ಈ ಬಜೆಟ್ ನಿಂದ ರೈತರು ಏನೂ ನಿರೀಕ್ಷಿಸಲು ಸಾಧ್ಯವಿಲ್ಲ:ಬಡಗಲಪುರ ನಾಗೇಂದ್ರ
ಮೈಸೂರು, ಫೆಬ್ರವರಿ 8:ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಲಿರುವ ಬಜೆಟ್ ನಿಂದ ರೈತರು ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಈ ಸರ್ಕಾರದಿಂದ ಈ ಹಿಂದೆ ಘೋಷಣೆ ಮಾಡಿದ ಸಾಲಮನ್ನಾದ ಬಗ್ಗೆ ಇನ್ನೂ ಗೊಂದಲವಿದೆ, ಸ್ಪಷ್ಟತೆಯೇ ಇಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಕರ್ನಾಟಕ ಬಜೆಟ್ ಅಧಿವೇಶನ, ಎಚ್ಡಿಕೆ ಬಜೆಟ್ ಮಂಡನೆ, ಬಿಜೆಪಿ ಪ್ರತಿಭಟನೆ : ಚಿತ್ರಗಳು
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಯೋಜಿಸಿದ್ದ ಜಿಲ್ಲಾ ಕಾರ್ಯಕರ್ತರ ಸಭೆ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಈ ಬಾರಿ ಸಾಲ ಮನ್ನಾ ಘೋಷಣೆಯ ನಿರೀಕ್ಷೆಯಲ್ಲಿದ್ದೇವೆ. ಆದರೂ ಪೂರ್ಣಗೊಳ್ಳುವ ಬಗ್ಗೆ ನಂಬಿಕೆ ಇಲ್ಲ. ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಗ್ರಾಮೀಣ ರಸ್ತೆಗಳು ಬಹಳ ಹದಗೆಟ್ಟಿವೆ. ಜನರಿಗೆ ಸಂಬಳ ಕೊಡದ ಪರಿಸ್ಥಿತಿ ಸರ್ಕಾರದ್ದಾಗಿದೆ. ಸರ್ಕಾರ ಆರ್ಥಿಕ ದಿವಾಳಿ ಎದ್ದಿದೆ. ಸಂಸತ್ ಚುನಾವಣೆ ಬರುತ್ತಿರುವುದರಿಂದ ಕೇವಲ ಅದಕ್ಕೋಸ್ಕರ ಬಜೆಟ್ ಆಗಲಿದೆ. ರಾಜ್ಯದಲ್ಲಿ ಬರ ಇದೆ. 156 ಗ್ರಾಮಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಕೊರತೆ ಇದೆ ಇದನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.

ಕೃಷಿ ಉತ್ತೇಜನ, ಯುವಕರಿಗೆ, ಮಹಿಳೆಯರಿಗೆ ಉದ್ಯೋಗ ಸೃಷ್ಟಿಯ ಕಾರ್ಯಸೂಚಿ ಇಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ ಸ್ವರಾಜ್ ಇಂಡಿಯಾದಿಂದ ಅಭ್ಯರ್ಥಿಗಳನ್ನು ಈ ಬಾರಿ ಕಣಕ್ಕಿಳಿಸಲಾಗುವುದು. ರಾಜಕೀಯ ಪಕ್ಷಗಳು ರಾಮ ಮಂದಿರ-ಮಸೀದಿ ಹಾಗೂ ಮೋದಿ-ರಾಹುಲ್ ಗಾಂಧಿ ಎಂಬ ಕಾರ್ಯಸೂಚಿ ಇಟ್ಟುಕೊಂಡು ಲೋಕಸಭಾ ಚುನಾವಣೆ ಎದುರಿಸುತ್ತಿವೆ. ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಜನಪರ ಕಾಳಜಿ ಇಲ್ಲವಾಗಿದೆ ಎಂದು ಟೀಕಿಸಿದರು.
ಡಿಸ್ನಿಲ್ಯಾಂಡ್ ಮಾದರಿಗೆ ವಿರೋಧ
ಡಿಸ್ನಿಲ್ಯಾಂಡ್ ಒಂದು ಮಾಯಾಲೋಕ. ಇದನ್ನು ಮಾದರಿಯಾಗಿಟ್ಟುಕೊಂಡು ಉದ್ಯಾನ ನಿರ್ಮಿಸಿದರೆ ಕೆಆರ್ ಎಸ್ ಅಣೆಕಟ್ಟೆಗೆ ಧಕ್ಕೆ ಉಂಟಾಗಲಿದೆ. ಇದಕ್ಕೆ ನಮ್ಮ ವಿರೋಧವಿದೆ. ಉದ್ಯೋಗ ಸೃಷ್ಟಿ ಮಾಡುತ್ತೇವೆ ಎನ್ನುವುದು ಒಂದು ಭ್ರಮೆ ಎಂದು ನುಡಿದರು.
ರೈತರಿಂದ ಭೂಮಿಯನ್ನು ಕಿತ್ತುಕೊಳ್ಳುವುದು ಸರಿಯಲ್ಲ. ಅವರು ಅದನ್ನೇ ನಂಬಿ ಜೀವನ ಮಾಡುತ್ತಿರುತ್ತಾರೆ. ಅವರಿಂದ ಭೂಮಿ ಖರೀದಿ ಮಾಡಿದ ಮೇಲೆ ನಿವೇಶನ ನೀಡಬೇಕು. ಇಲ್ಲವಾದಲ್ಲಿ ರೈತರ ಭೂಮಿ ಖರೀದಿ ಮಾಡಲು ಹೋಗಬಾರದು ಎಂದು ತಿಳಿಸಿದರು.












Click it and Unblock the Notifications