Get Updates
Get notified of breaking news, exclusive insights, and must-see stories!

ನೇತಾಜಿ ಪ್ರತಿಮೆ ಕೆತ್ತನೆ ಮಾಡಲಿರುವ ಮೈಸೂರಿನ ಅರುಣ್ ಬಗ್ಗೆ ನಿಮಗೆಷ್ಟು ಗೊತ್ತು?

ಮೈಸೂರು, ಜೂನ್ 2: ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ದೆಹಲಿಯ ಇಂಡಿಯಾ ಗೇಟ್ ಬಳಿ ಸ್ಥಾಪಿಸಲು ಕೇಂದ್ರ ಸರಕಾರ ಉದ್ದೇಶಿಸಿದ್ದು, ಇದರ ಕೆತ್ತನೆ ಕೆಲಸವನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಗೆ ವಹಿಸಲಾಗಿದೆ.

ಅರುಣ್ ಯೋಗಿರಾಜ್ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 30 ಅಡಿ ಪ್ರತಿಮೆಯನ್ನು ಕೆತ್ತಲಿದ್ದಾರೆ, ಇದನ್ನು ಇಂಡಿಯಾ ಗೇಟಿನ ಹಿಂದಿನ ಅಮರ್ ಜವಾನ್ ಜ್ಯೋತಿಯ ಹಿಂಭಾಗದ ಭವ್ಯ ಮೇಲಾವರಣದ ಅಡಿಯಲ್ಲಿ ಸ್ಥಾಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದ ಕೇದಾರನಾಥದಲ್ಲಿ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಕೂಡ ಯೋಗಿರಾಜ್ ಕೆತ್ತಿದ್ದರು.

ಈ‌ ಹಿಂದೆ ಅರುಣ್ ಯೋಗಿ ರಾಜ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2 ಅಡಿ ಎತ್ತರದ ನೇತಾಜಿ‌ ಪ್ರತಿಮೆಯನ್ನು ಉಡುಗೊರೆಯಾಗಿ‌ ನೀಡಿದ್ದರು. ಅಲ್ಲದೆ, ಇದಕ್ಕಾಗಿ ಕಲಾವಿದರ ಆಯ್ಕೆಗೆ ಜನವರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಕೂಡ ನಡೆಸಲಾಗಿತ್ತು. ಜೊತೆಗೆ ಆರು ಕಲಾವಿದರ ಕಲಾ ಕೌಶಲ್ಯ, ಹಿಂದಿನ‌ ಕೆಲಸ ಹಾಗೂ ಸಾಧನೆಯನ್ನು ಚರ್ಚೆ ಮಾಡಲಾಗಿತ್ತು. ಅಂತಿಮವಾಗಿ 6 ತಲೆಮಾರಿನಿಂದ ಶಿಲ್ಪ ಕಲಾಕೃತಿ ಮಾಡಿಕೊಂಡು ಬಂದಿರುವ ಯೋಗಿರಾಜ್ ಕುಟುಂಬಕ್ಕೆ ಈ ಅವಕಾಶ ಒಲಿದು ಬಂದಿದೆ.

ದಕ್ಷಿಣ ಭಾರತದ ಖ್ಯಾತ ಶಿಲ್ಪಿ

ದಕ್ಷಿಣ ಭಾರತದ ಖ್ಯಾತ ಶಿಲ್ಪಿ

ಅರುಣ್ ಯೋಗಿ ದಕ್ಷಿಣ ಭಾರತದ ಪ್ರಖ್ಯಾತ ಶಿಲ್ಪಿ. ಮೈಸೂರಿನ ಪ್ರತಿಭೆ ಎಂಬುದು ರಾಜ್ಯಕ್ಕೆ ಸಿಕ್ಕ ಹೆಮ್ಮೆ. ಇವರ ತಂದೆ ಬಿ.ಎಸ್.ಯೋಗಿರಾಜ್. ಇವರು ಕೂಡ ಪ್ರಖ್ಯಾತ ಶಿಲ್ಪಿ. ಯೋಗಿರಾಜ್ ಕುಟುಂಬ 6 ತಲೆಮಾರಿನಿಂದ ಈ ವೃತ್ತಿ ಮಾಡಿಕೊಂಡು ಬರುತ್ತಿದೆ. ಇತ್ತೀಚೆಗೆ ಅರುಣ್ ಯೋಗಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ 35 ಟನ್ ತೂಗುವ 31 ಅಡಿ ಎತ್ತರದ ಏಕಶಿಲೆಯ ವಿಶಿಷ್ಠ ಮೂರ್ತಿ ನಿರ್ಮಾಣ ಮಾಡಿದ್ದರು. ಇದನ್ನು ಕೆ.ಆರ್​ ನಗರದ ಚುಂಚನಕಟ್ಟೆ ಐತಿಹಾಸಿಕ ಶ್ರೀರಾಮ ದೇವಸ್ಥಾನದ ಎದುರು ಪ್ರತಿಷ್ಠಾಪಿಸಲಾಗಿದೆ.

ಶ್ರೀ ಶಂಕರಾಚಾರ್ಯರ ಪ್ರತಿಮೆ

ಕೇದಾರನಾಥದಲ್ಲಿರುವ 12 ಅಡಿ ಎತ್ತರವಿರುವ ಸುಮಾರು 28 ಟನ್ ತೂಕದ ಏಕ ಶಿಲಾ ಆದಿ ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆ ಸದ್ಯ ಎಲ್ಲರ ಆಕರ್ಷಣೀಯ ಕೇಂದ್ರಬಿಂದು ಆಗಿದೆ. 12 ಅಡಿ ಎತ್ತರದ ಆದಿ ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರೇ ನಿರ್ಮಿಸಿದ್ದರು. ಪ್ರತಿಮೆ ಕೆತ್ತನೆ ಮಾಡಲು ಕೇಂದ್ರ ಸರ್ಕಾರ ಇವರಿಗೆ ಜವಾಬ್ದಾರಿ ವಹಿಸಿತ್ತು. ಅದರಂತೆ ಸುಂದರವಾದ ಪ್ರತಿಮೆ ಕೆತ್ತನೆ ಮಾಡಿ ಸೈ ಎನಿಸಿಕೊಂಡಿದ್ದರು. ಅದನ್ನು ಪ್ರಧಾನಿ ನರೇಂದ್ರ ಮೋದಿ ಅದರ ಉದ್ಘಾಟನೆ ಮಾಡಿದ್ದರು.


"ಶಂಕರಾಚಾರ್ಯರ ಪ್ರತಿಮೆ ಮಾಡಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದೆ ಭಾವಿಸುವೆ. ಇದಕ್ಕೆ ಏಳು ಕಲಾವಿದರು ಸಹಕಾರ ನೀಡಿದ್ದಾರೆ. ನಿತ್ಯ 15 ಗಂಟೆ ಇದಕ್ಕಾಗಿ ನಾವೆಲ್ಲ ಕೆಲಸ ಮಾಡಿದ್ದೆವು. 2020 ರಲ್ಲಿ ಈ ಪ್ರಾಜೆಕ್ಟ್ ನಮಗೆ ಸಿಕ್ಕಿತ್ತು. ‌ಸತತ 9 ತಿಂಗಳ‌ ಕಾಲ ಅವಿರತ ಶ್ರಮದ ಫಲವಾಗಿ ಪ್ರತಿಮೆ ಕಾರ್ಯ ಪೂರ್ಣಗೊಂಡಿತು. ಕೇದಾರನಾಥದಲ್ಲಿ ಒಂದು ತಿಂಗಳ ಕಾಲ ಇದ್ದು, ಪ್ರತಿಮೆ ಪ್ರತಿಷ್ಠಾಪಿಸಿ ಬಂದಿದ್ದೆವು. ನಮ್ಮ ಕೆಲಸ ನೋಡಿ ಸ್ವತಃ ಉತ್ತರಾಖಂಡದ ಸಿಎಂ ಮೆಚ್ಚುಗೆ ಸೂಚಿಸಿ ನಮಗೆ ಸನ್ಮಾನ ಮಾಡಿದ್ದರು," ಎಂದು ಅರುಣ್ ಯೋಗಿರಾಜ್ ಸ್ಮರಿಸುತ್ತಾರೆ.

ಇನ್ನು ನೇತಾಜಿ ಪ್ರತಿಮೆ, ಏಕಶಿಲಾ ಗ್ರಾನೆಟ್‌ನಲ್ಲಿ ತಲೆ ಎತ್ತಲಿದೆ. ಇದಕ್ಕಾಗಿ ವಿವಿಧ ವಿಭಾಗಗಳ ದೊಡ್ಡ ಸಮಿತಿಯೇ ರಚನೆಯಾಗಿದೆ. ಆ ಸಮಿತಿ ಯಾವ ಶೈಲಿಯಲ್ಲಿ ಯಾವ ರೂಪದಲ್ಲಿ ಪ್ರತಿಮೆ ಇರಬೇಕೆಂಬುದನ್ನು ವರದಿ ನೀಡಿದ ಬಳಿಕ ಕೆತ್ತನೆ ಕೆಲಸ ಶುರುವಾಗಲಿದೆ.

ನನಗೆ ಸಿಕ್ಕ ದೊಡ್ಡ ಜವಾಬ್ದಾರಿ

ನನಗೆ ಸಿಕ್ಕ ದೊಡ್ಡ ಜವಾಬ್ದಾರಿ

ಇಂಡಿಯಾ ಗೇಟ್ ಬಳಿ ನೇತಾಜಿ ಪ್ರತಿಮೆ ಸ್ಥಾಪಿಸಬೇಕೆಂಬುದು ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆ. ಇದಕ್ಕಾಗಿ ಕಲಾವಿದರನ್ನು ಆಯ್ಕೆ ಮಾಡಲೆಂದ ಸಂಸ್ಕೃತಿ ಸಚಿವಾಲಯ ಹಾಗೂ ಎನ್ ಜಿಎಂಎ (ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್) ಸಮಿತಿ ರಚಿಸಿತ್ತು. ದೇಶದ ನಾನಾ ಭಾಗದ ಖ್ಯಾತ ಆರು ಕಲಾವಿದರು ಇದಕ್ಕಾಗಿ ಆಯ್ಕೆಯಾಗಿದ್ದರು. ದಕ್ಷಿಣ ಭಾರತವನ್ನು ಪ್ರತಿನಿಧಿಸಿದ್ದ ಏಕೈಕ‌ ಕಲಾವಿದನೆಂದರೆ ಅದು ಅರುಣ್ ಯೋಗಿರಾಜ್ ಆಗಿದ್ದರು. ಹಿಂದೆ ಶಂಕರಾಚಾರ್ಯರ ಪ್ರತಿಮೆಯನ್ನು ಅರುಣ್ ರಚಿಸಿದ್ದರು. ಇದನ್ನು ಗಮನಿಸಿದ್ದ ನರೇಂದ್ರ ಮೋದಿ ಅವರು ನೇತಾಜಿ ಪ್ರತಿಮೆ ಸ್ಥಾಪಿಸುವ ಅವಕಾಶವನ್ನು ಅರುಣ್ ಯೋಗಿರಾಜ್ ಗೆ‌ ನೀಡಿದ್ದಾರೆ.

" ಇದೊಂದು ನನಗೆ ಸಿಕ್ಕ ದೊಡ್ಡ ಜವಾಬ್ದಾರಿ. ಉತ್ತರ ಭಾರತದ ಐದು ಕಲಾವಿದರು ಸೇರಿ ದಕ್ಷಿಣ ಭಾರದಿಂದ ನಾನೊಬ್ಬನೆ ಕಲಾವಿದನಿದ್ದಿದ್ದು. ಪದ್ಮಭೂಷಣ ಪ್ರಶಸ್ತಿ ಪಡೆದ ದಿಗ್ಗಜರು ಹೆಸರು ಇತ್ತು. ಆದರೆ ಕೊನೆಯದಾಗಿ ನನ್ನ ಹೆಸರು ಅಂತಿಮಗೊಂಡಿತು. ಇದು ನಿಜಕ್ಕೂ ಖುಷಿ ವಿಚಾರ. ನರೇಂದ್ರ ಮೋದಿ ಅವರು ಸಾಕಷ್ಟು ಪ್ರೋತ್ಸಾಹ ನೀಡಿದರು. ನಾನು ಈ ಹಿಂದೆ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ಉಡುಗೊರೆ ನೀಡಿದಾಗ ಅದನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಅವರ ಹೃದಯ ವೈಶಾಲ್ಯತೆ ದೊಡ್ಡದು " ಎಂದು ಅರುಣ್ ಯೋಗಿರಾಜ್ ತಿಳಿಸಿದ್ದಾರೆ.

ಎಲ್ಲರಿಗೂ ಇಂತಹ ಅವಕಾಶ ಸಿಗಲ್ಲ

ಎಲ್ಲರಿಗೂ ಇಂತಹ ಅವಕಾಶ ಸಿಗಲ್ಲ

ಯಾವ ಕಲಾವಿದರಿಗೂ ಅಷ್ಟು ಸುಲಭವಾಗಿ ಇಂತಹ ಅವಕಾಶ ಸಿಗಲ್ಲ, ಇಂಡಿಯಾ ಗೇಟ್ ನೋಡಬೇಕೆಂಬುದು ಎಲ್ಲರ ಕನಸಾಗಿರುತ್ತದೆ. ಅಂತಹ ಜಾಗದಲ್ಲಿ ನನಗೆ ಕಲಾಕೃತಿ ಮಾಡಲು ಅವಕಾಶ ಸಿಕ್ಕಿರುವುದೇ ಒಂದು ಹೆಮ್ಮೆ. ಈ ವೇಳೆ ನಮ್ಮ ತಂದೆ ಬಿ.ಎಸ್.ಯೋಗಿರಾಜ್ ಶಿಲ್ಪಿ ಅವರನ್ನು ನೆನಪಿಸಿಕೊಳ್ಳುತ್ತೇನೆ" ಎಂದು ಅರುಣ್ ಯೋಗಿರಾಜ್ ತಿಳಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+