ಮೈಸೂರಿನಲ್ಲಿ ಫ್ಯೂಚರ್ ಮಾಡೆಲ್ ಆಫ್ ಇಂಡಿಯಾ ಫ್ಯಾಷನ್ ಶೋ: ಇಲ್ಲಿದೆ ಕಾರ್ಯಕ್ರಮದ ವಿವರ
ಮೈಸೂರು, ಡಿಸೆಂಬರ್ 20: ವಸ್ತುಪ್ರದರ್ಶನ ಪ್ರಾಧಿಕಾರ ಹಾಗೂ ತಿಬ್ಬಾಸ್ ಗ್ರೂಪ್ ಸಹಯೋಗದೊಂದಿಗೆ ಡಿಸೆಂಬರ್ 28ರಂದು ಫ್ಯೂಚರ್ ಮಾಡೆಲ್ ಆಫ್ ಇಂಡಿಯಾ ಎಂಬ ಫ್ಯಾಷನ್ ಶೋ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಸೆಂಬರ್ 28ರ ಶನಿವಾರ ಸಂಜೆ 5ಗಂಟೆಗೆ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಫ್ಯಾಷನ್ ಶೋ ಏರ್ಪಡಿಸಲಾಗಿದೆ. ಇದು ಅಂತರ ರಾಜ್ಯಮಟ್ಟದ ಸ್ಪರ್ಧೆಯಾಗಿದ್ದು, ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಉತ್ತರ ಭಾರತದಿಂದಲೂ ಸ್ಪರ್ಧಿಗಳು ಆಗಮಿಸುತ್ತಿದ್ದಾರೆ. ಈಗಾಗಲೇ ನೂರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಕಳೆದ ಎರಡು ತಿಂಗಳಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಡಿಷನ್‌ಗಳನ್ನು ತಿಬ್ಬಾಸ್ ಗ್ರೂಪ್‌ನಿಂದ ನಡೆಸಲಾಗಿದ್ದು, ಅಲ್ಲಿ ಆಯ್ಕೆಯಾದವರು ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ನಗದು ಬಹುಮಾನ ಹಾಗೂ ಟ್ರೋಫಿ, ಪ್ರಮಾಣಪತ್ರ ನೀಡಲಾಗುವುದು ಎಂದರು.
ನಮ್ಮ ನಾಡಿನ ಸಂಸ್ಕೃತಿ ಪರಿಚಯಿಸುವ ಉದ್ದೇಶದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಸಾಂಪ್ರದಾಯಿಕ ಹಾಗೂ ಭಾರತದ ಸಂಸ್ಕೃತಿ ಬಿಂಬಿಸುವ ಉಡುಗೆ ತೊಡುಗೆಗಳನ್ನೇ ಧರಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಇದರ ಜೊತೆಗೆ ನಮ್ಮ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಫ್ಯಾಷನ್ ಉದ್ಯಮಕ್ಕೆ ಪರಿಚಯಿಸುವ ಒಂದು ಮಹತ್ತರ ಉದ್ದೇಶದೊಂದಿಗೆ ತಿಬ್ಬಾಸ್ ಗ್ರೂಪ್ ಮಾಡೆಲಿಂಗ್ ಕಂಪನಿಯ ಮೂಲಕ ಈ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಚಲನಚಿತ್ರ ನಿರ್ದೇಶಕರು, ನಿರ್ಮಾಪಕರು, ನಟರನ್ನು ಆಹ್ವಾನಿಸಲಾಗಿದೆ. ಇದರಿಂದ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ದೊರಕುವ ಎಲ್ಲಾ ಸಾಧ್ಯತೆಗಳಿವೆ. ಈ ಕಾರ್ಯಕ್ರಮದಲ್ಲಿ 2 ವರ್ಷದಿಂದ 65 ವರ್ಷದವರೆಗಿನ ವಯೋಮಾನದ ಯಾರು ಬೇಕಾದರೂ ವಿವಿಧ ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ತಿಬ್ಬಾಸ್ ಗ್ರೂಪ್‌ನ ಸೋಷಿಯಲ್ ಮೀಡಿಯಾಗಳಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬಹುದು ಹಾಗೂ ತಿಬ್ಬಾಸ್ ಗ್ರೂಪ್ ಮಾಡೆಲಿಂಗ್ ಕಂಪನಿಯ ದೂರವಾಣಿ ಸಂಖ್ಯೆ 9880647392ಗೆ ಕರೆ ಮಾಡಿ ನೇರವಾಗಿ ನೊಂದಣಿ ಮಾಡಿಕೊಳ್ಳಬಹುದು ಎಂದರು.
ಇದೇ ವೇಳೆ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ದಸರಾ ವಸ್ತುಪ್ರದರ್ಶನ ಅ.3ರಿಂದ ಆರಂಭಗೊಂಡಿದ್ದು ಜ.1ರಂದು ಕೊನೆಗೊಳ್ಳಲಿದೆ. ವಿಭಿನ್ನವಾದ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಗಾನಮಂಟಪವನ್ನು ಸಮರ್ಥವಾಗಿ ಬಳಸಿಕೊಂಡಿದ್ದೇವೆ. ಈವರೆಗೆ 15 ಲಕ್ಷಕ್ಕಿಂತ ಜಾಸ್ತಿ ಪ್ರವಾಸಿಗರು ವೀಕ್ಷಿಸಿದ್ದಾರೆ. ಪ್ರವೇಶ ದ್ವಾರದಲ್ಲಿ ಸಲಹೆ ಹಾಗೂ ದೂರು ಸ್ವೀಕರಿಸುವ ವ್ಯವಸ್ಥೆ ಮಾಡಿದ್ದೆವು. ಅದರಲ್ಲಿರುವ ಪತ್ರಗಳಲ್ಲಿ ಬಹುತೇಕ ಹೊಗಳಿಕೆಯವೇ ಆಗಿವೆ. ಇದು ಖುಷಿ ತರಿಸಿದೆ ಎಂದು ಅಧ್ಯಕ್ಷ ಅಯೂಬ್‌ಖಾನ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರುದ್ರೇಶ, ತಿಬ್ಬಾಸ್ ಗ್ರೂಪ್ ಮಾಡೆಲಿಂಗ್ ಕಂಪನಿಯ ಸಂಸ್ಥಾಪಕ ಡಿ.ಸಿ.ನಾಗೇಶ್, ವ್ಯವಸ್ಥಾಪಕ ನಿರ್ದೇಶಕಿ ಐ.ಡಿ.ಶಿವಾನಿ ಭಾಗಿಯಾಗಿದ್ದರು.
This is an AI generated article image through WISE












Click it and Unblock the Notifications