ಮೈಸೂರಿನಲ್ಲಿ ಗರಿಗೆದರಿದ ಕುಂಬಾರರ ವ್ಯಾಪಾರ:ಮಡಿಕೆಗೆ ಹೆಚ್ಚಿದ ಬೇಡಿಕೆ
ಮೈಸೂರು, ಏಪ್ರಿಲ್ 08:ಮೈಸೂರಿನಲ್ಲಿ ಬಿಸಿಲಿನ ತಾಪ ಹೆಚ್ಚಿದಂತೆ ಮಣ್ಣಿನ ಮಡಿಕೆಗೆ ಬೇಡಿಕೆ ಹೆಚ್ಚಾಗಿದೆ. ಬಡವರ ಫ್ರಿಜ್ ಎಂದೇ ಹೆಸರುವಾಸಿಯಾಗಿರುವ ಮಣ್ಣಿನ ಮಡಿಕೆಗಳನ್ನು ಅನಾದಿ ಕಾಲದಿಂದಲೂ ಬಡವರು ಬಳಸಿಕೊಂಡು ಬರುತ್ತಿದ್ದಾರೆ.
ಯಂತ್ರೋಪಕರಣದ ಫೈಬರ್ ಫ್ರಿಜ್, ಕೂಲರ್ ಗಳ ನಡುವೆಯೂ ಮಡಿಕೆ ತನ್ನ ಬೇಡಿಕೆ ಉಳಿಸಿಕೊಂಡಿದೆ. ಬಿರು ಬೇಸಿಗೆಯಲ್ಲಿ ನೀರು ಕಾಯಿಸಬೇಕಾಗಿಲ್ಲ. ವಾತಾವರಣದ ತಾಪಮಾನಕ್ಕೆ ಬೆಚ್ಚಗಾಗುತ್ತವೆ. ಬಾಯಾರಿದಾಗ ಬಿಸಿ ನೀರು ದಣಿವು ನಿವಾರಿಸುವುದಿಲ್ಲ. ಹಾಗಾಗಿ ಪ್ರತಿಯೊಬ್ಬರು ತಂಪು ನೀರು ಬಯಸುತ್ತಾರೆ.
ಮಡಿಕೆ ಬೇಸಿಗೆಯಲ್ಲಿ ನೀರನ್ನು ತಣ್ಣಗೆ ಇಡಬಲ್ಲದು.ಒಮ್ಮೆ ಖರೀದಿಸಿದರೆ ಸಾಕು, ಅದು ಬಾಳಿಕೆ ಬರುವಷ್ಟು ದಿನ ನೀರನ್ನು ತಣ್ಣಗೆ ಇಡುತ್ತದೆ. ಹಿಂದೆ ಕುಂಬಾರಿಕೆ ನಡೆಯುತ್ತಿತ್ತು. ಆಗ ಮನೆಗೆ ಅಗತ್ಯವಿರುವ ಮಡಿಕೆಗಳನ್ನು ಕುಂಬಾರರಿಂದ ನೇರವಾಗಿ ಖರೀದಿಸಿ ತಂದು ಬಳಸಲಾಗುತ್ತಿತ್ತು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬದಲಾದ ಇಂದಿನ ಪರಿಸ್ಥಿತಿಯಲ್ಲಿ ಕುಂಬಾರಿಕೆ ಮಹತ್ವ ಕಳೆದುಕೊಂಡಿದೆ. ಆದರೆ ಬೇಸಿಗೆಯಲ್ಲಿ ಮಡಿಕೆ ಬೇಕೆಬೇಕಾಗಿದೆ. ಮಡಿಕೆಗಳ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ. ಬೆಲೆ ಹೆಚ್ಚಾಗಿದ್ದರೂ ಜನರು ಸಂತೆ ಹಾಗೂ ಮಾರುಕಟ್ಟೆಗೆ ಹೋಗಿ ಖರೀದಿಸುತ್ತಿದ್ದಾರೆ.
ಈ ಹಿಂದೆ ಕಪ್ಪು ಬಣ್ಣದ ಮಡಿಕೆಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈಗ ಕೆಂಪು ಬಣ್ಣದ ಮಡಿಕೆಗಳು ಮಾರುಕಟ್ಟೆಗೆ ಬಂದಿವೆ. ಹಾಗಾದರೆ ಮಡಿಕೆಯ ವ್ಯಾಪಾರ ಹೇಗಿದೆ? ಏನೆಲ್ಲಾ ವೆರೈಟಿಗಳು ಬಂದಿವೆ? ಎಲ್ಲಿ ಲಭ್ಯ? ಮುಂತಾದವುಗಳ ಮಾಹಿತಿಗೆ ಈ ಲೇಖನ ಓದಿ...

ಮಣ್ಣಿನ ಕೊಡಗಳಿಗೆ ಬೇಡಿಕೆ
ಈಗ ಮಾರುಕಟ್ಟೆಗೆ ಬರುತ್ತಿರುವ ಮಡಿಕೆಗೆ ನಲ್ಲಿಯನ್ನು ಅಳವಡಿಸಲಾಗಿದೆ. ಹೂಜಿಗಳು ಸಹ ಲಭ್ಯ. ಕಲಾತ್ಮಕ ಕುಂಡಗಳಿಗಾದರೆ ದುಪ್ಪಟ್ಟು ಬೆಲೆ ತೆರಬೇಕಾಗುತ್ತದೆ. ಬೇಸಿಗೆ ಮುಗಿಯುವವರೆಗೂ ಮಣ್ಣಿನ ಕೊಡಗಳಿಗೆ ಬೇಡಿಕೆ ಸಾಮಾನ್ಯ.

ಮಣ್ಣಿನ ಮಡಿಕೆಗಳ ಮಾರಾಟ
ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಜನ ನಾನಾ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಅದರಲ್ಲೂ ಮಡಕೆಗಳನ್ನು ಖರೀದಿಸುತ್ತಿದ್ದಾರೆ. ಮೈಸೂರಿನಲ್ಲಿ ಮೊದಲಿನಿಂದಲೂ ಮಣ್ಣಿನ ಮಡಿಕೆಗಳ ಮಾರಾಟ ನಡೆಯುತ್ತಿದೆ. ಬೇಸಿಗೆ ಬೇಗೆ ಹೆಚ್ಚಿರುವುದರಿಂದ ಮಡಿಕೆ ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಇದರಿಂದ ಕುಂಬಾರರ ವ್ಯಾಪಾರ ಗರಿಗೆದರಿದೆ.

ಪ್ರಮುಖ ರಸ್ತೆಗಳಲ್ಲಿ ಮಾರಾಟ
ಸ್ಥಳೀಯ ಕುಂಬಾರರು ಮೈಸೂರಿನ ಹಲವು ಭಾಗಗಳಿಂದ ಮಡಕೆಗಳನ್ನು ತಂದು ಪ್ರಮುಖ ರಸ್ತೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೆಂಪು ಬಣ್ಣದ ಆಕರ್ಷಕ ಮಡಕೆ, ಹೂಜಿ, ಕುಡಿಕೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಗ್ರಾಹಕರೂ ಹೆಚ್ಚಿನ ಪ್ರಮಾಣದಲ್ಲಿ ಕೊಂಡುಕೊಳ್ಳುತ್ತಿದ್ದಾರೆ.

ವ್ಯಾಪಾರಿಗಳು ಏನಂತಾರೆ?
ಮೊದಲು ಹಳ್ಳಿಗಳಲ್ಲಿ ಅಡುಗೆ ಮಾಡಲು, ಹಾಲು ಕಾಯಿಸಲು, ಮಜ್ಜಿಗೆ ಮಾಡಲು ಹೀಗೆ ಎಲ್ಲದಕ್ಕೂ ಮಣ್ಣಿನ ಮಡಕೆ, ಕುಡಿಕೆಗಳನ್ನೇ ಬಳಸುತ್ತಿದ್ದರು. ಮಣ್ಣಿನ ಮಡಕೆಗಳಲ್ಲಿ ಮಾಡಿದ ಅಡುಗೆ ಸ್ವಾದಿಷ್ಟ ಹಾಗೂ ಆರೋಗ್ಯಕ್ಕೆ ಒಳ್ಳೆಯದಾಗಿರುತ್ತಿತ್ತು. ಆದರೆ, ಇಂದು ಮಡಕೆ, ಕುಡಿಕೆಗಳನ್ನು ನಾಜೂಕಾಗಿ ಬಳಸಬೇಕು. ಇಲ್ಲದಿದ್ದರೆ ಒಡೆದು ಹೋಗುತ್ತವೆ ಎಂಬ ಕಾರಣಕ್ಕೆ ಜನರು ಲೋಹದ ಪಾತ್ರೆಗಳನ್ನೇ ಬಳಸುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿಗಳು.

ಬೇಸಿಗೆಯಲ್ಲಿ ಬೇಡಿಕೆ ಹೆಚ್ಚು
ಬೇಸಿಗೆಯಲ್ಲಿ ಮಾತ್ರ ಮಡಿಕೆಗಳಿಗೆ ಬೇಡಿಕೆ ಬರುತ್ತದೆ. ಉಳಿದಂತೆ ಮೊಹರಂ, ಹಬ್ಬ ಹರಿದಿನ ಹಾಗೂ ಜಾತ್ರೆಗಳಲ್ಲಿ ಮಾರಾಟವಾಗುತ್ತವೆ. ಹಿಂದೆ ನಾವು ಮನೆಗಳಲ್ಲಿಯೇ ಮಡಿಕೆಗಳನ್ನು ಮಾಡುತ್ತಿದ್ದೆವು. ಆದರೆ, ಈಗ ಬೇರೆ ಊರುಗಳಿಂದ ತಂದು ಮಾರಾಟ ಮಾಡುತ್ತಿದ್ದೇವೆ. ಒಂದು ಮಡಕೆಗೆ 150ರಿಂದ 170 ರೂ, ಒಂದು ಹೂಜಿಗೆ 160ರಿಂದ 200 ದರದಲ್ಲಿ ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ಮಡಕೆ ವ್ಯಾಪಾರಿ ರಾಜಮ್ಮ.












Click it and Unblock the Notifications