ಪ್ರತಿ ಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಿ, ಮೂಕಪ್ರಾಣಿಗಳ ದಾಹ ತಣಿಸಿ: ಸಾಲುಮರದ ತಿಮ್ಮಕ್ಕ
ಮೈಸೂರು, ಜೂನ್. 05: ವಿಶ್ವವೇ ಇಂದು ಪರಿಸರ ದಿನಾಚರಣೆ ಆಚರಿಸುತ್ತಿದೆ. ರಾಜ್ಯದಲ್ಲಿಯೂ ಪರಿಸರ ದಿನವನ್ನು ಆಚರಿಸಿದ್ದು, ಪರಿಸರ ಎಂದ ಕೂಡಲೇ ನೆನಪಾಗುವ ರಾಜ್ಯದ ಪ್ರಮುಖ ಹೆಸರು ಸಾಳುಮರದ ತಿಮ್ಮಕ್ಕ ಅವರು, ಈ ದಿನ ಕೆಲವು ಕಿವಿಮಾತು ಹೇಳಿದ್ದಾರೆ. "ಪರಿಸರ ಸಂರಕ್ಷಣೆ ಎಂದರೆ ಸಸಿ ನೆಡುವುದು ಮಾತ್ರವಲ್ಲದೆ ಪ್ರತಿ ಗ್ರಾಮಗಳಲ್ಲಿ ಮೂಕ ಪ್ರಾಣಿಗಳಿಗಾಗಿ ಕಲ್ಯಾಣಿ ನಿರ್ಮಿಸಬೇಕು" ಎಂದು ಸೂಚಿಸಿದ್ದಾರೆ.
ಹುಣಸೂರಿನ ಬಿಳಿಕೆರೆಯ ಫ್ರೌಢಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, " ಈ ಹಿಂದೆ ಹಳ್ಳಿಗಳಲ್ಲಿ ಕಲ್ಯಾಣಿ, ಕೆರೆ - ಕಟ್ಟೆಗಳಿದ್ದವು. ಆದರೆ, ಅಭಿವೃದ್ದಿ ನೆಪದಲ್ಲಿಅವೆಲ್ಲಾ ಮುಚ್ಚಿ ಹೋಗಿವೆೆ. ಇನ್ನಾದರೂ ಕಲ್ಯಾಣಿಗಳನ್ನು ನಿರ್ಮಿಸಿ, ಮೂಕಪ್ರಾಣಿಗಳ ದಾಹ ತಣಿಸಲು ಮುಂದಾಗಿ" ಎಂದು ಮನವಿ ಮಾಡಿದ್ದಾರೆ.

ಹಳ್ಳಿಗಳಲ್ಲಿ ಬೋರ್‌ವೆಲ್‌ಗಳ ಬದಲು ಹೆಚ್ಚು ತೆರೆದ ಕೆರೆ, ಬಾವಿಗಳನ್ನು ನಿರ್ಮಿಸಿಕೊಳ್ಳಿ, ಶಾಲಾ ಮಕ್ಕಳು ಹಾಗೂ ಸಂಘ, ಸಂಸ್ಥೆಗಳು, ಸಾರ್ವಜನಿಕರು ಮರಗಳನ್ನು ಬೆಳೆಸುವ ಮೂಲಕ ಪರಿಸರಕ್ಕೆ ನಿಮ್ಮದೇ ಆದ ಕೊಡುಗೆ ನೀಡಬೇಕು. ಮರ ಗಿಡಗಳನ್ನು ಬೆಳೆಸುವ ಜೊತೆ ಜೊತೆಗೆ ಕಲ್ಯಾಣಿ, ಕೆರೆ ಕಟ್ಟೆಗಳನ್ನು ನಿರ್ಮಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಹಾಜರಿದ್ದ ಸಾಲುಮರದ ತಿಮ್ಮಕ್ಕರವರ ದತ್ತುಪುತ್ರ ಉಮೇಶ್ ಮಾತನಾಡಿ "ಭೂಮಿಯ ತಾಪಮಾನವೆಂಬುದು ಇಂದು ಜಗತ್ತಿನ ಸಮಸ್ಯೆಯಾಗಿದೆ. ಜಗತ್ತಿಗೆ ಸಂಸ್ಕಾರ ಕಲಿಸಿಕೊಟ್ಟ ಭಾರತವು ಪರಿಸರಕ್ಕೆ ಆದ್ಯತೆ ನೀಡುವುದನ್ನು ಕಡೆಗಣಿಸಿದ್ದರಿಂದ ಮಲಿನ ನಗರಗಳೆಂಬ ಹಣೆಪಟ್ಟಿ ಹೊರುತ್ತಿದೆ. ಅಭಿವೃದ್ದಿ ಹೆಸರಿನಲ್ಲಿ ಪರಿಸರಕ್ಕೆ ಹಾನಿಯಾಗುತ್ತಿದೆ. ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಯದಿದ್ದಲ್ಲಿ ದೇಶ ಸಂಕಷ್ಟಕ್ಕೆ ತಲುಪಲಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮುಮದುವರೆದು, ಅನಕ್ಷರಸ್ಥೆಯಾದರೂ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಮರಗಳನ್ನು ಮಕ್ಕಳಂತೆ ಬೆಳೆಸಿದ್ದು, ವಿಶ್ವಕ್ಕೆ ಪರಿಸರ ಸಂರಕ್ಷಣೆಯ ಪಾಠ ಕಲಿಸಿದ್ದಾರೆ. ಅವರಂತೆ ಇಂದಿನ ಮಕ್ಕಳು, ಸಾರ್ವಜನಿಕರು ಕನಿಷ್ಟ 10 ಸಸಿ ನೆಟ್ಟು ಪೋಷಿಸಬೇಕಿದೆ. ಪ್ಲಾಸ್ಟಿಕ್ ಬಳಕೆಯಿಂದ ದೂರವಾಗಬೇಕು. ಇದರ ಜೊತೆಗೆ ಸರ್ಕಾರ ಕಳೆನಾಶಕವನ್ನು ನಿಷೇಧಿಸಬೇಕಿದೆ. ಈ ಬಗ್ಗೆ ಶಾಸಕರು ಸದನದಲ್ಲಿ ಚರ್ಚಿಸಬೇಕು ಎಂದು ಉಮೇಶ್ ಮನವಿ ಮಾಡಿದ್ದಾರೆ.

ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ ಮಕ್ಕಳಂತೆ ಸಸಿನೆಟ್ಟು ಬೆಳೆಸಿ ವಿಶ್ವದ, ಬಿಬಿಸಿಯ ಪ್ರಭಾವಶಾಲಿ ಮಹಿಳೆ ಶತಾಯುಷಿ ಸಾಲುಮರದ ತಿಮ್ಮಕ್ಕ ನಮ್ಮ ನಾಡಿನ ಹೆಮ್ಮೆ. ಇವರ ಸಾಧನೆಯು ಮಕ್ಕಳಿಗೆ ಪ್ರೇರೇಪಣೆಯಾಗಿ ಇವರಂತೆ ಗಿಡಮರ ಬೆಳೆಸಿ ಪರಿಸರಕ್ಕೆ ದೊಡ್ಡ ಕಾಣಿಕೆ ನೀಡಬೇಕು. ಪ್ರಕೃತಿ ಕಲುಷಿತಗೊಳ್ಳುತ್ತಿರುವುದರಿಂದ ಕಾಯಿಲೆಗಳು ಹೆಚ್ಚುತ್ತಿದೆ.ಪರಿಸರ ಸಂರಕ್ಷಣೆಯಲ್ಲಿ ಸಮುದಾಯದ ಸಹಭಾಗಿತ್ವ ಮುಖ್ಯ ಎಂದಿದ್ದಾರೆ.












Click it and Unblock the Notifications