Mysuru Dasara 2022: ಮೈಸೂರು ದಸರಾ; ಜಂಬೂ ಸವಾರಿಗೆ 5 ಹೊಸ ಆನೆ!
ಮೈಸೂರು, ಜುಲೈ 11: ಕಳೆದ ಎರಡು ವರ್ಷಗಳಿಂದ ಮೈಸೂರು ದಸರಾ ಕೋವಿಡ್ ಕಾರಣದಿಂದ ಕಳೆಗುಂದಿದೆ. ಅಂದುಕೊಂಡಂತೆ ನಡೆದರೆ ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರೆಯಲ್ಲಿ ಐದು ಹೊಸ ಆನೆಗಳು ಹೆಜ್ಜೆ ಹಾಕಲಿವೆ. ಜಗತ್ ಪ್ರಸಿದ್ಧಿಯಾದ 9 ದಿನ ನಡೆಯುವ ನವರಾತ್ರಿ ಉತ್ಸವದಲ್ಲಿ ಜಂಬೂಸವಾರಿ ಪ್ರಮುಖ ಆಕರ್ಷಣೆಯಾಗಿದೆ.
ದಸರಾಗೆ ಮುನ್ನವೇ ಅಂದರೆ 2 ತಿಂಗಳ ಮುಂಚೆಯೇ ಅರಮನೆ ಅಂಗಳದಲ್ಲಿ ಗಜಪಡೆ ಆಗಮಿಸುತ್ತವೆ. ಬಂಡೀಪುರ, ನಾಗರಹೊಳೆ, ದುಬಾರೆ ಸೇರಿದಂತೆ ನಾನಾ ಕ್ಯಾಂಪ್‌ನಲ್ಲಿ ಆನೆಗಳು ಮೈಸೂರಿಗೆ ಬರುತ್ತವೆ. ಅಂತೆಯೇ ಈ ಬಾರಿ 2ನೇ ಹಂತದ ಹೊಸ ಜಂಬೋ ಪಡೆಯನ್ನು ಹುಟ್ಟುಹಾಕಲು ಅರಣ್ಯ ಇಲಾಖೆ ಇಲಾಖೆ ತೀರ್ಮಾನಿಸಿದೆ. ಹೀಗಾಗಿ ಈ ಬಾರಿ ಐದು ಹೊಸ ಆನೆಗಳು ಜಂಬೂಸವಾರಿಯಲ್ಲಿ ಎಲ್ಲರ ಆಕರ್ಷಣೆಯಾಗಲಿದೆ.
ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ಯಾವುದೇ ಆನೆಯನ್ನು 60 ವರ್ಷದ ನಂತರ ಯಾವುದೇ ಚಟುವಟಿಕೆಗೆ ಬಳಕೆ ಮಾಡುವಂತಿಲ್ಲ. ಅಂತೆಯೇ 60 ವರ್ಷ ತುಂಬಿದ ಅರ್ಜುನ ಆನೆಯನ್ನು ನಿವೃತ್ತಿಗೊಳಿಸಲಾಗಿತ್ತು. ಇದೀಗ ಅಭಿಮನ್ಯು ಅಂಬಾರಿ ಹೊರುವ ಕೆಲಸ ನಿರ್ವಹಿಸುತ್ತಿದ್ದಾನೆ. ಅಭಿಮನ್ಯುಗೆ ಇದೀಗ 57 ವರ್ಷ. ಇನ್ನು ಮೂರು ವರ್ಷವಷ್ಟೇ ಅಭಿಮನ್ಯು ಅಂಬಾರಿ ಹೊರಬಹುದು. ಆ ನಂತರ ಹೊಸ ಆನೆಯನ್ನು ಹುಡುಕಬೇಕಾಗುತ್ತದೆ.

2 ತಿಂಗಳು ಮುಂಚೆಯೇ ಶಿಬಿರಕ್ಕೆ ಆನೆಗಳು
ಜನದಟ್ಟಣೆ, ಪಟಾಕಿ, ಹಾರನ್ ಸದ್ದಿಗೆ ಬೆದರದ ಆನೆಗಳನ್ನು ಅರಣ್ಯ ಇಲಾಖೆ ತಯಾರು ಮಾಡಬೇಕಿದೆ. ಈ ನಿಟ್ಟಿನಲ್ಲಿ 2ನೇ ಹಂತದ ಆನೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಹೊಸಬರಿಗೆ ತಯಾರಿ ನೀಡುವ ಉದ್ದೇಶದಿಂದಲೇ ಈ ಬಾರಿ ದಸರೆಗೆ 2 ತಿಂಗಳು ಬಾಕಿ ಇರುವಂತೆಯೇ ಆನೆಗಳನ್ನು ಅರಮನೆ ಆವರಣದ ಶಿಬಿರಕ್ಕೆ ಕರೆತರಲಾಗುತ್ತದೆ.

ಅಭಿಮನ್ಯುವಿಗೆ ಪರ್ಯಾಯವಾಗಿ ತರಬೇತಿ
750 ಕೆಜಿ ತೂಕದ ಅಂಬಾರಿ ಹೊರುವ ಆನೆಗೆ ಕೆಲವೊಂದು ಮಾನದಂಡ ಬೇಕು. ಅಂಬಾರಿ ಹೊರುವ ಆನೆಗೆ ಕನಿಷ್ಠ 3 ರಿಂದ 5 ವರ್ಷ ಅಭ್ಯಾಸ ಮಾಡುವುದು ಅಗತ್ಯ. ಅದಕ್ಕಾಗಿ ಈ ಬಾರಿಯಿಂದಲೇ ಅಭಿಮನ್ಯುವಿಗೆ ಪರ್ಯಾಯವಾಗಿ 2ನೇ ಹಂತದ ಆನೆಗಳಾಗಿ ಮಹೇಂದ್ರ, ಭೀಮ, ಅಶ್ವತ್ಥಾಮ, ಕೃಷ್ಣಗಳಿಗೆ ತರಬೇತಿ ನೀಡಲಾಗುತ್ತಿದೆ.

ಬೃಹತ್ ಜಂಬೂ ಸವಾರಿಗೆ ತೀರ್ಮಾನ
ಕಳೆದ ಎರಡು ವರ್ಷ ಕೊರೊನಾ ಕಾರಣದಿಂದ ಅದ್ಧೂರಿ ದಸರಾ ನಡೆಸಲು ಸರಕಾರ ಉತ್ಸಾಹ ತೋರಿರಲಿಲ್ಲ. ಸಂಪ್ರದಾಯಕ್ಕೆ ಚ್ಯುತಿ ಬರಬಾರದು ಎಂಬ ಉದ್ದೇಶದಿಂದ ಅರಮನೆ ಆವರಣದೊಳಗೆ ಜಂಜೂಸವಾರಿ ಸೀಮಿತವಾಗಿತ್ತು.
2019ರಲ್ಲಿ ದಸರಾ ಆಚರಿಸಿದಾಗ 14 ರಿಂದ 15 ಆನೆಗಳನ್ನು ತಂದು ಬೃಹತ್ ಜಂಬೂ ಸವಾರಿ ನಡೆಸಿದಂತೆ ಈ ಬಾರಿಯೂ ಹೆಚ್ಚುವರಿ ಆನೆಗಳನ್ನು ಒಳಗೊಂಡಂತೆ ದಸರಾ ಮೆರವಣಿಗೆ ಆಯೋಜಿಸಲು ಅರಣ್ಯ ಇಲಾಖೆ ತೀರ್ಮಾನಿಸಿದೆ. ಈವರೆಗೆ ದಸರೆಗೆ ಆಗಮಿಸದೇ ಇರುವ ಐದು ಹೊಸ ಆನೆಗಳನ್ನೇ 2ನೇ ಹಂತದ ಸಿದ್ಧತೆಗೆ ಕರೆತರಲು ತೀರ್ಮಾನಿಸಲಾಗಿದೆ ಎಂದು ಡಿಸಿಎಫ್ ವಿ. ಕರಿಕಾಳನ್ ತಿಳಿಸಿದರು.

115 ಆನೆಗಳಲ್ಲಿ 20 ಆನೆಗಳ ಪಟ್ಟಿ ಸಿದ್ಧ
ನಾಗರಹೊಳೆಯ ತಿತಿಮತಿ ಹಾಗೂ ಸುತ್ತಮುತ್ತಲಿನ ಆನೆ ಶಿಬಿರ, ಕೊಡಗು ಜಿಲ್ಲೆಯ ದಾರ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಾಪುರ ಆನೆ ಶಿಬಿರ ಸೇರಿದಂತೆ ಈ ಎಲ್ಲಾ ಕ್ಯಾಂಪ್‌ಗಳಲ್ಲಿ 115ಕ್ಕೂ ಹೆಚ್ಚು ಆನೆಗಳಿವೆ. ಇದರಲ್ಲಿ ದಸರೆಗೆ 20 ಆನೆಗಳ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಇವುಗಳಲ್ಲಿ 15 ಆನೆಯನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. 9 ಆನೆಗಳು ಹಿಂದೆ ದಸರೆಯಲ್ಲಿ ಪಾಲ್ಗೊಂಡ ಅನುಭವಿಗಳಿರುತ್ತವೆ. ಇನ್ನುಳಿದ ಆನೆಗಳನ್ನು ಹೊಸದಾಗಿಯೇ ಆಯ್ಕೆ ಮಾಡಿಕೊಳ್ಳುತ್ತಿರುವುದು ವಿಶೇಷ.












Click it and Unblock the Notifications