ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟ, ತ್ರಿಪುರ ಸುಂದರಿ ದೇವಸ್ಥಾನಕ್ಕೆ ನಿಷೇಧ
ಮೈಸೂರು, ಜುಲೈ 6: ಮಹಾಮಾರಿ ಕೋವಿಡ್- 19 ಸೋಂಕು ಆತಂಕದ ಹಿನ್ನೆಲೆಯಲ್ಲಿ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟ ಹಾಗೂ ಉತ್ತನಹಳ್ಳಿಯ ತ್ರಿಪುರ ಸುಂದರಿ ಜ್ವಾಲಾಮುಖಿ ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಮೈಸೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಕೊರೊನಾ ಅನ್‌ಲಾಕ್ ಹಿನ್ನೆಲೆಯಲ್ಲಿ ಜು.5ರಿಂದ ಧಾರ್ಮಿಕ ಕೇಂದ್ರಗಳಿಗೆ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಹೀಗಾಗಿ ಸೋಮವಾರ ಚಾಮುಂಡಿ ಬೆಟ್ಟಕ್ಕೆ ನೂರಾರು ಭಕ್ತರು ಭೇಟಿ ನೀಡಿ, ದೇವಿಯ ದರ್ಶನ ಪಡೆದಿದ್ದರು. ಆದರೆ ಆಷಾಢ ಶುಕ್ರವಾರಗಳಂದು ಬೆಟ್ಟಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುವ ಸಾಧ್ಯತೆ ಹೆಚ್ಚಾಗಿದ್ದು, ಈ ಕಾರಣದಿಂದ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದ್ದು, ಚಾಮುಂಡಿ ಬೆಟ್ಟ ಮಾತ್ರವಲ್ಲದೇ ಉತ್ತನಹಳ್ಳಿಯ ತ್ರಿಪುರ ಸುಂದರಿ ಜ್ವಾಲಾಮುಖಿ ದೇವಾಲಯಕ್ಕೂ ಸಹ ಭಕ್ತರು ಭೇಟಿ ನೀಡದಂತೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

ಮೈಸೂರು ಜಿಲ್ಲಾಡಳಿತ ಆದೇಶದನ್ವಯ ನಾಲ್ಕು ಆಷಾಢ ಶುಕ್ರವಾರ ಮತ್ತು ಎರಡು ದಿನಗಳ ಅಮಾವಾಸ್ಯೆಯಂದು ನಿರ್ಬಂಧ ಹೇರಲಾಗಿದೆ. ಅಲ್ಲದೇ ಆಷಾಢ ಮಾಸದ ಶನಿವಾರ, ಭಾನುವಾರ ಮತ್ತು ಸರ್ಕಾರಿ ಸಾರ್ವತ್ರಿಕ ರಜಾ ದಿನಗಳಂದು ಸಹ ನಿರ್ಬಂಧ ಮುಂದುವರಿಯಲಿದೆ. ಜಿಲ್ಲಾಡಳಿತದ ಈ ಆದೇಶದ ಹಿನ್ನೆಲೆಯಲ್ಲಿ ಜು.೬ ರಿಂದ ಪ್ರತಿದಿನ ಸಂಜೆ 6 ಗಂಟೆ ನಂತರ ನಿರ್ಬಂಧ ವಿಧಿಸಲಾಗಿದೆ.
ಯಾವ ದಿನಗಳಂದು ನಿರ್ಬಂಧ
* ಜುಲೈ 09, 2021 ಆಷಾಢ ಅಮಾವಾಸ್ಯೆ
* ಜುಲೈ 16, 2021 ಮೊದಲನೇ ಆಷಾಢ ಶುಕ್ರವಾರ
* ಜುಲೈ 23, 2021 2ನೇ ಆಷಾಢ ಶುಕ್ರವಾರ

* ಜುಲೈ 30, 2021 3ನೇ ಆಷಾಢ ಶುಕ್ರವಾರ ಹಾಗೂ ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ
* ಆಗಸ್ಟ್ 06, 2021 4ನೇ ಆಷಾಢ ಶುಕ್ರವಾರ
* ಆಗಸ್ಟ್ 08, 2021 ಭೀಮನ ಆಮಾವಾಸ್ಯೆ ದಿನ ನಿರ್ಬಂಧ ಹೇರಲಾಗಿದೆ.












Click it and Unblock the Notifications