• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಬಿನಿಯಿಂದ ನದಿಗೆ ಹೆಚ್ಚುವರಿ ನೀರು... ನಂಜನಗೂಡಲ್ಲಿ ಪ್ರವಾಹದ ಭಯ

|

ಮೈಸೂರು, ಆಗಸ್ಟ್ 9: ಕೇರಳದ ವೈನಾಡು ಸೇರಿದಂತೆ ಎಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಕಬಿನಿ, ತಾರಕ ಜಲಾಶಯ ಭರ್ತಿಯಾಗಿರುವ ಹಿನ್ನಲೆಯಲ್ಲಿ ಸುಮಾರು 80 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ತಗ್ಗು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ನಂಜನಗೂಡು ಹಾಗೂ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಲವು ಗ್ರಾಮಗಳು ಜಲಾವೃತವಾಗಿವೆ.

ಕ್ಷಣ ಕ್ಷಣಕ್ಕೂ ಏರುತ್ತಿದ್ದಾಳೆ ನೇತ್ರಾವತಿ, ತೀರದ ಮನೆಗಳ ಪಾಡೇನು?

ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತಹಶೀಲ್ದಾರ್ ಜಲಾವೃತವಾಗುವ ಕಬಿನಿ ನದಿಯ ಎರಡೂ ದಡದಲ್ಲಿ ವಾಸಿಸುತ್ತಿರುವ ಪ್ರದೇಶಕ್ಕೆ ಅಧಿಕಾರಿ ಮತ್ತು ಸಿಬ್ಬಂದಿಯೊಡನೆ ತೆರಳಿ ಜನರು ತಮ್ಮ ಆಸ್ತಿಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ಜತೆಗೆ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿರುವ ಗಿರಿಜಾ ಕಲ್ಯಾಣ ಮಂಟಪದಲ್ಲಿ ಹಾಗೂ ಬೊಕ್ಕಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗಂಜಿ ಕೇಂದ್ರ ತೆರೆಯಲಾಗಿದೆ. ತುರ್ತು ಆರೋಗ್ಯ ಕೇಂದ್ರ ತೆರೆದು ವೈದರನ್ನು ನಿಯೋಜಿಸಿ ಗ್ರಾಮಸ್ಥರಿಗೆ ನೆರವು ನೀಡಲು ವ್ಯವಸ್ಥೆ ಮಾಡಲಾಗಿದೆ. ಮುಳುಗಡೆಯಾಗುವ ತಾಲೂಕಿನ ಕತ್ವಾಡಿಪುರ, ಹೆಜ್ಜಿಗೆ, ಬೊಕ್ಕಹಳ್ಳಿ, ಕುಳ್ಳಂಕ್ಕನಹುಂಡಿ ನಗರದ ಹಳ್ಳದಕೇರಿ ಬಡಾವಣೆ ಸೇರಿದಂತೆ ನದಿಪಾತ್ರದಲ್ಲಿರುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ.

ಬೆಳಗಾವಿ : ಭೀಕರ ಪ್ರವಾಹ, 1.45 ಲಕ್ಷ ಜನರ ಸ್ಥಳಾಂತರ

ಇನ್ನೊಂದೆಡೆ ನಗರದ ಚಾಮಲಾಪುರಹುಂಡಿ, ನೀಲಕಂಠನಗರ ತಾಲೂಕಿನ ಕಪ್ಪುಸೋಗೆ, ಹರದನಹಳ್ಳಿ, ಹೆಮ್ಮರಗಾಲ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭಾರಿ ಮಳೆಯಿಂದಾಗಿ ಮನೆಗಳ ಚಾವಣಿ ಕುಸಿದಿದೆ. ಮನೆಗಳು ಬಿರುಕುಬಿಟ್ಟಿವೆ. ಈ ನಡುವೆ ದೇವಸ್ಥಾನ ಆವರಣದಲ್ಲಿ ತೆರೆದಿರುವ ಗಂಜಿ ಕೇಂದ್ರಕ್ಕೆ ಶಾಸಕರಾದ ಬಿ.ಹರ್ಷವರ್ಧನ್ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಡಗಿನಲ್ಲಿ ರಣ ಮಳೆಗೆ ಒಂದೇ ಕುಟುಂಬದ ನಾಲ್ವರ ಬಲಿ, ಓರ್ವ ಕಣ್ಮರೆ

ರೈಲ್ವೆ ಸೇತುವೆ, ಶ್ರೀ ಶ್ರೀಕಂಠೇಶ್ವರ ದೇವಸ್ಥಾನದ ಬಳಿ ಇರುವ ಸ್ನಾನಘಟ್ಟ ಸೇರಿದಂತೆ ಅಗತ್ಯವಿರುವ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇನ್ನು ಮೈಸೂರು-ಊಟಿ 766 ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಲ್ಲನ ಮೂಲೆ ಮಠದ ಬಳಿ ಮೈಸೂರು- ಊಟಿ ರಸ್ತೆಯು ಜಲಾವೃತವಾಗುವ ಸಾಧ್ಯತೆಯಿರುವುದರಿಂದ ಹೆದ್ದಾರಿ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತಿದೆ. ಇದೀಗ ಮೈಸೂರು- ಊಟಿ ರಸ್ತೆ ನಂಜನಗೂಡು ಸಮೀಪವಿರುವ ರೈಲ್ವೆ ಸೇತುವೆ ಬಳಿ ನದಿ ತುಂಬಿ ಹರಿಯುತ್ತಿದೆ. ಮತ್ತೊಂದೆಡೆ ಶ್ರೀ ಶ್ರೀಕಂಠೇಶ್ವರ ದೇವಸ್ಥಾನ ಬಳಿ ಇರುವ ಹದಿನಾರು ಕಾಲು ಮಂಟಪ ನೀರಿನಲ್ಲಿ ಜಲಾವೃತವಾಗಿದೆ.

English summary
Heavy rains reported in HD kote. About 80,000 cusecs of water are being released from Kabini and Tharaka reservoirs, causing flooding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X