ಮೈಸೂರು: ಅನಾಥವಾಗಿದ್ದ ಚಿರತೆ ಮರಿಗಳನ್ನು ಮತ್ತೆ ತಾಯಿ ಮಡಿಲಿಗೆ ಸೇರಿದ ಅರಣ್ಯ ಇಲಾಖೆ
ಮೈಸೂರು, ಫೆಬ್ರವರಿ 14: ತಾಯಿಯಿಂದ ದೂರವಾಗಿದ್ದ ಮೂರು ಚಿರತೆ ಮರಿಗಳನ್ನು ಅವುಗಳ ತಾಯಿಯೊಂದಿಗೆ ಸೇರಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಆ ಮೂಲಕ ತಾಯಿ ಚಿರತೆಯಿಂದ ಬೇರ್ಪಟ್ಟು ಯಾತನೆ ಅನುಭವಿಸಿದ ಮರಿಗಳು ಇದೀಗ ಅಮ್ಮನ ಮಡಿಲು ಸೇರುವ ಖುಷಿಯಲ್ಲಿವೆ.
ಮೈಸೂರು ತಾಲೂಕಿನ ಭುಗತಗಳ್ಳಿ ಗ್ರಾಮದ ಖಾಸಗಿ ಬಡಾವಣೆಯ ರಸ್ತೆಗಳಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯ ಪೈಪ್ ನೊಳಗೆ ಫೆ.7ರಂದು ರಾತ್ರಿ 9 ಗಂಟೆ ವೇಳೆಯಲ್ಲಿ ಎರಡು ಚಿರತೆ ಮರಿ ಇರುವುದನ್ನು ಗ್ರಾಮಸ್ಥರು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಚಿರತೆ ಕಾರ್ಯಪಡೆಯ ತಂಡ ಸೇತುವೆ ಕೆಳಗೆ ಭಯದಿಂದ ಅವಿತುಕೊಂಡಿದ್ದ ಎರಡು ಚಿರತೆ ಮರಿಗಳನ್ನು ರಕ್ಷಣೆ ಮಾಡಿದ್ದರು.

ಗ್ರಾಮಸ್ಥರ ಮನವೊಲಿಸಿ ಚಿರತೆ ಮರಿ ಸಿಕ್ಕ ಸ್ಥಳದಲ್ಲಿಯೇ ಅದರ ತಾಯಿಗಾಗಿ ಶೋಧ ಕಾರ್ಯಾಚರಣೆ ನಡೆಸಲು ಮುಂದಾಗಿದ್ದ ಅರಣ್ಯ ಇಲಾಖೆಗೆ ಫೆ.9ರಂದು ಮತ್ತೊಂದು ಮರಿ ಸಿಕ್ಕಿತ್ತು. ಮೂರು ಮರಿಗಳನ್ನು ರಕ್ಷಣೆ ಮಾಡಿ ಆರೈಕೆ ಮಾಡಲಾಗುತ್ತಿತ್ತು. ಅಲ್ಲದೇ, ತಾಯಿ ಚಿರತೆಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಕ್ಯಾಮರಾ ಟ್ರ್ಯಾಪ್ ಅಳವಡಿಸಿ ತಾಯಿ ಚಿರತೆಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿತ್ತು. ಇದರೊಂದಿಗೆ ಸ್ಥಳದಲ್ಲಿಯೇ ಬೋನೊಂದನ್ನು ಇಡಲಾಗಿತ್ತು. ಕರುಳ ಕುಡಿಯನ್ನು ಹುಡುಕುತ್ತಾ ಬಂದ ತಾಯಿ ಚಿರತೆ ನಿನ್ನೆ ಬೋನಿಗೆ ಬಿದ್ದಿದೆ.
ತಾಯಿ ಚಿರತೆ ಹಾಗೂ ಮರಿಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿರುವ ಅರಣ್ಯ ಇಲಾಖೆ, ಸಂರಕ್ಷಿತ ಪ್ರದೇಶದಲ್ಲಿ ತಾಯಿ ಮತ್ತು ಮರಿಗಳ ಪುನರ್ ಮಿಲನಕ್ಕೆ ಶ್ರಮಿಸುತ್ತಿದ್ದಾರೆ. ಕೆಲ ಪ್ರಾಣಿಗಳ ಮರಿಗಳನ್ನು ಜನ ಮುಟ್ಟಿದರೆ ಮತ್ತೆ ಮಡಿಲಿಗೆ ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತವೆ. ಈ ಹಿನ್ನೆಲೆಯಲ್ಲಿ ಚಿರೆತೆ ಹಾಗೂ ಮರಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿಟ್ಟು ಪರಸ್ಪರ ಎದುರುಗೊಳ್ಳುವಂತೆ ಮಾಡಲಾಗಿದೆ. ತಾಯಿ ಚಿರತೆ ಮರಿಗಳನ್ನು ಗುರುತಿಸಿ, ಅದರ ಮೈ ನೆಕ್ಕುವ ಮೂಲಕ ಪ್ರೀತಿ ತೋರಿಸುತ್ತಿದ್ದಂತೆಯೇ ಅದು ಮರಿಗಳನ್ನು ಮತ್ತೆ ಮಡಿಲಿಗೆ ಸೇರಿಸಿಕೊಳ್ಳಲು ಮುಂದಾಗಿದೆ ಎಂದರ್ಥ.

ಈ ಹಿನ್ನೆಲೆಯಲ್ಲಿ ಸೆರೆ ಸಿಕ್ಕ ಮರಿಗಳನ್ನು ಮರಳಿ ತಾಯಿ ಮಡಿಲಿಗೆ ಸೇರಿಸಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಆಯರಹಳ್ಳಿಯಲ್ಲಿ ರಕ್ಷಿಸಿದ ಒಂದು ಕಪ್ಪು ಮರಿ ಸೇರಿದಂತೆ ಮೂರು ಮರಿಗಳನ್ನು 9 ದಿನದ ಬಳಿಕ ತಾಯಿ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದ ಮೈಸೂರು ಅರಣ್ಯ ಸಿಬ್ಬಂದಿಗಳ ತಂಡ ಇದೀಗ ಮತ್ತೆ ಮೂರು ಮರಿಗಳನ್ನು ತಾಯಿ ಮಡಿಲಿಗೆ ಸೇರಿಸಲು ಮುಂದಾಗಿದೆ. ಡಿಸಿಎಫ್ ಗಳಾದ ಡಾ.ಐ.ಬಿ.ಪ್ರಭುಗೌಡ, ಡಾ.ಕೆ.ಎನ್ ಬಸವರಾಜು ಚಿರತೆ ಹಾಗೂ ಅದರ ಮರಿಗಳ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.












Click it and Unblock the Notifications