ಮೈಸೂರಿನಲ್ಲಿ ಆಗಸ್ಟ್ 3ರವರೆಗೆ ಜಿ-20 ಶೃಂಗ ಸಭೆ, ವಿವರ ಇಲ್ಲಿದೆ
ಮೈಸೂರು, ಜುಲೈ, 31: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ಮೂರು ದಿನಗಳ ಜಿ-20 ಶೃಂಗಸಭೆ ನಡೆಯುತ್ತಿದ್ದು, ಪ್ರಪಂಚಾದ್ಯಂತ ಆಗಮಿಸಿರುವ ಗಣ್ಯರು ನಗರದ ಪಾರಂಪರಿಕತೆ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಪಾರಂಪರಿಕತೆ ಬಗ್ಗೆ ಪ್ರತಿನಿಧಿಗಳು ಸಮಾಲೋಚನೆ ನಡೆಸಿದರು. ಅಮೆರಿಕ, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಜಪಾನ್, ಭಾರತ, ಫ್ರಾನ್ಸ್, ಜರ್ಮನಿ ಸೇರಿದಂತೆ 20 ದೇಶಗಳ 250ಕ್ಕೂ ಹೆಚ್ಚು ಗಣ್ಯರು ಆಗಮಿಸಿದ್ದಾರೆ. ಆಗಸ್ಟ್ 3ರವರೆಗೆ ಜಿ-20 ಶೃಂಗ ಸಭೆ ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಬಾರಿಯ ಜಿ-20 ಶೃಂಗಸಭೆಯ ಅಧ್ಯಕ್ಷರಾಗಿದ್ದಾರೆ.

2022ರ ಡಿಸೆಂಬರ್‌ನಿಂದ ಆರಂಭವಾಗಿರುವ ಈ ಸಭೆ 2023ರ ನವೆಂಬರ್ 30ರವರೆಗೆ ನಡೆಯಲಿದೆ. ಮೈಸೂರಿನಲ್ಲಿ ನಡೆಯಲಿರುವ ಶೃಂಗ ಸಭೆಗೆ ಅಮೆರಿಕ, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಜಪಾನ್, ಭಾರತ, ಫ್ರಾನ್ಸ್, ಜರ್ಮನಿ ಸೇರಿದಂತೆ 20 ದೇಶಗಳ 250ಕ್ಕೂ ಹೆಚ್ಚು ಗಣ್ಯರು ಬಂದಿದ್ದಾರೆ.
ಬಿಗಿ ಪೊಲೀಸ್ ಬಂದೋ ಬಸ್ತ್ ಆಯೋಜನೆ
ವಿದೇಶಿ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಎರಡು ಹೋಟೆಲ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಲ್ಲದೆ ಸಿಸಿ ಟಿವಿ ಕ್ಯಾಮೆರಾದ ಮೂಲಕ ನಿಗಾವಹಿಸಲಾಗಿದೆ. ಗಣ್ಯರ ಆಗಮನದ ಮೇಲೆ ಯಾವುದೇ ಭದ್ರತಾ ಲೋಪ ಆಗದಂತೆ ಮೈಸೂರು ನಗರ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.
ಭಾರತವು 100ನೇ ಜಿ-20 ಶೃಂಗಸಭೆಯ ಆತಿಥ್ಯ ವಹಿಸಿದ್ದು, ಈ ಸಭೆಯು ಈಗಾಗಲೇ ಬೆಂಗಳೂರು, ಹಂಪಿಯಲ್ಲಿ ನಡೆದಿದೆ. ಇದೀಗ ಮೈಸೂರಿನಲ್ಲಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಶೃಂಗಸಭೆಯಲ್ಲಿ ವ್ಯಾಪಾರ ಮತ್ತು ಹೂಡಿಕೆ ಬಗ್ಗೆ ಸಮಾಲೋಚನೆ ನಡೆದಿತ್ತು. ಈಗ ಮೈಸೂರಿನಲ್ಲಿ ನಾಳೆಯಿಂದ ಆರಂಭವಾಗುತ್ತಿರುವ ಶೃಂಗಸಭೆಯಲ್ಲಿ ಪಾರಂಪರಿಕತೆ ಬಗ್ಗೆ ಸಮಾಲೋಚನೆ ನಡೆಯುತ್ತಿದೆ.
ಪ್ರವಾಸಿ ತಾಣಗಳ ವೀಕ್ಷಣೆಗೆ ವ್ಯವಸ್ಥೆ
ಶೃಂಗಸಭೆಯ ನಂತರ ವಿದೇಶಿ ಪ್ರತಿನಿಧಿಗಳಿಗೆ ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಆಗಸ್ಟ್ 1ರಂದು ಸಂಜೆ ಅರಮನೆ ವೀಕ್ಷಣೆ, ಆಗಸ್ಟ್ 1ರಂದು ಕೆಆರ್‌ಎಸ್, ಶ್ರೀರಂಗಪಟ್ಟಣ ಹಾಗೂ ಆಗಸ್ಟ್ 3ರಂದು ಸೋಮನಾಥಪುರ ವೀಕ್ಷಿಸಲಿದ್ದಾರೆ. ಇನ್ನು ಜಾಗತಿಕ ತಾಪಮಾನ, ಮಾಲಿನ್ಯ ಸೇರಿದಂತೆ ಸಮಕಾಲೀನ ಜಾಗತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ಜಿ-20 ಶೃಂಗಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗುತ್ತಿದೆ.
ಅಂತಿಮ ನಿರ್ಣಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಶೃಂಗಸಭೆಯಲ್ಲಿ ತೀರ್ಮಾನಗಳು ಆಗುತ್ತವೆ. ವಿಶ್ವದ ಹಲವು ದೇಶಗಳು ಭಾಗಿಯಾಗುವ ಜಿ-20 ಶೃಂಗಸಭೆ ಮೈಸೂರಿನಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ.












Click it and Unblock the Notifications