ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ: ಸಚಿವ ಜಿ ಟಿ ದೇವೇಗೌಡ
ಮೈಸೂರು, ಜೂನ್ 5 : ಎಚ್ ವಿಶ್ವನಾಥ್ ರವರೇ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಸಚಿವ ಜಿ ಟಿ ದೇವೇಗೌಡ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಜೆಡಿಎಸ್ ಸಭೆ ನಡೆಯಿತು. ಸಭೆಯಲ್ಲಿ ಎಲ್ಲಾ ನಾಯಕರು ಚರ್ಚೆ ಮಾಡಿದ್ದೇವೆ. ಮುಂದೆಯೂ ವಿಶ್ವನಾಥ್ ಅವರೇ ಜೆಡಿಎಸ್ ನ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ನಾಳೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರನ್ನು ವಿಶ್ವನಾಥ್ ಭೇಟಿ ಮಾಡಲಿದ್ದಾರೆ. ಈಗಾಗಲೇ ವಿಶ್ವನಾಥ್ ರಾಷ್ಟ್ರೀಯ ಅಧ್ಯಕ್ಷರ ಮಾತಿಗೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ ಎಂದರು.
ಬಿಜೆಪಿ ಸೇರುವ ಬಗ್ಗೆ ಸಚಿವ ಜಿ ಟಿ ದೇವೇಗೌಡ ನೀಡಿದ ಸ್ಪಷ್ಟನೆ
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯರ ಗುಣಗಾನ ಮಾಡಿದ ಸಚಿವ ಜಿ.ಟಿ ದೇವೇಗೌಡ, ಸಿದ್ದರಾಮಯ್ಯ ನನ್ನ ಟಾರ್ಗೆಟ್ ಅಲ್ಲ. ನಾನು ಸಿದ್ದರಾಮಯ್ಯರ ಟಾರ್ಗೆಟ್ ಅಲ್ಲ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರೇ ನಾಯಕರು. ಅವರು ಕಳೆದ ಬಾರಿ ರಾಜ್ಯದಲ್ಲಿ 5 ವರ್ಷಗಳ ಕಾಲ ಉತ್ತಮವಾದ ಆಡಳಿತ ನಡೆಸಿದ್ದಾರೆ.ರಾಷ್ಟ್ರದ ನಾಯಕರು ಹಾಗೂ ಜನತೆ ಸಿದ್ದರಾಮಯ್ಯರನ್ನು ಒಪ್ಪಿಕೊಂಡಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಸರ್ಕಾರವನ್ನ ಜನರ ಬಳಿ ತೆಗೆದುಕೊಂಡು ಹೋಗುವುದು ನಮ್ಮ ಗುರಿ. ಗ್ರಾಮ ವಾಸ್ತವ್ಯದ ಮೂಲಕ ರಾಜ್ಯದ ಅಭಿವೃದ್ಧಿಗೆ ಮುಂದಾಗುತ್ತೇವೆ. ಇಡೀದೇಶದಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರ ಕರ್ನಾಟಕದಿಂದಲೇ ಉದಯವಾಗುತ್ತವೆ. ನಮ್ಮ ಆಡಳಿತವನ್ನ ಜನ ಮೆಚ್ಚಿದ್ದಾರೆ ಎಂದು ಜಿಟಿಡಿ ವಿಶ್ವಾಸ ವ್ಯಕ್ತಪಡಿಸಿದರು.
ನರೇಂದ್ರ ಮೋದಿಯನ್ನು ಹೊಗಳಿದ ಸಚಿವ ಜಿ.ಟಿ. ದೇವೇಗೌಡ
ಮೈಸೂರಿನಲ್ಲಿ ಕಾಂಗ್ರೆಸ್ ಸೋಲಾಗಲು ವಿಶ್ವನಾಥ್ ಕಾರಣ ಎಂದಿದ್ದ ಶಾಸಕ ತನ್ವೀರ್ ಸೇಠ್ ಹೇಳಿಕೆಗೆ ಪ್ರತಿಕ್ರಿಯಿಸಿ, ಎರಡು ಪಕ್ಷದಿಂದಲೂ ತಪ್ಪಾಗಿದೆ ನಿಜ. ಎಡವಿಬಿದ್ದ ಮೇಲೆ ತಿಳಿಯೋದು ಎಲ್ಲಿ ತಪ್ಪಾಗಿದೆ ಎಂದು ಅರಿವಾಗುತ್ತದೆ. ಅದನ್ನು ಮುಂದೆ ಸರಿಪಡಿಸಿಕೊಂಡು ಹೋಗುತ್ತೇವೆ. ತನ್ವೀರ್ ಸೇಠ್ ಹೇಳಿಕೆ ವಿಷಯ ಸಂಬಂಧಿಸಿ ಮಾತನಾಡುವ ಸಮಯ ಇದಲ್ಲ. ಸಮಯ ಮೀರಿದೆ. ಮತ್ತೆ ಎಡವದೇ ಜಾಗೃತರಾಗಿ ಮುನ್ನಡೆಯಬೇಕಿದೆ ಅಷ್ಟೇ ಎಂದರು.