ಮೈಸೂರಿನಲ್ಲಿ ಉಚಿತ ಕುಡಿತ ಬಿಡಿಸುವ ಶಿಬಿರಕ್ಕೆ ಚಾಲನೆ: ಇಲ್ಲಿದೆ ವಿವರ
ಮೈಸೂರು, ಡಿಸೆಂಬರ್ 09: ಬಸವಮಾರ್ಗ ವ್ಯಸನ ಮುಕ್ತ ಕೇಂದ್ರದ ವತಿಯಿಂದ ಮೈಸೂರಿನ ಹೆಬ್ಬಾಳ್ ಇಂಡಸ್ಟ್ರಿಯಲ್ ಬಡಾವಣೆಯಲ್ಲಿ ಆಯೋಜಿಸಿರುವ 45ನೇ 10 ದಿನಗಳ ಸಂಪೂರ್ಣ ಉಚಿತ ಕುಡಿತ ಬಿಡಿಸುವ ಶಿಬಿರಕ್ಕೆ ಚಾಲನೆ ನೀಡಲಾಗಿದೆ. ಜಿಎಸ್ಎಸ್ ಯೋಗ ಕೇಂದ್ರದ ಸಂಸ್ಥಾಪಕರಾದ ಶ್ರೀಹರಿ ಜ್ಯೋತಿ ಬೆಳಗಿಸುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶ್ರೀಹರಿ ಜ್ಯೋತಿ ಅವರು, ಈ ಜಗತ್ತಿನಲ್ಲಿ ನಮ್ಮದೇನೋ ಪಾತ್ರ, ಕೆಲಸ ಇದೆ ಎಂದು ಪರಮಾತ್ಮ ನಮ್ಮನ್ನು ಸೃಷ್ಟಿ ಮಾಡಿ ಕಳುಹಿಸಿದ್ದಾರೆ. ಈ ಸಮಯ ವ್ಯರ್ಥವಾಗಬಾರದು. ಈ ಜನ್ಮವನ್ನು ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಮೀಸಲಿಡಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಯಾವುದೋ ಕೆಟ್ಟ ಪರಿಸರ ಅಥವಾ ಸಹವಾಸದಿಂದ ನೀವು ವ್ಯಸನಕ್ಕೆ ದಾಸರಾಗಿದ್ದೀರಿ. ಈ ವ್ಯಸನದಿಂದ ಹೊರ ಬರಲೇಬೇಕು ಎಂದು ತೀರ್ಮಾನ ಮಾಡಿ ನೀವೇ ಸ್ವಯಂ ಪ್ರೇರಿತರಾಗಿ ಈ ಶಿಬಿರಕ್ಕೆ ಬಂದಿದ್ದೀರಿ. ಶಿಬಿರಕ್ಕೆ ಬಂದಿದ್ದೀರಿ ಎಂದರೆ ಕುಡಿತವನ್ನು ಬಿಡಲೇಬೇಕು ಎಂದು ಸಂಕಲ್ಪ ಮಾಡಿಕೊಂಡೆ ನೀವು ಬಂದಿದ್ದೀರಿ. ಎಂದ ಮೇಲೆ ಆ ಸಂಕಲ್ಪದ ಮುಂದೆ ಕುಡಿತದ ಚಟ ಯಾವುದು ದೊಡ್ಡದಲ್ಲ ಎಂದರು.
ಕೆಲವೇ ಕೆಲವು ಸರಳ ಉತ್ತಮ ಆಚರಣೆಗಳನ್ನು ಪಾಲಿಸುವ ಮೂಲಕ ನಾವು ಕುಡಿತದ ಚಟದಿಂದ ಹೊರ ಬರಲು ಸಾಧ್ಯವಿದೆ ಎಂದು ಕಿವಿ ಮಾತುಗಳನ್ನು ಹೇಳಿದರು. ಅಲ್ಲದೇ ಕೆಲವು ನೈಜ ನಿದರ್ಶನಗಳನ್ನು ಉದಾಹರಣೆಯಾಗಿ ನೀಡಿ ಕುಡಿತದಿಂದ ಯಾವೆಲ್ಲ ಸಮಸ್ಯೆಗಳು ಹೇಗೆ ನಮ್ಮನ್ನು ಅದೋಗತಿಗೆ ತರುತ್ತದೆ ಅದರಿಂದ ಹೊರ ಬರುವ ಉಪಾಯಗಳು ಹೇಗೆ ಎಂಬುದನ್ನು ಶ್ರೀಹರಿ ಅವರು ಮಾರ್ಗದರ್ಶನ ಮಾಡಿದರು.

ಬಸವಮಾರ್ಗ ಫೌಂಡೇಶನ್‌ನ ಸಂಸ್ಥಾಪಕರಾದ ಬಸವಣ್ಣ ಮಾತನಾಡಿ, ನಮ್ಮ ತಾತ ಸೋನಿ ಎಂ ಕರಿಗೌಡ ಅವರು ನಮಗೆ ಬಾಲ್ಯದಲ್ಲಿ ಉತ್ತಮ ಕಥೆಗಳನ್ನು ಹೇಳುವ ಮೂಲಕ ನಮ್ಮನ್ನು ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದು ಶ್ರಮಿಸಿದರು. ಆದರೆ ಅವರ ಸಾವು ಹಾಗೂ ವ್ಯಾಪರದಲ್ಲಿನ ಸೋಲಿನಿಂದ ನಾನು ಕೂಡ ಕುಡಿತಕ್ಕೆ ದಾಸನಾಗಿದ್ದೆ. ಸತತ 17 ವರ್ಷಗಳ ಕಾಲ ಈ ವ್ಯಸಕ್ಕೆ ಬಲಿಯಾಗಿದ್ದೆ. ಇದರಿಂದ ಸಮಾಜದಲ್ಲಿ ಯಾವ ಬೆಲೆಯೂ ನನಗೆ ಸಿಗುತ್ತಿರಲಿಲ್ಲ. ಕೊನೆಗೆ ಕುಡಿತ ಬಿಡಬೇಕು ಎಂದು ದೊಡ್ಡ ಸಂಕಲ್ಪ ಮಾಡಿ ಅದರಿಂದ ಹೊರ ಬಂದೆ ಎಂದು ತಮ್ಮ ಸಂಕಷ್ಟದ ಜೀವನವನ್ನು ಸ್ಮರಿಸಿದರು.
ಈ ಬಳಿಕ ಚಿಂತಿಸಿ ತನ್ನಂತೆ ಇತರೆ ವ್ಯಸನಿಗಳನ್ನು ಈ ದಾಸ್ಯದಿಂದ ಹೊರ ತರಬೇಕು ಎಂದು ಸಂಕಲ್ಪ ಮಾಡಿ ಶ್ರಮಿಸುತ್ತಿದ್ದೇನೆ. ಇದುವರೆಗೂ 45 ಶಿಬಿರಗಳನ್ನು ಆಯೋಜಿಸಿ ಸಾವಿರಾರು ಜನರು ಈ ಶಿಬಿರದ ಲಾಭ ಪಡೆದಿದ್ದಾರೆ. ಅವರಂತೆ ನೀವು ಕೂಡ ಬದಲಾವಣೆ ಆಗಬೇಕು. ಶಿಬಿರದಲ್ಲಿ ದೊರಕುವ ಪೌಷ್ಠಿಕ ಆಹಾರ, ಯೋಗ, ಸಂತ್ಸಂಗ ಕಾರ್ಯಕ್ರಮಗಳು, ಭಜನೆ, ಹಾಸ್ಯ, ವ್ಯಕ್ತಿತ್ವ ವಿಕಸನ ತರಗತಿಗಳನ್ನು ಸದ್ಬಳಕೆ ಮಾಡಿ ಕೊಳ್ಳಬೇಕು. ಆ ಮೂಲಕ ಈ ಚಟದಿಂದ ಹೊರ ಬಂದು ನಿಮ್ಮ ಮನೆ ಹಾಗೂ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಬಾಳಬೇಕು. ಇದೆ ನಮ್ಮ ಸಂಸ್ಥೆಯ ಬಹುದೊಡ್ಡ ಆಶಯವಾಗಿದೆ ಎಂದು ತಿಳಿಸಿದರು.
ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜ ಯೋಗ ಶಿಕ್ಷಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಸಂಧ್ಯಾ ಮಾತನಾಡಿ, ಶಿಬಿರಕ್ಕೆ ಬಂದಿರಿವ ಎಲ್ಲರೂ ಕೂಡ ಒಳ್ಳೆಯವರೇ, ಆದರೆ ಯಾವುದೋ ಒಂದು ಕಾರಣದಿಂದ ಈ ವ್ಯಸನಕ್ಕೆ ದಾಸರಾಗಿದ್ದೀರಿ ಅಷ್ಟೆ. ಆದರೆ ಇದು ಜೀವನವಲ್ಲ. ಜೀವನದ ಪ್ರಮುಖ ಉದ್ದೇಶ ಪರಮಾತ್ಮನ ಎಡೆಗೆ ಸಾಗುವುದೇ ಆಗಿದೆ. ಜೀವನದಲ್ಲಿ ಶಾಂತಿ, ತಾಳ್ಮೆ, ವಿವೇಕಾ ಬಹಳ ಮುಖ್ಯ. ಈ ಗುಣಗಳನ್ನು ಪ್ರತಿಯೊಬ್ಬ ಶಿಬಿರಾರ್ಥಿಯೂ ಮೈಗೂಡಿಸಿಕೊಳ್ಳಬೇಕು ಎಂದು ಧ್ಯಾನ ಮಾಡಿಸುವ ಮೂಲಕ ಮಾರ್ಗದರ್ಶನ ಮಾಡಿದರು. ಶಿಬಿರಕ್ಕೆ ರಾಜ್ಯದ ನಾನಾ ಮೂಲೆಗಳಿಂದ 200ಕ್ಕೂ ಹೆಚ್ಚು ಶಿಬಿರಾರ್ಥಿಗಳು ಆಗಮಿಸಿದ್ದಾರೆ.











Click it and Unblock the Notifications