ಮೈಸೂರಿನಲ್ಲಿ ಚಿರತೆ ದಾಳಿಗೆ ವಿದ್ಯಾರ್ಥಿನಿ ಬಲಿ
ಮೈಸೂರು, ಡಿ. 01: ಜಿಲ್ಲೆಯಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ತಿ.ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದ ವಿದ್ಯಾರ್ಥಿನಿಯೊಬ್ಬರು ಚಿರತೆ ದಾಳಿಗೆ ಗುರುವಾರ ಮೃತಪಟ್ಟಿದ್ದಾರೆ.
20 ವರ್ಷದ ಮೇಘನಾ ಚಿರತೆ ದಾಳಿಗೆ ಮೃತಪಟ್ಟ ಯುವತಿ. ಗುರುವಾರ ಸಂಜೆ ಮನೆ ಹಿಂಭಾಗದಲ್ಲಿದ್ದ ಶೌಚಾಲಯಕ್ಕೆ ಹೋಗಲು ಹೊರ ಬಂದ ಮೇಘನಾ ಮೇಲೆ ಚಿರತೆ ದಾಳಿ ಮಾಡಿದೆ. ಮುಖ ಹಾಗೂ ಕತ್ತಿನ ಭಾಗವನ್ನು ಕಚ್ಚಿ ಗಾಯಗೊಳಿಸಿದೆ.
ಕೆಆರ್‌ಎಸ್ ಬೃಂದಾವನದಲ್ಲಿ ಚಿರತೆ ಸೆರೆ ಕಾರ್ಯಾಚರಣೆ ವಿಫಲ: ಪ್ರವಾಸಿಗರಿಗೆ ಹೊರಡಿಸಿದ್ದ ನಿರ್ಬಂಧ ವಾಪಸ್
ಚಿರತೆ ದಾಳಿಗೊಳಗಾದ ಮೇಘನಾ ಚೀರಾಟದ ಸದ್ದಿಗೆ ಪೋಷಕರು ಓಡಿಬಂದಿದ್ದಾರೆ. ತಕ್ಷಣ ಚಿರತೆ ಪರಾರಿಯಾಗಿದೆ. ಬಳಿಕ ಮೇಘನಾ ಅವರನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೇಘನಾ ಅವರು ತಿ.ನರಸೀಪುರ ಸರಕಾರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದರು. ಘಟನೆ ಖಂಡಿಸಿ ಗ್ರಾಮಸ್ಥರು ಧರಣಿ ನಡೆಸಿದ್ದರು. ಶಾಸಕ ಅಶ್ವಿನ್ ಕುಮಾರ್ ಕೂಡ ಪ್ರತಿಭಟನೆಗೆ ಗ್ರಾಮಸ್ಥರ ಸಾಥ್ ನೀಡಿದ್ದರು.
ಮೈಸೂರು ಜಿಲ್ಲೆಯಲ್ಲಿ ಚಿರತೆ ಕಾಟ ಹೆಚ್ಚಾಗಿದ್ದು, ಕಳೆದ ಆರು ತಿಂಗಳಲ್ಲಿ 20ಕ್ಕೂ ಹೆಚ್ಚು ಚಿರತೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ.
*ಎರಡನೇ ಬಲಿ*
ಹಾಗೆ ನೋಡಿದರೆ ತಾಲೂಕಿನಲ್ಲಿ ಚಿರತೆ ದಾಳಿಗೆ ಬಲಿಯಾದ ಎರಡನೇ ಪ್ರಕರಣ ಇದು. ಈ ಹಿಂದೆ ಲಿಂಗಯ್ಯನ ಹುಂಡಿ ಗ್ರಾಮದ 19 ವರ್ಷದ ಮಂಜುನಾಥ್ ಅ.31ರಂದು ಚಿರತೆ ದಾಳಿಗೆ ಬಲಿಯಾಗಿದ್ದರು. ಈತ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದರು. ಜಾತ್ರೆಗೆ ಹೋಗಿದ್ದ ಮಂಜುನಾಥ್ ಮೇಲೆ ಚಿರತೆ ದಾಳಿ ಮಾಡಿತ್ತು.
ಈಗ ಮತ್ತೆ ಜಿಲ್ಲೆಯಲ್ಲಿ ಚಿರತೆ ದಾಳಿ ಪ್ರಕರಣ ಸದ್ದು ಮಾಡಿದೆ. ವಿದ್ಯಾರ್ಥಿನಿ ಸಾವಿಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಇತ್ತ, ಕಳೆದೊಂದು ತಿಂಗಳ ಹಿಂದೆ ಕೆಆರ್‌ಎಸ್ ಬೃಂದಾವನದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ವಿಫಲವಾಗಿದೆ.