Muda Case: ನಾಲ್ಕು ತಿಂಗಳ ಬಳಿಕ ಮುಡಾ ಕಚೇರಿಗೆ ನ್ಯಾ. ದೇಸಾಯಿ ಭೇಟಿ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸರ್ಕಾರ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಆಯೋಗದ ಏಕ ಸದಸ್ಯ ನಿವೃತ್ತ ನ್ಯಾಯಮೂರ್ತಿ ದೇಸಾಯಿ ನಾಲ್ಕು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಮುಡಾ ಕಚೇರಿಗೆ ಭೇಟಿ ನೀಡಿದ್ದಾರೆ. ನಾಲ್ಕು ತಿಂಗಳ ಬಳಿಕ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಭೇಟಿ ನೀಡಿರುವುದು ಪ್ರಕರಣದ ಬಗ್ಗೆ ಇದ್ದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಮುಡಾ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸರ್ಕಾರ ಆಯೋಗ ರಚಿಸಿದ ಬಳಿಕ, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬಳಿಕ, ಹೈಕೋರ್ಟ್ ನಿರ್ದೇಶನದಂತೆ ಇದೀಗ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸುತ್ತಿದೆ. ಈಗಾಗಲೇ ಪ್ರಕರಣೆ ಎ1 ಆರೋಪಿ ಸಿಎಂ ಸಿದ್ದರಾಮಯ್ಯ ಎ2 ಪಾರ್ವತಿ ಸೇರಿದಂತೆ ಎಲ್ಲರನ್ನೂ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಈ ನಡುವೆ ಆರ್ ಟಿಐ ಕಾರ್ಯಕರ್ತರ ದೂರಿನ ಅನ್ವಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ. ಆದರೆ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಆಯೋಗ ರಚನೆಗೊಂಡ ನಾಲ್ಕು ತಿಂಗಳುಗಳ ಬಳಿಕ ಆಯೋಗದ ಮುಖ್ಯಸ್ಥರು ಮುಡಾ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಿರುವುದು ಪ್ರಕರಣದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಅಧಿಕಾರಿಗಳ ಜೊತೆ ಮಾತುಕತೆ
ಮುಡಾ ಕಚೇರಿಗೆ ಆಗಮಿಸಿದ ನಿವೃತ್ತ ನ್ಯಾಯಮೂರ್ತಿ ದೇಸಾಯಿ, ನಡೆದಿರುವ ಅಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಲ್ಲದೆ, ಕಡತಗಳ ಪರಿಶೀಲನೆ ನಡೆಸಿದರು. ಸರ್ಕಾರದಿಂದ ನೇಮಕವಾದ ಬಳಿಕ ಪಿ.ಎನ್.ದೇಸಾಯಿ ಆಯೋಗ ಬೆಂಗಳೂರಿನಲ್ಲಿ ಕಚೇರಿ ತೆರೆದು, ಕೆಲವು ಮುಡಾ ದಾಖಲಾತಿಗಳ ನಕಲು ಪ್ರತಿಯನ್ನು ಬೆಂಗಳೂರಿಗೆ ತರಿಸಿಕೊಂಡು ಪರಿಶೀಲನೆ ನಡೆಸಿದ್ದರು. ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದು ತನಿಖೆ ನಡೆಸುತ್ತಿತ್ತು.
ರಾಜ್ಯ ಸರ್ಕಾರ ಮುಡಾ ಅಕ್ರಮದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿ ಆದೇಶ ಹೊರಡಿಸಿದ್ದು, 6 ತಿಂಗಳ ಒಳಗಾಗಿ ವರದಿ ನೀಡುವಂತೆ ಆಯೋಗಕ್ಕೆ ಸೂಚನೆ ನೀಡಲಾಗಿದೆ.
ವಿಚಾರಣಾ ಆಯೋಗಕ್ಕೆ ಸಮಗ್ರ ಮಾಹಿತಿ, ದಾಖಲೆಗಳನ್ನು ಒದಗಿಸಿ ಆಯೋಗ ವಿಚಾರಣೆ ಪೂರ್ಣಗೊಳಿಸಲು ಹಾಗೂ ತಾಂತ್ರಿಕ ಸಲಹೆಗಾರರು, ಆರ್ಥಿಕ ಸಲಹೆಗಾರರು, ಆಡಳಿತಾತ್ಮಕ ಸಲಹೆಗಾರರನ್ನು ಒದಗಿಸಲು ನಗರಾಭಿವೃದ್ಧಿ ಇಲಾಖೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಹಕರಿಸುವಂತೆ ರಾಜ್ಯ ಸರಕಾರ ಸೂಚನೆ ನೀಡಿತ್ತು.












Click it and Unblock the Notifications