ದೇವಸ್ಥಾನಕ್ಕೆ ಬಂದ ಬಾಲಕಿ ಕಾವೇರಿ ನದಿ ಪಾಲು
ಪಿರಿಯಾಪಟ್ಟಣ, ಮೇ 23: ಸ್ನಾನ ಮಾಡಲು ಹೋದ ಯುವತಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಚಾಮರಾಯನಕೋಟೆಯಲ್ಲಿ ನಡೆದಿದೆ. ಇಲ್ಲಿನ ಹನುಮಂತರಾಯ ದೇವಸ್ಥಾನದ ಬಳಿಯ ಕಾವೇರಿ ನದಿಯಲ್ಲಿ ಯುವತಿ ಮುಳುಗಿ ಸಾವನ್ನಪ್ಪಿದ್ದಾಳೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನ ಅಂಜಲಿ(16) ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ.
ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮದಿಂದ ಅಂಜಲಿಯ ಸಂಬಂಧಿಗಳು ದೇವಸ್ಥಾನದಲ್ಲಿ ಹರಕೆ ತೀರಿಸಲು ಬುಧವಾರ ಬಂದಿದ್ದರು. ಈ ಸಮಯದಲ್ಲಿ ಕೊಣನೂರು ಗ್ರಾಮದವರೇ ಆದ ಶ್ರೀನಿವಾಸ್‍ರವರ ಪುತ್ರಿ ಅಂಜಲಿ ಮತ್ತು ಅವಳ ಸಂಬಂಧಿಗಳಾದ ಅನನ್ಯ, ಅನುಶ್ರೀ ಸೇರಿ ಮೂವರು ದೇವಸ್ಥಾನದ ಬಳಿಯಿರುವ ಹೊಳೆಯಲ್ಲಿ ಸ್ನಾನ ಮಾಡಲು ತೆರಳಿದ್ದರು.

ಈ ವೇಳೆ ಕಾಲು ಜಾರಿ ಅಂಜಲಿ ನೀರಿನಲ್ಲಿ ಬಿದ್ದಿದ್ದು, ನೀರಿನಲ್ಲಿ ಮುಳುಗಿದ ಅಂಜಲಿ ಸಾವನಪ್ಪಿದ್ದಾರೆ. ಜೊತೆಗಿದ್ದ ಅನನ್ಯ ಮತ್ತು ಅನುಶ್ರೀ ಅವರನ್ನು ಸ್ಥಳೀಯರು ನೀರಿನಿಂದ ಎಳೆದು ರಕ್ಷಿಸಿದ್ದಾರೆ.
ವಿಷಯ ತಿಳಿದ ಬೆಟ್ಟದಪುರ ಪೊಲೀಸ್ ಠಾಣೆಯ ಪಿಎಸ್‍ಐ ಡಿ.ಆರ್.ಜಯಸ್ವಾಮಿ, ಎಎಸ್‍ಐ ಸುರೇಶ್ ಸ್ಥಳಕ್ಕೆ ಆಗಮಿಸಿ, ಅಂಜಲಿಯ ತಂದೆ ಶ್ರೀನಿವಾಸ್‍ರವರಿಂದ ದೂರು ಪಡೆದು ದಾಖಲಿಸಿಕೊಂಡು, ಶವವನ್ನು ಹೊಳೆಯಿಂದ ಹೊರತೆಗೆಸಿ, ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಶವವನ್ನು ನೀಡಿದ್ದಾರೆ.
ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡಿದ್ದರಿಂದ ಹೆತ್ತವರು ಮತ್ತು ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು.












Click it and Unblock the Notifications