ಭ್ರೂಣ ಹತ್ಯೆ: ತಾಲೂಕು ಆರೋಗ್ಯಾಧಿಕಾರಿ ಸೇರಿದಂತೆ ಇಬ್ಬರ ಅಮಾನತು: ಸಚಿವ
ಮೈಸೂರು, ಡಿಸೆಂಬರ್ 2: ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಮೈಸೂರು ತಾಲೂಕು ಆರೋಗ್ಯಾಧಿಕಾರಿ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಮೈಸೂರು ಮಾತಾ ಆಸ್ಪತ್ರೆ ಸ್ಥಳಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸರಕಾರಿ ಅತಿಥಿಗೃಹದಲ್ಲಿ ಮೈಸೂರು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಳೆ ನೋಟಿಸ್ ಅಂಟಿಸಿ ತಾಲೂಕು ಆರೋಗ್ಯಧಿಕಾರಿ ರಾಜೇಶ್ವರಿ ಅವರು ಕರ್ತವ್ಯ ಲೋಪ ಎಸಗಿದ್ದಾರೆ. ಇದೇ ರೀತಿ ಅನಧಿಕೃತ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಧಿಕಾರಿ ಡಾ. ರವಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ದಾಖಲೆ ಪ್ರಕಾರ 270 ಭ್ರೂಣ ಹತ್ಯೆಯಾಗಿದೆ. ಇದಕ್ಕಿಂತ ಹೆಚ್ಚು ಆಗಿರಬಹುದು. ಇದನ್ನು ಎಷ್ಟು ವರ್ಷದಿಂದ ಮಾಡಿಕೊಂಡು ಬಂದಿದ್ದಾರೆ ಗೊತ್ತಿಲ್ಲ. ತನಿಖೆ ಮಾಡಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇರುವ ಕಾನೂನನ್ನು ಮತ್ತಷ್ಟು ಬಿಗಿಗೊಳಿಸುತ್ತೇವೆ. ಕೇವಲ ಕಾನೂನು ಜಾರಿ ಮಾಡುವುದರಿಂದ ಭ್ರೂಣ ಹತ್ಯೆ ಸಮಸ್ಯೆ ಬಗೆಹರಿಯುವುದಿಲ್ಲ. ಹೆಣ್ಣು ಎನ್ನುವ ಕಾರಣಕ್ಕೆ ಕೊಲೆ ಮಾಡುತ್ತಾರೆ ಎಂದರೆ ಇವರದು ಎಂತಹ ಮನಸ್ಥಿತಿ. ಇದು ಹೇಯ ಕೃತ್ಯ ಎಂದರು.
ರಾಜ್ಯ ಮಟ್ಟದಲ್ಲಿ ತನಿಖೆ: ಇದು ರಾಜ್ಯಾದ್ಯಂತ ಇರುವ ವ್ಯವಸ್ಥಿತ ಜಾಲ. ಭ್ರೂಣ ಹತ್ಯೆ ತಡೆಯಲು ಅಧಿಕಾರಿಗಳು ವಿಫಲ ಆಗಿದ್ದಾರೆ. ಭ್ರೂಣ ಹತ್ಯೆ ಮೈಸೂರು, ಮಂಡ್ಯ, ಬೆಂಗಳೂರು, ದಾವಣಗೆರೆ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಪಿಸಿದೆ. ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಯಲ್ಲಿ ತನಿಖೆ ಮಾಡುವುದರಿಂದ ಪ್ರಯೋಜನ ಆಗುವುದಿಲ್ಲಘಿ. ಹಾಗಾಗಿ ಇದು ರಾಜ್ಯಮಟ್ಟದಲ್ಲಿ ಸಮಗ್ರ ತನಿಖೆ ಆಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಬಳಿ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು,'' ಎಂದು ಹೇಳಿದರು.
ಟಿಎಚ್‌ಒ ತರಾಟೆ:
ಇದೇ ವೇಳೆ ತಾಲೂಕು ಆರೋಗ್ಯಾಧಿಕಾರಿ ರಾಜೇಶ್ವರಿ ಅವರನ್ನು ಸಚಿವ ದಿನೇಶ್ ಗುಂಡೂರಾವ್ ತರಾಟೆ ತೆಗೆದುಕೊಂಡರು. ಎಷ್ಟು ವರ್ಷದಿಂದ ಆಸ್ಪತ್ರೆ ನಡೆಯುತ್ತಿದೆ? ಭ್ರೂಣ ಹತ್ಯೆ ನಡೆದಿರುವುದು ಯಾಕೆ ನಿಮ್ಮ ಗಮನಕ್ಕೆ ಬಂದಿಲ್ಲ? ನನಗೆ ಸತ್ಯ ಹೇಳಿ. ಹೀಗ್ಯಾಕೆ ನೋಟಿಸ್ ಅಂಟಿಸಿದ್ದೀರಾ? ನಿಮಗೆ ಇಲ್ಲಿ ಆಸ್ಪತ್ರೆ ಇತ್ತು ಅಂತಾ ಗೊತ್ತಿರಲಿಲ್ವಾ? ಇದು ಗಂಭೀರವಾದ ಪ್ರಕರಣ. ಇಲ್ಲಿ ಸುಳ್ಳು ಹೇಳಬೇಡಿ ಎಂದು ತರಾಟೆ ತೆಗೆದುಕೊಂಡರು.












Click it and Unblock the Notifications