ದೇವೇಗೌಡರೇ ಫೈನಲ್, ಮಗನ ಮಾತಿಗೆ ಮಹತ್ವ ಇಲ್ಲ ಎಂದ ರೇವಣ್ಣ
ಮೈಸೂರು, ಜುಲೈ 7 : ಜೆಡಿಎಸ್ ಪಕ್ಷಕ್ಕೆ ಸಂಬಂಧಿಸಿದಂತೆ ಮಗ ಪ್ರಜ್ಚಲ್ ನೀಡಿದ ಹೇಳಿಕೆಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ಜೆಡಿಎಸ್ ನಲ್ಲಿ ದೇವೇಗೌಡರು ಹೇಳುವ ಮಾತೇ ಅಂತಿಮ. ಅವರ ಮಾತನ್ನು ಯಾರೂ ಮೀರುವುದಿಲ್ಲ. ಜೆಡಿಎಸ್ ನಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಎಚ್ ಡಿ ರೇವಣ್ಣ ಶುಕ್ರವಾರ ಹೇಳಿದರು.
ಚಾಮುಂಡೇಶ್ವರಿಯ ಸನ್ನಿಧಾನಕ್ಕೆ ಪತ್ನಿ ಭವಾನಿ ಜೊತೆ ಬಂದಿದ್ದ ಅವರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, 2018ರ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆನ್ನುವ ಗುರಿಯಿಂದ ಪಕ್ಷದ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿಯವರು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದರು.
ಅವರ ಜೊತೆ ನಾನೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಅಧಿಕಾರದಲ್ಲಿರುವ ಸರಕಾರ ರೈತರ ಸಾಲವನ್ನು ಮನ್ನಾ ಮಾಡಿಲ್ಲ. ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ರೈತರ ಸಂಕಷ್ಟವನ್ನು ಪರಿಹರಿಸಲು ಜೆಡಿಎಸ್ ಅಧಿಕಾರಕ್ಕೆ ಬರಬೇಕಿದೆ ಎಂದರು.
ಪಕ್ಷದಲ್ಲಿ ಅಸಮಾಧಾನ ಕೇಳಿ ಬರುತ್ತಿದೆ ಎಂಬುದು ನಿಜವೇ ಎಂದು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಯಾವ ಅಸಮಾಧಾನವೂ ಇಲ್ಲ. ಅವೆಲ್ಲ ಗಾಳಿಸುದ್ದಿ. ಕಿವಿಗೊಡಬೇಡಿ ಎಂದು ನಕ್ಕರು.

ವಿಶ್ವನಾಥ್ ಸೇರ್ಪಡೆಯಿಂದ ಬಲ
ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ.ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಮಾಜಿ ಸಂಸದ ಎಚ್. ವಿಶ್ವನಾಥ್ ಜೆಡಿಎಸ್ ಸೇರ್ಪಡೆಯಿಂದ ಯಾವುದೇ ರೀತಿಯ ಅಸಮಾಧಾನ ಉಂಟಾಗಿಲ್ಲ. ವಿಶ್ವನಾಥ್ ಹಿರಿಯ ರಾಜಕೀಯ ನಾಯಕರು. ಅವರ ಸೇರ್ಪಡೆಯಿಂದ ಜೆಡಿಎಸ್ ಗೆ ಮತ್ತಷ್ಟು ಬಲ ಬಂದಿದೆ ಎಂದು ಹೇಳಿದರು.

ಉತ್ತಮ ಮಳೆಯಾಗಲಿ ಎಂದು ಪ್ರಾರ್ಥನೆ
ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದೇವೆ. ರಾಜ್ಯದಲ್ಲಿ ಉತ್ತಮ ಮಳೆಯಾಗಲಿ, ಜನರ ಸಂಕಷ್ಟಗಳು ದೂರವಾಗಲಿ ಎಂದು ಚಾಮುಂಡೇಶ್ವರಿಯನ್ನು ಬೇಡಿಕೊಂಡಿದ್ದೇನೆ ಎಂದರು.

ಹಸಿರು ಜರತಾರಿ ಸೀರೆ, ಮಹಾಲಕ್ಷ್ಮಿಯ ಅಲಂಕಾರ
ಚಾಮುಂಡಿ ಬೆಟ್ಟದಲ್ಲಿ ಜುಲೈ 7ರ ಶುಕ್ರವಾರ ಅಷಾಢ ಮಾಸದ ಎರಡನೇ ಶುಕ್ರವಾರ ಹಿನ್ನೆಲೆಯಲ್ಲಿ ಬೆಳಗಿನಿಂದಲೇ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜಾ ಕೈಂಕರ್ಯ ನಡೆದವು. ಹಸಿರು ಜರತಾರಿ ಸೀರೆ, ಮಹಾಲಕ್ಷ್ಮಿಯ ಅಲಂಕಾರದೊಂದಿಗೆ ಚಾಮುಂಡೇಶ್ವರಿ ದೇವಿ ಕಂಗೊಳಿಸುತ್ತಿದ್ದಳು. ಶಕ್ತಿ ದೇವತೆಯ ದರ್ಶನ ಪಡೆಯಲು ಸಹಸ್ರ ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದು ಬಂದಿತು. .

ಮಾಜಿ ಸಚಿವ ಸುರೇಶ್ ಕುಮಾರ್ ಭೇಟಿ
ಮಾಜಿ ಸಚಿವ ಸುರೇಶ್ ಕುಮಾರ್ ಪತ್ನಿ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿ. ವಿಶೇಷ ಪೂಜೆ ಸಲ್ಲಿಸಿದರು. ಚಾಮುಂಡಿ ಬೆಟ್ಟದಲ್ಲಿ ನೂಕುನುಗ್ಗಲು ಉಂಟಾಗದಂತೆ ಪೊಲೀಸ್ ಬಂದೋಬಸ್ತ್ ಇತ್ತು.












Click it and Unblock the Notifications