ಮತ್ತು ಪ್ರದರ್ಶನಗಳಿಗಾಗಿಯೇ ನಿರ್ಮಿಸಲಾಗಿದೆ. ಇದೀಗ ಫೆ.14 ರಿಂದ ಹಸ್ತಶಿಲ್ಪ ಪ್ರದರ್ಶನ ಮತ್ತು ಮಾರಾಟ ಆರಂಭವಾಗಿದ್ದು, ಫೆ.23ರವರೆಗೆ ನಡೆಯಲಿದೆ. ಇದಕ್ಕೆ ಭಾರತ ಸರ್ಕಾರದ ವಸ್ತ್ರಮಂತ್ರಾಲಯದ ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿಯು ಸಾಥ್ ನೀಡುತ್ತಿದೆ.

Handicraft Exhibition at JSS Urban Haat in Mysore A Unique Showcase

ಭಾರತ ಸರ್ಕಾರದ ವಸ್ತ್ರಮಂತ್ರಾಲಯದ ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿಯು ರಾಷ್ಟ್ರಮಟ್ಟದ ನೋಡಲ್ ಏಜೆನ್ಸಿಯಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಅವಿರತವಾಗಿ ಶ್ರಮಿಸುತ್ತಿದೆ. ಕರಕುಶಲಕಲೆಯ ಅಭಿವೃದ್ಧಿ, ವಿನ್ಯಾಸ ಹಾಗೂ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವುದನ್ನು ನಾವು ಕಾಣಬಹುದಾಗಿದೆ.

ಇನ್ನು ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿಯು ಕುಶಲಕರ್ಮಿಗಳಿಗೆ ನೇರ ಮಾರುಕಟ್ಟೆಯನ್ನು ಒದಗಿಸಲು ಪ್ರತಿವರ್ಷ ಹಲವಾರು ಮೇಳಗಳನ್ನು ಆಯೋಜಿಸುವ ಮೂಲಕ ಪ್ರದರ್ಶನ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸುತ್ತಿರುವುದು ಗಮನಾರ್ಹವಾಗಿದೆ. ಈ ಬಾರಿ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನ ಗಾಂಧಿಶಿಲ್ಪ ಬಜಾರ್‌ನ ಸುಮಾರು 70 ಮಳಿಗೆಗಳಲ್ಲಿ ನಮ್ಮ ದೇಶದ 18ಕ್ಕೂ ಹೆಚ್ಚು ರಾಜ್ಯಗಳ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಕರಕುಶಲ ಕರ್ಮಿಗಳು ಹಾಗೂ ಕೈಮಗ್ಗ ನೇಕಾರರು ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳು ಒಂದೇ ಸೂರಿನಡಿ ತಮ್ಮದೇ ಕರಕುಶಲ ವಸ್ತುಗಳೊಂದಿಗೆ ಸಂಗಮಗೊಳ್ಳುತ್ತಿದ್ದಾರೆ.

Handicraft Exhibition at JSS Urban Haat in Mysore A Unique Showcase

ಸದ್ಯ ಇಲ್ಲಿಗೆ ಭೇಟಿ ನೀಡಿದ್ದೇ ಆದರೆ ಮರದ ಕೆತ್ತನೆ, ಶಿಲಾಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ಮಣ್ಣಿನ ಮಡಿಕೆಗಳು, ಪೇಪರ್, ರತ್ನಗಂಬಳಿ, ಹತ್ತಿ ಜಮಕಾನ, ಇಮಿಟೇಶನ್ ಆಭರಣಗಳು, ಮರದ ಅರಗಿನ ಕಲಾವಸ್ತುಗಳು, ಬಾಟಿಕ್, ಕಲಾಂಕಾರಿ ಚಿತ್ರಕಲೆ, ಚರ್ಮದ ಅಕರ್ಷಕ ವಸ್ತುಗಳು, ಕಲಾತ್ಮಕ ಚರ್ಮದ ಚಪ್ಪಲಿಗಳು, ಚನ್ನಪಟ್ಟಣದ ಗೊಂಬೆಗಳು, ಕಸೂತಿ ಕಲೆ, ಮಧ್ಯಪ್ರದೇಶ ರಾಜ್ಯದ ಮಹೇಶ್ವರಿ, ಚಂದೇರಿ ಸೀರೆಗಳು, ಒಡಿಶಾ ರಾಜ್ಯದ ಪಟ್ಟಚಿತ್ರ, ಬೆಳ್ಳಿಯ ಸೂಕ್ಷ್ಮ ವಿನ್ಯಾಸ ವಸ್ತುಗಳು ಕಣ್ಣಿಗೆ ರಾಚುತ್ತಿವೆ.

ಗ್ರಾಹಕ-ಕುಶಲ ಕರ್ಮಿಗಳ ಬಾಂಧವ್ಯ ವೃದ್ಧಿ

ಇವುಗಳಷ್ಟೇ ಅಲ್ಲದೆ, ಬಿದಿರು-ಬೆತ್ತದ ವಸ್ತುಗಳು, ಚಿಕನ್ ಎಂಬ್ರಾಯ್ಡರಿ, ಡ್ರೈಪ್ಲವರ್ ಗಳು, ಕಲಾತ್ಮಕ ಕಲ್ಲಿನ ವಸ್ತುಗಳು, ಪಂಜಾಬ್ ರಾಜ್ಯದ ಫುಲ್ಕಾರಿ ಬಟ್ಟೆಗಳು ಇಲ್ಲಿದ್ದು ಆಕರ್ಷಣೆಗೊಳಪಡುತ್ತಿವೆ. ಇನ್ನೊಂದು ಈ ಮೇಳದ ಪ್ರಮುಖ ವಿಶೇಷ ಏನೆಂದರೆ ಮಧ್ಯವರ್ತಿಗಳು ಇಲ್ಲದೆ ಗ್ರಾಹಕರು ಮತ್ತು ಉತ್ಪಾದಕರ ಮಧ್ಯೆ ನೇರಸಂಪರ್ಕ ಮತ್ತು ಸಂವಹನಕ್ಕೆ ಅವಕಾಶ ಒದಗಿಸುವುದು ಮಾತ್ರವಲ್ಲದೆ, ಗ್ರಾಹಕ ಮತ್ತು ಕುಶಲ ಕರ್ಮಿಗಳ ಬಾಂಧವ್ಯ ವೃದ್ಧಿಗೂ ದಾರಿ ಮಾಡಿಕೊಡುತ್ತಿದೆ.

ಹಸ್ತಶಿಲ್ಪಪ್ರದರ್ಶನದಲ್ಲಿ ಭಾಗವಹಿಸುತ್ತಿರುವ ಕುಶಲಕರ್ಮಿಗಳಿಗೆ ಉಚಿತವಾಗಿ ಮಳಿಗೆಗಳನ್ನು ನೀಡಲಾಗುತ್ತಿದ್ದು. ಜೊತೆಗೆ, ಪ್ರಯಾಣಭತ್ಯೆ, ದಿನಭತ್ಯೆನ್ನೂ ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿಯಿಂದ ಭರಿಸಲಾಗುತ್ತಿದೆ. ಕಲಾ ಸ್ವಾದನೆ ಹಾಗೂ ದೇಶದ ವಿವಿಧೆಡೆಯ ಕುಶಲ ಕರ್ಮಿಗಳ ಕಲಾಪ್ರೌಢಿಮೆಯನ್ನು ಆಸ್ವಾದಿಸಲು ಬಯಸುವರಿಗೆ ಇದೊಂದು ವೇದಿಕೆ ಎಂದರೂ ತಪ್ಪಾಗಲಾರದು. ಇಲ್ಲಿಗೆ ತೆರಳುವವರಿಗೆ ಬಸ್ ವ್ಯವಸ್ಥೆಯಿದ್ದು ಪ್ರದರ್ಶನವು ಬೆಳಿಗ್ಗೆ 10.30 ರಿಂದ ರಾತ್ರಿ 9ರವರೆಗೆ ಇರಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+