ಹೊಸ ವರ್ಷದ ಮೊದಲ ದಿನ ನಾಡದೇವತೆ ದರ್ಶನ ಭಾಗ್ಯವಿಲ್ಲ
ಮೈಸೂರು, ಡಿಸೆಂಬರ್ 25: 2021ರ ಮೊದಲ ದಿನ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆಯುವ ಭಕ್ತರ ಬಯಕೆ ಈಡೇರುವುದಿಲ್ಲ. ಹೊಸ ವರ್ಷ ಸಂದರ್ಭದಲ್ಲಿ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ಮೈಸೂರು ಜಿಲ್ಲಾಡಳಿತ ನಿಷೇಧಿಸಿದೆ.
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಹೊಸ ವರ್ಷದ ಮೊದಲ ದಿನ ಅಂದರೆ ಜನವರಿ 1ರಂದು ಸಾರ್ವಜನಿಕರು, ಭಕ್ತರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿವಂತಿಲ್ಲ.

ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕವೂ ಪ್ರವೇಶ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ರೂಪಾಂತರ ಕೋವಿಡ್ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಹೆಚ್ಚು ಜನರು ಸೇರದಂತೆ ಸರ್ಕಾರ ಸೂಚನೆ ನೀಡಿದೆ. ಆದ್ದರಿಂದ, ಜಾತ್ರೆ, ಉತ್ಸವಗಳನ್ನು ರದ್ದುಗೊಳಿಸಲಾಗುತ್ತಿದೆ. ಹೊಸ ವರ್ಷದ ಸಂದರ್ಭದಲ್ಲಿ ಹೆಚ್ಚು ಜನರು ಭೇಟಿ ನೀಡುವುದರಿಂದ ಭಕ್ತರ ಪ್ರವೇಶ ನಿಷೇಧಿಸಲಾಗಿದೆ.
ಗುರುವಾರದ ಮಾಹಿತಿಯಂತೆ ಮೈಸೂರು ಜಿಲ್ಲೆಯಲ್ಲಿ 88 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 52045. ಸಕ್ರಿಯ ಪ್ರಕರಣಗಳ ಸಂಖ್ಯೆ 492.
ಕೋವಿಡ್ ಪರಿಸ್ಥಿತಿಯ ಹಿನ್ನಲೆಯಲ್ಲಿ ಸುತ್ತೂರಿನಲ್ಲಿ ನಡೆಯಬೇಕಿದ್ದ ಜಾತ್ರೆಯನ್ನು ಸಹ ರದ್ದು ಮಾಡಲಾಗಿದೆ. 2021ರ ಫೆಬ್ರವರಿ 8 ರಿಂದ 13ರ ತನಕ ಜಾತ್ರೆ ನಡೆಯಬೇಕಿತ್ತು.












Click it and Unblock the Notifications