ಮೈಸೂರು: ಡೆಂಗ್ಯೂ ಹೆಚ್ಚಳಕ್ಕೆ ಕಾರಣ ಅಧಿಕಾರಿಗಳೇ!
ಮೈಸೂರು ಜಿಲ್ಲೆಯಲ್ಲಿ ಪ್ರತಿದಿನದ ರಕ್ತದ ಮಾದರಿಗಳ ಪರೀಕ್ಷೆಯಲ್ಲಿ ಡೆಂಗ್ಯೂ ಪ್ರಕರಣ ಪತ್ತೆಯಾಗುತ್ತಲೇ ಇದೆ ಎಂಬುದು 'ಒನ್ ಇಂಡಿಯಾ' ನಡೆಸಿದ ಸಮೀಕ್ಷೆಯಲ್ಲಿ ಬಯಲಾಗಿದೆ.
ಮೈಸೂರು, ಮೇ 29 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಖಾಸಗಿ ಆಸ್ಪತ್ರೆಗಳು, ಡಯಾಗ್ನೋಸ್ಟಿಕ್ ಕೇಂದ್ರಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಜಿಲ್ಲೆಯಲ್ಲಿ ನೂರಾರು ಮಂದಿ ಮಾರಕ ಡೆಂಗ್ಯೂಗೆ ತುತ್ತಾಗುತ್ತಿದ್ದಾರೆ.
ಹೌದು, ಮೈಸೂರು ಜಿಲ್ಲೆಯಲ್ಲಿ ಪ್ರತಿದಿನದ ರಕ್ತದ ಮಾದರಿಗಳ ಪರೀಕ್ಷೆಯಲ್ಲಿ ಡೆಂಗ್ಯೂ ಪ್ರಕರಣ ಪತ್ತೆಯಾಗುತ್ತಲೇ ಇದೆ ಎಂಬುದು ಒನ್ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಬಯಲಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಕೇವಲ 31 ಡೆಂಗ್ಯೂ ಪ್ರಕರಣಗಳು ಮಾತ್ರ ಇವೆ, ಆದರೆ ಖಾಸಗಿ ಆಸ್ಪತ್ರೆಗಳು, ಡಯಾಗ್ನೋಸ್ಟಿಕ್ ಸೆಂಟರ್ ಗಳಿಂದ ಪಡೆದ ಮಾಹಿತಿಯನ್ನು ನೋಡಿದರೆ ನೂರಾರು ಮಂದಿ ಮಾಹಾಮಾರಿ ಡೆಂಗ್ಯೂ ಖಾಯಿಲೆಗೆ ತುತ್ತಾಗುತ್ತಿದ್ದಾರೆ.[ಮಹಾರಾಣಿ ಕಾಲೇಜು ವಿದ್ಯಾರ್ಥಿನಿ ಡೆಂಗ್ಯೂಗೆ ಬಲಿ]
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಖಾಸಗಿ ಆಸ್ಪತ್ರೆಗಳು, ಸೆಂಟರ್ ಗಳು ಇವೆಲ್ಲದರ ನಡುವೆ ಪರಸ್ಪರ ಸಮನ್ವಯತೆ ಇಲ್ಲದಿರುವುದು ಇದರಿಂದ ಗೋಚರವಾಗುತ್ತಿದೆ. ಡೆಂಗ್ಯೂ ಪ್ರಕರಣಗಳು ನಿಯಂತ್ರಣದಲ್ಲಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಆದರೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಪ್ರತಿ 10 ಮಂದಿಯ ರಕ್ತಪರೀಕ್ಷೆಯಲ್ಲಿ 2 ಡೆಂಗ್ಯೂ ಪ್ರಕರಣದ ಪಾಸಿಟಿವ್ ಅಂಶಗಳು ಪತ್ತೆಯಾಗುತ್ತಿರುವುದಂತೂ ನಿಜ![ಮಂಡ್ಯದ ನಾಗತಿಹಳ್ಳಿ ಗ್ರಾಮಸ್ಥರನ್ನು ಕಂಗೆಡಿಸಿದ ಜ್ವರ]

ಡೆಂಗ್ಯೂ ತಡೆ ಸಾಧ್ಯವೇ?
ಡೆಂಗ್ಯೂ ಖಾಯಿಲೆಯನ್ನು ಸಂಪೂರ್ಣ ನಿಯಂತ್ರಣದಲ್ಲಿಡಲಾಗಿದ್ದರೂ, ಅದು ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಜಿಲ್ಲಾಡಳಿತದ ಪ್ರಯತ್ನ ಸಾಕಾಗುತ್ತಿಲ್ಲ.
ಖಾಸಗಿ ಆಸ್ಪತ್ರೆಗಳಲ್ಲಿ ಪತ್ತೆಯಾಗುತ್ತಿರುವ ಡೆಂಗ್ಯೂ ಪ್ರಕರಣಗಳ ಮಾಹಿತಿ ಪಡೆಯುವಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಕೆಲ ಖಾಸಗಿ ಆಸ್ಪತ್ರೆಗಳು ಕೂಡ ಆರೋಗ್ಯ ಇಲಾಖೆ ನಮ್ಮಿಂದ ಮಾಹಿತಿ ಪಡೆಯುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಬಹುತೇಕ ಡಯಾಗಗ್ನೊಸ್ಟಿಕ್ ಕೇಂದ್ರಗಳಂತೂ ಎರಡು ವರುಷದ ಹಿಂದೆ ಆರೋಗ್ಯ ಇಲಾಖೆಯಿಂದ ಪತ್ರ ಬಂದಿದ್ದು ಬಿಟ್ಟರೆ ನಂತರ ನಮ್ಮಿಂದ ರಕ್ತದ ಮಾದರಿ ಪರೀಕ್ಷೆ ಮತ್ತು ಡೆಂಗ್ಯೂ, ಚಿಕನ್ ಗುನ್ಯಾ ಪ್ರಕರಣಗಳ ಬಗ್ಗೆಯಾಗಲಿ ಮಾಹಿತಿ ಪಡೆಯುತ್ತಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದೆ.
ಪಲ್ಸ್ ಪೊಲಿಯೋ ರೀತಿಯಲ್ಲೇ ಜನಜಾಗೃತಿಗೆ ಅಗತ್ಯ ಅಭಿಯಾನ ನಡೆದರೆ ಡೆಂಗ್ಯೂ ಇಲ್ಲದಂತೆ ಮಾಡಲು ಸಾಧ್ಯವಿದೆ. ಆದರೆ ಅದನ್ನು ಮಾಡುವ ಇಚ್ಛಾಶಕ್ತಿ ಅಗತ್ಯ ಎನ್ನುತ್ತಾರೆ ನುರಿತ ವೈದ್ಯರು.[ಡೆಂಗ್ಯೂ ಜ್ವರಕ್ಕೆ ಮಹಿಳಾ ಫುಟ್ಬಾಲರ್ ಪೂನಂ ಬಲಿ]
ಪತ್ತೆ ಹೇಗೆ?
ಎನ್ಎಸ್1, ಐಜಿಜಿ,ಐಜಿಎಂ ಎಂಬ ಮೂರು ವಿಧದಲ್ಲಿ ರಕ್ತದ ಮಾದರಿಯನ್ನು ಪರೀಕ್ಷಿಸಲಾಗುತ್ತದೆ. ಇದರಲ್ಲಿ ಎನ್ಎಸ್ 1 ತೀರಾ ಇತ್ತೀಚಿನ ಸೋಂಕು, ನಂತರದ್ದು ಐಜಿಜಿ ಮತ್ತು ಐಜಿಎಂ, ಖಾಸಗಿ ಲ್ಯಾಬ್ಗಳಲ್ಲಿ 10 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಿದರೆ ಒಂದು ಅಥವಾ ಎರಡು ಡೆಂಗ್ಯೂ ಪಾಸಿಟಿವ್ ಅಂಶ ತಿಳಿದುಬರುತ್ತಿದೆ.
ಈ ರೋಗವನ್ನು ಹರಡುವ ಎಡಿಸ್ ಈಜಿಪ್ಟೈ ಸೊಳ್ಳೆಗಳ ಸಂತತಿ ಬೆಳೆಯುವುದನ್ನು ನಿಯಂತ್ರಿಸಬೇಕಿದೆ.

ವ್ಯಾಪಕ ಪ್ರಚಾರ ನಡೆಸುತ್ತಿದ್ದೇವೆ:
ಡೆಂಘ್ಯೂ ಖಾಯಿಲೆ ಬಗ್ಗೆ ವ್ಯಾಪಕ ಪ್ರಚಾರ ನಡೆಸಿದ್ದೇವೆ. ಶಾಲೆಗಳ ಮಕ್ಕಳನ್ನು ಇದರಲ್ಲಿ ಒಳಪಡಿಸಿದ್ದೇವೆ. ಡೆಂಗ್ಯೂ ರೋಗದ ಲಕ್ಷಣಗಳು ಕೆಲವರಲ್ಲಿ ಇದೆಯಾದರೂ ಅದು ನಿಯಂತ್ರಣದಲ್ಲಿದೆ.
ಅದು ಹರಡದಂತೆ ಎಲ್ಲಾ ಕ್ರಮಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೈಗೊಳ್ಳಲಾಗಿದೆ ಎನ್ನುತ್ತಾರೆ ಇಲಾಖಾ ನಿಯಂತ್ರಣಾಧಿಕಾರಿ ಡಾ.ಎ.ಎಸ್ ಚಿದಂಬರ.
ಮುಂಗಾರಿನಲ್ಲಿ ಪ್ರಕರಣ ಜಾಸ್ತಿ
ಸಾಮಾನ್ಯವಾಗಿ ಮುಂಗಾರು ಆರಂಭವಾಗುವ ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಈ ರೋಗವನ್ನು ಹರಡುವ ಸೊಳ್ಳೆಗಳ ಉತ್ಪತ್ತಿ ಹೆಚ್ಚುವುದರಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತದೆ. ಮುಂಗಾರು ಮುಗಿಯುತ್ತಿದ್ದಂತೆ ಪ್ರಕರಣಗಳು ಕಡಿಮೆಯಾಗುತ್ತದೆ.
ಈ ಅವಧಿಯಲ್ಲಿ ಇಲಾಖೆಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತದೆ ಎಂದರು. ಈಗಾಗಲೇ ಕಾರ್ಯ ಪ್ರವೃತ್ತರಾಗಿರುವ ಒಬ್ಬ ಟೆಕ್ನಿಷಿಯನ್ ಮತ್ತು ಇಬ್ಬರು ಸಹಾಯಕರಿರುವ ರ್ಯಾಪಿಡ್ ರೆಸ್ಪಾನ್ಸ್ ಟೀಂನ ಎರಡು ತಂಡ ಪ್ರತಿದಿನ 150 ರಿಂದ 200 ಮನೆಗಳಿಗೆ ತೆರಳಿ ಡೆಂಗ್ಯು ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.[ಡೆಂಗ್ಯೂ ಸೊಳ್ಳೆಯನ್ನು ನಿರ್ನಾಮ ಮಾಡುವ ಗಪ್ಪಿ ಮೀನು!]
ಇವೆಲ್ಲಾ ಕ್ರಮ ಕೈಗೊಂಡರೂ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ನಗರದಲ್ಲಿ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಇತ್ತೀಚೆಗೆ ಮಹಾರಾಣಿ ಕಾಲೇಜಿನ ಸಂಚಿತಾ ಎಸ್. ಆರಾಧ್ಯ ಎಂಬ ವಿದ್ಯಾರ್ಥಿನಿಯೋರ್ವಳು ಸಾವಿಗೀಡಾದ ಘಟನೆ. ಇನ್ನಾದ್ರೂ ನಮ್ಮ ಅಧಿಕಾರಿಗಳು ಈ ಕುರಿತಾಗಿ ತಮ್ಮ ಅಹಂ ಬಿಟ್ಟು ಜನರ ಒಳಿತಿಗಾಗಿ ಶ್ರಮಿಸುವತ್ತ ಗಮನಹರಿಸಬೇಕೆಂಬುದು ನಮ್ಮ ಆಶಯ.












Click it and Unblock the Notifications