ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಲ್ಲದ ಕಾರ್ಖಾನೆಗಳಾಗಿದ್ದ ಆಲೆಮನೆಗಳು ನೇಪಥ್ಯಕ್ಕೆ ಸರಿಯುತ್ತಿರುವುದೇಕೆ?

|
Google Oneindia Kannada News

ಮೈಸೂರು, ಅಕ್ಟೋಬರ್.09: ಒಂದು ಕಾಲದಲ್ಲಿ ಆಲೆಮನೆಗಳ ಬೆಲ್ಲ ಎಂದರೆ ಎಲ್ಲಿಲ್ಲದ ಬೇಡಿಕೆಯಿತ್ತು. ಜನ ಹೆಚ್ಚು ಹೆಚ್ಚಾಗಿ ಬೆಲ್ಲವನ್ನು ಮುಂಜಾನೆಯ ಕಾಫಿಯಿಂದ ಆರಂಭವಾಗಿ ವಿವಿಧ ತಿನಿಸುಗಳಲ್ಲಿ ಬಳಕೆ ಮಾಡುತ್ತಿದ್ದರು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಲೆಮನೆಗಳು ಇದ್ದರೂ ಕೂಡ ಅವು ನಷ್ಟದ ಹಾದಿ ತುಳಿದಿರಲಿಲ್ಲ.

ಹಬ್ಬಗಳು ಬಂತೆಂದರೆ ಆಲೆಮನೆಗಳ ಬೆಲ್ಲಗಳಿಗೆ ಜನ ಮುಗಿ ಬೀಳುತ್ತಿದ್ದರು. ಯಾವುದೇ ರೀತಿಯ ರಾಸಾಯನಿಕ ಬಳಸದೆ ತಯಾರಾಗುತ್ತಿದ್ದ ಬೆಲ್ಲಗಳು ಆರೋಗ್ಯಕಾರಿಯಾಗಿದ್ದವು. ಆದರೆ ಕಾಲ ಕ್ರಮೇಣ ಬೆಲ್ಲ ತಯಾರಿಸಲು ಕಾರ್ಖಾನೆಗಳು ಹುಟ್ಟಿಕೊಂಡ ಕಾರಣ ಆಲೆಮನೆಗಳು ನೇಪಥ್ಯಕ್ಕೆ ಸರಿಯತೊಡಗಿವೆ.

ಆಲೆಮನೆಯತ್ತ ಹೋಗೋಣ ಬನ್ನಿ ಆಲೆಮನೆಯತ್ತ ಹೋಗೋಣ ಬನ್ನಿ

ಇರುವ ಕೆಲವು ಆಲೆಮನೆಗಳನ್ನು ಈಗ ನಡೆಸುವುದು ಕಷ್ಟವಾಗಿ ಪರಿಣಮಿಸುತ್ತಿದೆ. ಇದೀಗ ಜನರಲ್ಲಿ ಬೆಲ್ಲದ ಬಗೆಗೆ ನಿರಾಸಕ್ತಿ, ಬೇಡಿಕೆಯಲ್ಲಿ ಇಳಿಮುಖ, ಅತಿಯಾದ ಉತ್ಪಾದನಾ ವೆಚ್ಚ ಹೀಗೆ ಹಲವು ಸಮಸ್ಯೆಗಳಿಂದಾಗಿ ಅಲೆಮನೆಗಳು ಸದ್ದಿಲ್ಲದೆ ಅವನತಿಯ ಹಾದಿಯನ್ನು ಹಿಡಿಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಒಂದು ಕಾಲದಲ್ಲಿ ಆಲೆಮನೆಗಳೆಂದರೆ ಸದಾ ಚಟುವಟಿಯ ಕೇಂದ್ರವಾಗಿತ್ತು. ಬೆಲ್ಲ ತಯಾರಿಸುವ ಕಾರ್ಯಗಳು ನಡೆಯುತ್ತಿದ್ದವು. ಒಂದಷ್ಟು ಕಾರ್ಮಿಕರಿಗೆ ಕೆಲಸ ಸಿಗುತ್ತಿತ್ತು. ಈಗ ಅದೆಲ್ಲ ಮಾಯವಾಗಿದೆ. ಬಹುತೇಕ ಆಲೆಮನೆ ನಡೆಸುತ್ತಿದ್ದವರು ಸಾಕಪ್ಪಾ ಇದರ ಸಹವಾಸ ಎಂಬ ಸ್ಥಿತಿಗೆ ಬಂದು ತಲುಪಿದ್ದಾರೆ. ಕಾರಣವೇನಿರಬಹುದು? ಓದಿ...

 ಈಗ ಆಲೆಮನೆಗಳೇ ಅಪರೂಪ

ಈಗ ಆಲೆಮನೆಗಳೇ ಅಪರೂಪ

ಮೊದಲೆಲ್ಲ ಮಂಡ್ಯಕ್ಕೊಂದು ಸುತ್ತು ಹೊಡೆದರೆ ನೂರಾರು ಆಲೆಮನೆಗಳು ಕಾಣಿಸುತ್ತಿದ್ದವು. ಈಗ ಕಾಣುವುದೇ ಅಪರೂಪವಾಗಿದೆ. ಇಲ್ಲಿನ ರೈತರು ತಾವೇ ಕಬ್ಬು ಬೆಳೆದು ಗಾಣದಲ್ಲಿ ಅರೆದು, ಆಲೆಮನೆಗಳಲ್ಲಿ ಬೆಲ್ಲ ಮಾಡಿ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಈ ಬೆಲ್ಲ ನೋಡಲು ಆಕರ್ಷಣೆಯಾಗಿಲ್ಲದಿದ್ದರೂ ಆರೋಗ್ಯಕಾರಿಯಾಗಿದ್ದವು.

ಆದರೆ ಈಗ ಜನ ನೋಡಲು ಆಕರ್ಷಣೆಯಾಗಿರುವ ಬೆಲ್ಲದತ್ತ ಚಿತ್ತ ಹರಿಸುತ್ತಿರುವುದರಿಂದ ನೈಜ ಬೆಲ್ಲಕ್ಕೆ ಬೇಡಿಕೆ ಕಡಿಮೆಯಾಗುತ್ತಿದೆ. ಹೀಗಾಗಿ ಕಷ್ಟಪಟ್ಟು ಬೆವರು ಸುರಿಸಿ ಬೆಲ್ಲ ತಯಾರಿಸಿದರೂ ಅದಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ. ಹೀಗಾದರೆ ರೈತರು ಜೀವನ ಮಾಡುವುದಾದರೂ ಹೇಗೆ? ಪರಿಣಾಮ ಬೇಡಪ್ಪಾ ಆಲೆಮನೆ ಸಹವಾಸ ಎಂದು ತಣ್ಣಗಾಗಿದ್ದಾರೆ.

 ಬೆಲ್ಲಕ್ಕೆ ಬೇಡಿಕೆ ಇಲ್ಲ

ಬೆಲ್ಲಕ್ಕೆ ಬೇಡಿಕೆ ಇಲ್ಲ

ಮಂಡ್ಯದ ಮೂಲ ಸೊಗಡಿನ ಆರೋಗ್ಯಕರವಾದ ಮತ್ತು ಗುಣಮಟ್ಟದಿಂದ ಕೂಡಿದ್ದ ಬೆಲ್ಲಕ್ಕೆ ಇತ್ತೀಚಿಗೆ ರಾಜಸ್ತಾನ, ಬಿಹಾರ, ಉತ್ತರ ಪ್ರದೇಶ ಮತ್ತಿತರ ಪರ ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರು ತಯಾರಿಸುತ್ತಿರುವ ರಾಸಾಯನಿಕಯುಕ್ತ ಬಣ್ಣದ ಬೆಲ್ಲವು ಸೆಡ್ಡು ಹೊಡೆದು ನಿಂತಿವೆ.

ಕಣ್ಣಿಗೆ ಸುಂದರವಾಗಿ ಕಾಣುವ ಬೆಲ್ಲವನ್ನೇ ಗ್ರಾಹಕರು ಆಯ್ಕೆ ಮಾಡಿಕೊಳ್ಳುವ ಕಾರಣ ಮಂಡ್ಯದ ಬೆಲ್ಲ ಹೆಸರು ಮತ್ತು ಬೆಲೆಯನ್ನು ಕಳೆದುಕೊಳ್ಳುವಂತಾಗಿದೆ.

ಹೊರಗಿನಿಂದ ಬಂದವರು ವ್ಯಾಪಾರದ ದೃಷ್ಠಿಯಿಂದ ಮತ್ತು ಜನರನ್ನು ಸೆಳೆಯಲು ಏನೆಲ್ಲ ತಂತ್ರಮಾಡಬೇಕೋ ಅದೆಲ್ಲವನ್ನು ಮಾಡುತ್ತಿರುವ ಕಾರಣದಿಂದಾಗಿ ನಿಜವಾದ ಶುದ್ಧ ಬೆಲ್ಲ ತಯಾರಿಸುವ ರೈತರಿಗೆ ತೊಂದರೆಯಾಗಿದೆ. ಅವರು ತಮ್ಮ ಆಲೆಮನೆಗಳಲ್ಲಿ ತಯಾರಿಸಿದ ಬೆಲ್ಲಕ್ಕೆ ಬೇಡಿಕೆ ಇಲ್ಲದಂತಾಗಿದೆ.

ಕರಾವಳಿಯ ನೆಲದಲ್ಲಿ ತಮಿಳುನಾಡು ಓಲೆಬೆಲ್ಲಕರಾವಳಿಯ ನೆಲದಲ್ಲಿ ತಮಿಳುನಾಡು ಓಲೆಬೆಲ್ಲ

 ಸ್ತಬ್ಧಗೊಳ್ಳುವ ದಿನಗಳು ದೂರವಿಲ್ಲ

ಸ್ತಬ್ಧಗೊಳ್ಳುವ ದಿನಗಳು ದೂರವಿಲ್ಲ

ಆಲೆಮನೆ ನಡೆಸುವ ರೈತರು ಹೇಳುವ ಪ್ರಕಾರ ಒಂದು ಟನ್ ಕಬ್ಬುಗೆ 93 ಕೆಜಿ ಬೆಲ್ಲ ತಯಾರಿಸಬಹುದಂತೆ. ಆದರೆ ಇದಕ್ಕೆ ತಗಲುವ ವೆಚ್ಚವನ್ನು ಗಮನಿಸಿದರೆ ಇದರಿಂದ ಲಾಭ ಸಿಗುತ್ತಿಲ್ಲವಂತೆ. ಇವತ್ತು ಕಾರ್ಮಿಕರ ಕೊರತೆಯೂ ಹೆಚ್ಚಾಗಿ ಕಂಡು ಬರುತ್ತಿದ್ದು ಎಲ್ಲ ಸರಿದೂಗಿಸಿಕೊಂಡು ಹೋಗುವುದು ಆಲೆಮನೆ ನಡೆಸುವವರಿಗೆ ಕಷ್ಟವಾಗುತ್ತಿದೆ.

ಆದರೂ ತಲತಲಾಂತರಿಂದ ನಡೆಸುಕೊಂಡು ಬಂದ ಉದ್ಯಮ ಎಂಬ ಕಾರಣಕ್ಕೆ ಕೆಲವರು ನಡೆಸುತ್ತಿದ್ದಾರೆ. ಉದಾಹರಣೆಗೆ ಮಂಡ್ಯ ಜಿಲ್ಲೆಯ ಯಡಗನಹಳ್ಳಿ ಎಂಬ ಗ್ರಾಮದಲ್ಲಿ ಮೊದಲು 40 ಗಾಣಗಳಿದ್ದವಂತೆ ಎಲ್ಲರೂ ಕಬ್ಬು ಅರೆದು ಆಲೆಮನೆಗಳಲ್ಲಿ ಕಬ್ಬು ತಯಾರಿಸುತ್ತಿದ್ದರಂತೆ.

ಆದರೆ ಇವತ್ತು ಇದರ ಸಂಖ್ಯೆ ಮೂರಕ್ಕೆ ಬಂದು ನಿಂತಿದೆಯಂತೆ. ಇದೇ ರೀತಿ ಮುಂದುವರೆದರೆ ಇವತ್ತು ಹಳ್ಳಿಗಳಲ್ಲಿ ಇರುವ ಬಹುತೇಕ ಆಲೆಮನೆಗಳು ಸ್ತಬ್ಧಗೊಳ್ಳುವ ದಿನಗಳು ದೂರವಿಲ್ಲ.

 ಸದ್ದಿಲ್ಲದೆ ಬಾಗಿಲು ಮುಚ್ಚಿಕೊಳ್ಳುತ್ತಿವೆ

ಸದ್ದಿಲ್ಲದೆ ಬಾಗಿಲು ಮುಚ್ಚಿಕೊಳ್ಳುತ್ತಿವೆ

ಇದರ ಜೊತೆಗೆ ಮತ್ತೊಂದು ಅಪಾಯವೂ ಎದುರಾಗುವ ಭಯವೂ ಆರಂಭವಾಗಿದೆ. ಜಿಲ್ಲೆಯ ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಮಂಡ್ಯ ತಾಲೂಕುಗಳಲ್ಲಿ ಕೆಲವು ಆಲೆಮನೆಗಳು ನಡೆಯುತ್ತಿವೆ. ಇಲ್ಲಿ ಬೆಲ್ಲ ತಯಾರಿಸುವ ಕಾರ್ಯವನ್ನು ಹೊರಗಿನವರು ಮಾಡುತ್ತಿದ್ದಾರೆ. ಇವರು ಮಂಡ್ಯ ಬೆಲ್ಲ ಹೆಸರಿನಲ್ಲಿ ತಮ್ಮ ಕೈಚಳಕ ಬಳಸುತ್ತಿದ್ದಾರೆ.

ಇವುಗಳನ್ನು ಲಾಭದ ದೃಷ್ಠಿಯಿಂದ ಮಾಡುತ್ತಿರುವುದರಿಂದ ಹೆಚ್ಚಿನ ರಾಸಾಯನಿಕ ಬಳಸಿ ಆಕರ್ಷಕ ಬೆಲ್ಲವನ್ನು ತಯಾರಿಸುತ್ತಿದ್ದಾರೆ. ಇಂತಹ ಬೆಲ್ಲಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಾರೆ. ಇವರ ಕೈಚಳಕದ ಮುಂದೆ ತಲತಲಾಂತರಗಳಿಂದ ಆಲೆಮನೆ ನಡೆಸಿಕೊಂಡು ಬಂದಿದ್ದ ರೈತಕುಟುಂಬಗಳು ಕಂಗಾಲಾಗಿದ್ದಾರೆ.

ತಾವು ಕಷ್ಟಪಟ್ಟು ಶುದ್ಧವಾದ ಬೆಲ್ಲವನ್ನು ತಯಾರಿಸಿದರೂ ಅದಕ್ಕೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಸಿಗದೆ ಪರದಾಡುವಂತಾಗಿದೆ. ಒಟ್ಟಾರೆ ಹತ್ತು ಹಲವು ಸಮಸ್ಯೆಗಳಿಂದ ಆಲೆಮನೆ ನಡೆಸುವ ರೈತರು ಬಳಲುತ್ತಿದ್ದು, ಪರ್ಯಾಯ ಮಾರ್ಗದತ್ತ ಚಿತ್ತಹರಿಸಿದ ಕಾರಣ ಆಲೆಮನೆಗಳು ಸದ್ದಿಲ್ಲದೆ ಬಾಗಿಲು ಮುಚ್ಚಿಕೊಳ್ಳುತ್ತಿವೆ.

English summary
Demand for the Aalemane has fallen and the loss is on the path. What could be the reason for this? Here's a detailed article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X