ಮೈಸೂರು; ಹಸ್ತಪ್ರತಿ, ತಾಳೆಗರಿ ಸಂರಕ್ಷಣೆಗೆ ಡಿಜಿಟಲ್ ರೂಪ!
ಮೈಸೂರು, ಫೆಬ್ರವರಿ 20; 130 ವರ್ಷಗಳ ಇತಿಹಾಸ ಇರುವ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿರುವ ಅಮೂಲ್ಯ ಹಸ್ತಪ್ರತಿ ಹಾಗೂ ಅಪರೂಪದ ತಾಳೆಗರಿ ಸಂರಕ್ಷಣೆಗೆ ಡಿಜಿಟಲ್ ರೂಪ ನೀಡಲು ಮೈಸೂರು ವಿಶ್ವವಿದ್ಯಾಲಯ ಮುಂದಾಗಿದೆ.
1 ಕೋಟಿ ವೆಚ್ಚದಲ್ಲಿ ತಾಳೆಗರಿ ಹಾಗೂ ಹಸ್ತಪ್ರತಿ ಸಂರಕ್ಷಣೆ ಮಾಡಲು 'ದಿ ಮಿಥಿಕ್ ಸೊಸೈಟಿ' ಮುಂದೆ ಬಂದಿದ್ದು, ಶುಕ್ರವಾರ ಮೈಸೂರು ವಿಶ್ವವಿದ್ಯಾಲಯ ಒಡಂಬಡಿಕೆ ಮಾಡಿಕೊಂಡಿದೆ. 2 ವರ್ಷ ನಡೆಯುವ ಈ ಸಂರಕ್ಷಣಾ ಕಾರ್ಯಕ್ಕೆ ಬೇಕಾದ ತಜ್ಞ ಲಿಪಿಕಾರರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಅಂದುಕೊಂಡಂತೆ ಆದಲ್ಲಿ ದೇಶ-ವಿದೇಶದ ಸಂಶೋಧಕರಿಗೆ ಇದರ ನೆರವು ಸಿಗಲಿದೆ.
ಈ ಸಂಶೋಧನಾಲಯದಲ್ಲಿ ಕೌಟಿಲ್ಯನ ಅರ್ಥಶಾಸದಿಂದ ಹಿಡಿದು ಅಶ್ವಶಾಸ, ಗಜಶಾಸ, ರಸ ಕೋಮುದಿ ಸೇರಿದಂತೆ ಹಲವು ಹಸ್ತಪ್ರತಿ ಹಾಗೂ ತಾಳೆಗರಿಗಳ ಸಂಗ್ರಹವಿದೆ. ಸಂಸ್ಕೃತ, ಕನ್ನಡ, ದೇವನಾಗರಿ, ನಂದಿನಾಗರಿ, ಬ್ರಾಹ್ಮಿ, ತಿಗಳಾರಿ, ತಮಿಳು, ತೆಲುಗು ಭಾಷೆಯ ಹಸ್ತಪ್ರತಿಗಳನ್ನು ಇಲ್ಲಿ ಕಾಣಬಹುದು.

ಎರಡು ವರ್ಷದ ಹಿಂದೆ ಓಆರ್‌ಐಗೆ ಡಿಜಿಟಲ್ ಸ್ಪರ್ಶ ನೀಡುವ ಪ್ರಯತ್ನ ನಡೆದಿತ್ತು. ಬೆಂಗಳೂರಿನ ತಾರಾ ಪ್ರಕಾಶನ ಡಿಜಿಟಲ್ ಸ್ಪರ್ಶ ನೀಡಲು ಮುಂದೆ ಬಂದಿತ್ತು. ಆದರೆ ಡಿಜಿಟಲ್ ಮಾಡಲು ಹಸ್ತಪ್ರತಿಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಬೇಕೆಂಬ ಷರತ್ತು ವಿಧಿಸಿತ್ತು. ಆದರೆ, ಇಲ್ಲಿರುವ ಹಸ್ತಪ್ರತಿಗಳನ್ನು ಬೇರೆಡೆ ಸ್ಥಳಾಂತರಿಸಲು ಅನುಮತಿ ಇಲ್ಲದ ಕಾರಣದಿಂದ ಆ ಯೋಜನೆ ನನೆಗುದಿಗೆ ಬಿದ್ದಿತ್ತು.
ಮೂರು ಹಂತದ ಪ್ರಕ್ರಿಯೆ?: ಮೊದಲ ಹಂತದಲ್ಲಿ ತಾಳೆಗರಿ ಹಾಗೂ ಹಸ್ತಪ್ರತಿಯನ್ನು ಸಂರಕ್ಷಣೆ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ಗ್ರಂಥಸೂಚಿ ಹಾಗೂ ಸಂಪುಟಗಳನ್ನು ವಿಂಗಡನೆ ಮಾಡಲಾಗುತ್ತದೆ. ಕೊನೆಯಲ್ಲಿ ನೂತನ ತಂತ್ರಜ್ಞಾನ ಬಳಸಿ ಬೇರೆ ಬೇರೆ ಲಿಪಿಯಲ್ಲಿರುವ ಎಲ್ಲಾ ಮಾಹಿತಿಯನ್ನು ಕ್ರೋಡೀಕರಣ ಮಾಡಲಾಗುತ್ತದೆ. ಇವೆಲ್ಲದರ ಅಕ್ಷರಗಳನ್ನು ತಜ್ಞ ಲಿಪಿಕಾರರನ್ನು ಕರೆಸಿ ಕಂಪ್ಯೂಟರ್‌ನಲ್ಲಿ ದಾಖಲೀಕರಣ ಮಾಡುವ ಗುರಿ ಹೊಂದಲಾಗಿದೆ.
"ಮೈಸೂರು ವಿವಿಗೆ 105 ವರ್ಷ ಇತಿಹಾಸವಿದ್ದರೆ, ಪ್ರಾಚ್ಯ ವಿದ್ಯಾ ಸಂಶೋಧನಾಲಯಕ್ಕೆ 130 ವರ್ಷಗಳ ಹಿನ್ನಲೆಯಿದೆ. ಇಡೀ ಕರ್ನಾಟಕದಲ್ಲೇ ಅತಿ ಹೆಚ್ಚಿನ ತಾಳೆಗರಿ ಹಾಗೂ ಹಸ್ತಪ್ರತಿ ಸಂಗ್ರಹ ಇಲ್ಲಿದೆ. ಸದ್ಯ ದಿ ಮಿಥಿಕ್ ಸೊಸೈಟಿ ಸಹಯೋಗದೊಂದಿಗೆ ಡಿಜಿಟಲೀಕರಣಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. 1 ಕೋಟಿ ರೂ. ವೆಚ್ಚದಲ್ಲಿ ಈ ಕಾರ್ಯ ನಡೆಯಲಿದೆ" ಎಂದು ಮೈಸೂರು ವಿವಿ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ಹೇಳಿದ್ದಾರೆ.











Click it and Unblock the Notifications