'ಪರಮ ಭ್ರಷ್ಟ ಸರ್ಕಾರದ ಹುಟ್ಟಿಗೆ ಕಾರಣನಾದೆನಲ್ಲ': ಎಚ್.ವಿಶ್ವನಾಥ್ ಪ್ರಾಯಶ್ಚಿತ ಸತ್ಯಾಗ್ರಹ
ಮೈಸೂರು, ಏಪ್ರಿಲ್ 3: ವಿಧಾನ ಪರಿಷತ್ ನಾಮ ನಿರ್ದೇಶಿತ ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ಸೋಮವಾರ ಮೈಸೂರು ನಗರದ ನ್ಯಾಯಾಲಯದ ಬಳಿ ಇರುವ ಗಾಂಧಿ ಪ್ರತಿಮೆ ಎದುರು ಇಂದು ಪ್ರಾಯಶ್ಚಿತ ಸತ್ಯಾಗ್ರಹ ಹೆಸರಿನಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.
ಪ್ರಾಯಶ್ಚಿತ ಸತ್ಯಾಗ್ರಹ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಳೆದ ಐವತ್ತು ವರ್ಷಗಳ ಸಕ್ರಿಯ ರಾಜಕಾರಣದಲ್ಲಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್ಸಿನಲ್ಲಿಯೇ ಇದ್ದವನು ನಾನು. ಎಲ್ಲಿದ್ದರೂ, ಹೇಗಿದ್ದರೂ ಎಲ್ಲ ಕಾಲದಲ್ಲಿಯೂ ನನ್ನ ಮನಸ್ಸಿನಲ್ಲಿರುವುದು ಕಾಂಗ್ರೆಸ್ ಮಾತ್ರ ಶಾಸಕ, ಸಚಿವ, ಸಂಸದನಾಗಿ ಸದಾ ಕಾಲವೂ ಜನರೊಟ್ಟಿಗೆ ಬೆರೆತು ಬದುಕಿದ ಹಾಗೂ ಜನರೊಟ್ಟಿಗೇ ಬದುಕಲು ಬಯಸುವ ಜೀವ ನನ್ನದು ಎಂದು ತಿಳಿಸಿದರು.

ಕೆಲವರು ನೀವು ಭಾರತೀಯ ಜನತಾ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದೀರಿ ಎಂದು ಹೇಳುತ್ತಿದ್ದಾರೆ. ನಾನು ಸಾಂಸ್ಕೃತಿಕ ಮತ್ತು ಸಾಹಿತ್ಯಕವಾದ ಕೋಟಾದ ಅಡಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯನಾಗಿದ್ದೇನೆಯೇ ಹೊರತು, ಪಕ್ಷದ ಬಲದಿಂದ ಅಲ್ಲ ಎನ್ನುವುದನ್ನು ದೂರುವ ಮಂದಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ನಾನು ರಾಜ್ಯಪಾಲರಿಂದ ನಾಮಕರಣಗೊಂಡ ಸದಸ್ಯನಾದುದರಿಂದ ಸ್ವತಂತ್ರನಾಗಿದ್ದೇನೆ. ನಾನು ಯಾವುದೇ ಪಕ್ಷದ ಸಿದ್ಧಾಂತಕ್ಕೂ ಸೇರಿದವನಲ್ಲ ಎಂಬುದನ್ನು ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ ಎಂದರು.
ಭಾರತೀಯ ಜನತಾ ಪಕ್ಷದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣನಾದ ಬಗ್ಗೆ ನನಗೆ ಅತೀವವಾದ ನೋವಿದೆ. ಇಂಥದ್ದೊಂದು ಪರಮ ಭ್ರಷ್ಟ ಸರ್ಕಾರದ ಹುಟ್ಟಿಗೆ ಕಾರಣನಾದೆನಲ್ಲ ಎಂಬ ಬೇಸರ, ವಿಷಾದವಿದೆ. ಹೇ ವಿಶ್ವನಾಥ್ , ನೀನೇಕೆ ಇಂತಹ ತಪ್ಪು ಮಾಡಿದೆ ಎಂದು ನನ್ನ ಅಂತರಾತ್ಮ ನನ್ನನ್ನು ತಿವಿಯುತ್ತಲೇ ಇದೆ. ಈ ಪಾಪಪ್ರಜ್ಞೆ ನನ್ನನ್ನು ಕೊನೆತನಕವೂ ಕಾಡುತ್ತಲೇ ಇರುತ್ತದೆ.
ಹೀಗಾಗಿ ಈ ಪಾಪದ ಹೊರೆಯನ್ನು ಇಳಿಸಿಕೊಳ್ಳಲೇಬೇಕಾದ ದೊಡ್ಡದೊಂದು ಜರೂರತ್ತು ನನ್ನ ಮುಂದಿದೆ. ಈ ಕಾರಣದಿಂದಾಗಿ ನಾನು ಏಪ್ರಿಲ್ ತಿಂಗಳ 3ರ ಸೋಮವಾರ ಬೆಳಿಗ್ಗೆ 11 ರಿಂದ 12ರವರೆಗೆ ಮೈಸೂರಿನ ನ್ಯಾಯಾಲಯದ ಮುಂಭಾಗದಲ್ಲಿರುವ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯ ಮುಂದೆ ಒಂದು ಗಂಟೆಗಳ ಕಾಲ ಸಾಂಕೇತಿಕವಾಗಿ ಪ್ರಾಯಶ್ಚಿತ್ತ ಸತ್ಯಾಗ್ರಹವನ್ನು ಮಾಡಲು ನಿರ್ಧರಿಸಿದ್ದೇನೆ ಎಂದರು.
ಈ ನೆಲೆಗಳಿಂದಾಗಿ ನಾನೀಗ ಸಂಪೂರ್ಣ ಸ್ವತಂತ್ರ್ಯ ನಾನೀಗ ಸ್ವಚ್ಚಂದವಾಗಿ ಹಾರಾಡುವ ಅಪ್ಪಟ ಹಳ್ಳಿಯ ಹಕ್ಕಿ. ಹೀಗಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ನನಗೆ ತಾಯಿಯಂತಿರುವ ಕಾಂಗ್ರೆಸ್ ಪಕ್ಷವನ್ನು, ನನ್ನತೆಯೇ ಯೋಚಿಸುವ ಅಭಿಮಾನದ ಸ್ನೇಹಿತ ವಲಯದೊಂದಿಗೆ ಬೆಂಬಲಿಸಲು ತೀರ್ಮಾನಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನೆಯಲ್ಲಿ ಕರಾ ಹಿಂಜಾವೇ ಅಧ್ಯಕ್ಷ ಕೆ.ಎಸ್.ಶಿವರಾಮು, ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕಾಂಗ್ರೆಸ್‌ನತ್ತ ಹಳ್ಳಿಹಕ್ಕಿ ಒಲವು
ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ಹೆಚ್.ವಿಶ್ವನಾಥ್ ಹುಣಸೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಇವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೆ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡು ಹೆಚ್.ವಿಶ್ವನಾಥ್ ಸೇರಿ 17 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ ಮೂಲಕ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿದ್ದರು.
ನಂತರ ಹೆಚ್.ವಿಶ್ವನಾಥ್ ಉಪಚುನಾವಣೆಯಲ್ಲಿ ಸೋತರೂ ಬಿಜೆಪಿ ಎಂಎಲ್‌ಸಿಯನ್ನಾಗಿ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಬಿಜೆಪಿಯ ಜೊತೆಯಲ್ಲೂ ಅಂತರ ಕಾಯ್ದುಕೊಂಡಿದ್ದ ಎಚ್.ವಿಶ್ವನಾಥ್ ಬಿಜೆಪಿ ಪಕ್ಷದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ಕಾಂಗ್ರೆಸ್ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ.












Click it and Unblock the Notifications