ಈ ಬಾರಿಯ ಮೈಸೂರು ದಸರಾ ಪ್ಲಾಸ್ಟಿಕ್ ಮುಕ್ತ
ಮೈಸೂರು, ಆ.19 : ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾದ ಬೆನ್ನಲ್ಲಿಯೇ ಜಿಲ್ಲಾಡಳಿತ ಸಕಲ ರೀತಿಯ ಸಿದ್ಧತೆ ಆರಂಭಿಸಿದೆ. ಈ ಬಾರಿಯ ದಸರಾದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಜಿಲ್ಲಾಡಳಿತ ಮುಂದಾಗಿದ್ದು, ಪ್ಲಾಸ್ಟಿಕ್ ಬಳಸುವವರ ಮೇಲೆ ಸ್ಥಳದಲ್ಲಿಯೇ ದಂಡ ವಿಧಿಸಲು ಕಾರ್ಯಪಡೆಯೊಂದನ್ನು ನಿಯೋಜಿಸಲಾಗುತ್ತದೆ.
ಮೈಸೂರು ನಗರ ಹಾಗೂ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಪ್ರವಾಸಿ ಮತ್ತು ಧಾರ್ಮಿಕ ಕೇಂದ್ರದ ಬಳಿ ಪ್ಲಾಸ್ಟಿಕ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುತ್ತದೆ. ದಸರಾ ಸಂದರ್ಭದಲ್ಲಿ ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿಸಲು ಅಧಿಕಾರಿಗಳ ಪ್ರತ್ಯೇಕ ಪಡೆಯೊಂದು ಕಾರ್ಯನಿರ್ವಹಿಸಲಿದೆ.

ಎಲ್ಲಿ ನಿಷೇಧ : ಜಿಲ್ಲಾಡಳಿತ ಸದ್ಯ ತಯಾರಿಸಿರುವ ಯೋಜನೆ ಅನ್ವಯ ಚಾಮುಂಡಿಬೆಟ್ಟ, ಅರಮನೆ, ವಸ್ತು ಪ್ರದರ್ಶನ, ಮೃಗಾಲಯ, ಬನ್ನಿಮಂಟಪ, ಚಾಮುಂಡಿಬೆಟ್ಟ, ಅರಮನೆ ಅವರಣದ ದೇವಸ್ಥಾನಗಳು, ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ, ಮುಡುಕತೊರೆ ಮಲ್ಲಿಕಾರ್ಜುನಸ್ವಾಮಿ, ತಲಕಾಡಿನ ಪಂಚಲಿಂಗೇಶ್ವರ ದೇವಸ್ಥಾನಗಳು, ಸುತ್ತೂರು ಮಠ, ಕಾವೇರಿ ನದಿ ಸ್ನಾನ ಘಟ್ಟಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುತ್ತದೆ. [ಜಂಬೂ ಸವಾರಿ ಆನೆಗಳ ಬಯೋಡೇಟಾ]
ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕಾರ್ಯಪಡೆವೊಂದನ್ನು ಜಿಲ್ಲಾಡಳಿತ ರಚಿಸಲಿದ್ದು, ನಿಷೇಧಿತ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿದರೆ ಸ್ಥಳದಲ್ಲಿಯೇ ದಂಡ ವಿಧಿಸಲಾಗುತ್ತದೆ. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪೇಪರ್ ಗ್ಲಾಸ್, ಪೇಪರ್ ಪ್ಲೇಟ್‌ಗಳನ್ನು ಬಳಸುವಂತೆ ಜಿಲ್ಲಾಡಳಿತ ಸಲಹೆ ನೀಡಿದೆ.
ದಸರಾ ಸಂದರ್ಭದಲ್ಲಿ ಹೆಚ್ಚು ಜನರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ಉತ್ಪಾದನೆಯಾಗುವ ಕಸದಲ್ಲಿ ಪ್ಲಾಸ್ಟಿಕ್ ಪ್ರಮಾಣವೇ ಹೆಚ್ಚಾಗಿದೆ. ಆದ್ದರಿಂದ ಪ್ಲಾಸ್ಟಿಕ್ ನಿಷೇಧ ಜಾರಿಗೆ ತರಲು ಜಿಲ್ಲಾಡಳಿತ ಮುಂದಾಗಿದೆ. ನಿಷೇಧದ ಕುರಿತು ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗಿದೆ.
ಸೆ.25ರಿಂದ ಅ.4ರ ತನಕ ಈ ಬಾರಿಯ ದಸರಾ ಉತ್ಸವ ನಡೆಯಲಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ದಸರಾವನ್ನು ಉದ್ಘಾಟಿಸಲಿದ್ದಾರೆ. ಈ ಬಾರಿಯ ದಸರಾ ಉತ್ಸವದಲ್ಲಿ ಖಾಸಗಿ ದರ್ಬಾರ್ ಇರುವುದಿಲ್ಲ. [ದಸರಾ ಉದ್ಘಾಟನೆ: ಕಾರ್ನಾಡ್ ಬೇಡ, ಭೈರಪ್ಪ ಇರಲಿ]












Click it and Unblock the Notifications