ಮೇ 26ರಿಂದ ಮೈಸೂರು ಅರಮನೆಗೆ ಪ್ರವೇಶ ನಿರ್ಬಂಧ
ಮೈಸೂರು, ಮೇ 25 : ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಮೇ 26ರಿಂದ 28ರವರೆಗೆ ಪ್ರವಾಸಿಗರು ಅರಮನೆಗೆ ಭೇಟಿ ನೀಡುವಂತಿಲ್ಲ.
ಯದುವಂಶದ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟಾಭಿಷೇಕ ಮಹೋತ್ಸವ ಮೇ.28ರಂದು ಅಂಬಾವಿಲಾಸ ಅರಮನೆಯಲ್ಲಿ ನಡೆಯಲಿದೆ. ಆದ್ದರಿಂದ ಜಿಲ್ಲಾಡಳಿತ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದೆ. [ಮೇ.28ರಂದು ಯದುವೀರ ಅರಸ್ ಪಟ್ಟಾಭಿಷೇಕ]

ಮೇ 26ರ ಮಂಗಳವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯ ತನಕ ಸಾರ್ವಜನಿಕರು ಅರಮನೆಗೆ ಭೇಟಿ ನೀಡಬಹುದಾಗಿದೆ. ಮೇ 27ರ ಬುಧವಾರ ಮತ್ತು ಮೇ 28ರ ಗುರುವಾರ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. [ಯುವರಾಜ ಯದುವೀರ್ ಪರಿಚಯ ಓದಿ]
ಪಟ್ಟಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಮೇ 27ರಿಂದ ಅರಮನೆಯಲ್ಲಿ ವಿವಿಧ ಖಾಸಗಿ ಕಾರ್ಯಕ್ರಮಗಳಿವೆ. ಆದ್ದರಿಂದ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಬೇಕು ಎಂದು ರಾಣಿ ಪ್ರಮೋದಾ ದೇವಿ ಅವರು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಪತ್ರದ ಅನ್ವಯ ಈ ಕ್ರಮವನ್ನು ಕೈಗೊಳ್ಳಲಾಗಿದೆ.
2013ರ ಡಿಸೆಂಬರ್ 10ರಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿಧಿವಶರಾದ ನಂತರ ಯದುವಂಶದ ಉತ್ತರಾಧಿಕಾರಿ ಯಾರು? ಎಂಬ ಚರ್ಚೆ ಆರಂಭವಾಗಿತ್ತು. ಫೆಬ್ರವರಿಯಲ್ಲಿ ಯದುವೀರ್ ಗೋಪಾಲರಾಜ ಅರಸ್ ಅವರನ್ನು ದತ್ತು ತೆಗೆದುಕೊಳ್ಳುವುದರೊಂದಿಗೆ ಈ ಚರ್ಚೆಗೆ ತೆರೆ ಬಿದ್ದಿತ್ತು. ಈಗ ಪಟ್ಟಾಭಿಷೇಕ ನಡೆಯುತ್ತಿದೆ.












Click it and Unblock the Notifications