ದೆಹಲಿಯಲ್ಲಿ ಎಲ್ಲಾ ತೀರ್ಮಾನವಾಗಿದೆ; ಸ್ವಲ್ಪ ದಿನ ಕಾಯಿರಿ ಎಂದ ಡಿಕೆಶಿ
ದೆಹಲಿಯಲ್ಲಿ ಎಲ್ಲವೂ ತೀರ್ಮಾನವಾಗಿದೆ. ಸ್ವಲ್ಪ ದಿನ ಕಾಯಿರಿ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ. ನನ್ನ ಕೈ ಬಲ ಪಡಿಸಲು ಸಹಕರಿಸಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮೈಸೂರು ನಗರದಲ್ಲಿ ನಡೆದ ಮೈಸೂರು-ಕೊಡಗು ಜಿಲ್ಲೆಯ ಒಕ್ಕಲಿಗ ಜನಾಂಗದ ಮುಖಂಡರ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಮೈಸೂರಿನಲ್ಲಿ ಒಕ್ಕಲಿಗರ ಬೆಳವಣಿಗೆಗೆ ಸ್ಪಲ್ಪ ಸಮಸ್ಯೆಗಳಿವೆ. ಅದನ್ನು ಮುಂದಿನ ದಿನಗಳಲ್ಲಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ನಿತ್ಯ ಕುಮಾರಸ್ವಾಮಿ ನನ್ನ ಬಗ್ಗೆ, ಚೆಲುವರಾಯಸ್ವಾಮಿ, ಕೆ.ವೆಂಕಟೇಶ್ ಸೇರಿದಂತೆ ಇತರೆ ಸಾಮಾನ್ಯ ಒಕ್ಕಲಿಗ ನಾಯಕರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇಂತಹ ಚುಚ್ಚು ಮಾತುಗಳನ್ನು ಎಷ್ಟು ದಿನ ಸಹಿಸಿಕೊಳ್ಳುವುದು ಎಂದು ಪ್ರಶ್ನಿಸಿದರು.
ಜೆಡಿಎಸ್ ಆಯಸ್ಸು ಮುಗಿದಿದೆ
ಜೆಡಿಎಸ್‌ನ ಆಯುಷ್ಯ ಮುಗಿದಿದೆ. ಬಿಜೆಪಿಯಲ್ಲಿ ಒಕ್ಕಲಿಗರ ನಾಯಕತ್ವ ಬೆಳೆಯಲು ಅವಕಾಶವಿಲ್ಲ. ಹಾಗಾಗಿಯೇ ಕಾಂಗ್ರೆಸ್ ಪಕ್ಷದಲ್ಲಿ ಮೈಸೂರು-ಕೊಡಗು, ಮಂಡ್ಯ, ಹಾಸನ, ತುಮಕೂರು ಸೇರಿದಂತೆ ಇತರೆಡೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಎಂ.ಲಕ್ಷ್ಮಣ್ ಅವರ ಸರಳ ಸಜ್ಜನಿಕೆಯ ಒಬ್ಬ ಸಾಮಾನ್ಯ ಪ್ರಜೆ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದಾರೆ. 47 ವರ್ಷಗಳ ನಂತರ ಒಕ್ಕಲಿಗ ಸಮುದಾಯದ ಲಕ್ಷ್ಮಣ್ ಅವರಿಗೆ ಟಿಕೆಟ್ ನೀಡಿದ್ದೇವೆ. ಈ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಮತದಾರರು ಇರುವುದರಿಂದ ಪೂರ್ಣ ಪ್ರಮಾಣದಲ್ಲಿ ಲಕ್ಷ್ಮಣ್ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಹಾಸನ, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಯಾವ ಕಾರಣಕ್ಕೂ ಗೆಲ್ಲುವುದಿಲ್ಲ. ಮಹಿಳೆಯರಿಗೆ ನೀಡಿರುವ ಯೋಜನೆ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಗುರವಾಗಿ ಮಾತನಾಡಿದ್ದಾರೆ. ಇದರಿಂದ ನಮ್ಮ ಸಮಾಜಕ್ಕೆ ಅವಮಾನವಾಗುವುದಿಲ್ಲವೇ? ನಮ್ಮ ಮನೆಯ ಹೆಣ್ಣು ಮಕ್ಕಳಿಗೂ ಇದು ಅನ್ವಯಿಸುವುದಿಲ್ಲವೇ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎಂಟು ಒಕ್ಕಲಿಗ ಅಭ್ಯರ್ಥಿಗಳಿಗೆ ಅವಕಾಶ ಮಾಡಿ ಕೊಟ್ಟಿದ್ದು, ಈ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ನನ್ನ ನಾಯಕತ್ವಕ್ಕೆ ಈ ಭಾಗದ ಒಕ್ಕಲಿಗರು ಮತ್ತಷ್ಟು ಶಕ್ತಿ ತುಂಬಬೇಕು, ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.












Click it and Unblock the Notifications