Mysuru Dasara exhibition: ಫೆಬ್ರವರಿ 12ರವರೆಗೂ ದಸರಾ ವಸ್ತು ಪ್ರದರ್ಶನ ಮುಂದುವರಿಕೆ
ಮೈಸೂರು, ಜನವರಿ, 05: ಸಾರ್ವಜನಿಕರು ಹಾಗೂ ಪ್ರವಾಸಿ ಪ್ರಮುಖ ಆಕರ್ಷಣೆಯ ಕೇಂದ್ರವಾದ ದಸರಾ ವಸ್ತು ಪ್ರದರ್ಶನದ ಅವಧಿಯನ್ನು ಮತ್ತೆ 40 ದಿನಗಳ ಕಾಲ ಮುಂದುವರಿಸಲಾಗಿದೆ.
ಸಾಮಾನ್ಯವಾಗಿ ಪ್ರತಿವರ್ಷ ದಸರಾ ಮಹೋತ್ಸವದ ಸಮಯದಲ್ಲಿ 100 ದಿನಗಳ ಕಾಲ ದಸರಾ ವಸ್ತು ಪ್ರದರ್ಶನ ನಡೆಯುತ್ತದೆ. ಆದರೆ, ಕಳೆದ ಎರಡು ವರ್ಷದಿಂದ ಮಹಾಮಾರಿ ಕೋವಿಡ್ ಕಾರಣದಿಂದ ವಸ್ತು ಪ್ರದರ್ಶನ ತೆರೆಯದೆ ಮಂಕಾಗಿತ್ತು. ಇದೀಗ ಪ್ರವಾಸೋದ್ಯಮಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಫೆಬ್ರವರಿ 12ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಈ ಮೂಲಕ ವರ್ಷಪೂರ್ತಿ ವಸ್ತು ಪ್ರದರ್ಶನ ನಡೆಸಬೇಕೆಂಬ ಆಶಯಕ್ಕೆ ಇದು ಮೊದಲ ಹೆಜ್ಜೆಯಾಗಿದೆ.
ವಸ್ತು ಪ್ರದರ್ಶನದ ಗುತ್ತಿಗೆ ವಿವರ
90 ದಿನಗಳ ವಸ್ತು ಪ್ರದರ್ಶನದ ಗುತ್ತಿಗೆ 8.09 ಕೋಟಿ ರೂ. ಆಗಿದ್ದು, ಬೆಂಗಳೂರಿನ ವರ್ಲ್ಡ್ ಇಂಡಿಯಾ ರೆಸಾರ್ಟ್ ಪ್ರೈ.ಲಿಮಿಟೆಡ್‌ಗೆ ಪ್ರಾಧಿಕಾರ ಗುತ್ತಿಗೆ ನೀಡಿತ್ತು. ಬಳಿಕ ಒಂದು ವಾರದ ಪ್ರದರ್ಶನ ಅವಧಿ ವಿಸ್ತರಣೆ ಮಾಡಲಾಯಿತು. ಬಳಿಕ ದಿನದ ಬಾಡಿಗೆ ಆಧಾರದ ಮೇಲೆ 40 ದಿನ ಪ್ರಾಧಿಕಾರದ ಮೈದಾನವನ್ನು ನೆಲ ಬಾಡಿಗೆ ನೀಡಲಾಗಿದ್ದು, ದಿನಕ್ಕೆ 1 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. ಇದರಿಂದ ಪ್ರಾಧಿಕಾರಕ್ಕೆ 8.68 ಕೋಟಿ ರೂಪಾಯಿ ಆದಾಯ ಬಂದಿದೆ. ವಸ್ತು ಪ್ರದರ್ಶನವನ್ನು ಫೆಬ್ರವವರಿ 12ರವರೆಗೆ ವಿಸ್ತರಿಸಿರುವ ಕಾರಣ ಪ್ರಾಧಿಕಾರಕ್ಕೆ ಅನುಕೂಲವಾಗಿದೆ.

ವಸ್ತು ಪ್ರದರ್ಶನ ದಿನಾಂಕ ವಿಸ್ತರಣೆ
''ದಸರಾ ವಸ್ತು ಪ್ರದರ್ಶನವನ್ನು 40 ದಿನ ಮುಂದುವರೆಸಲಾಗಿದೆ. ವರ್ಷಪೂರ್ತಿ ವಸ್ತು ಪ್ರದರ್ಶನ ನಡೆಸಬೇಕೆಂಬ ಯೋಜನೆಗೆ ಇದು ಸಹಕಾರಿಯಾಗಲಿದೆ. ಇದರಿಂದಾಗಿ ಮಹಾಶಿವರಾತ್ರಿಯ ತನಕವೂ ಮೈಸೂರು ನಗರಕ್ಕೆ ಆಗಮಿಸುವ ಪ್ರವಾಸಿಗರು ವಸ್ತು ಪ್ರದರ್ಶನಕ್ಕೆ ಭೇಟಿ ನೀಡಬಹುದಾಗಿದೆ. ಇಷ್ಟು ದಿನಗಳ ಕಾಲ ವಸ್ತು ಪ್ರದರ್ಶನ ನಡೆದಿರುವುದು ಪ್ರಾಧಿಕಾರದ ಇತಿಹಾಸದಲ್ಲಿಯೇ ಮೊದಲು,'' ಎಂದು ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ದಸರಾ ವಸ್ತು ಪ್ರದರ್ಶನದ ಬೆನ್ನಲ್ಲೇ ಬೇಸಿಗೆ ಮೇಳ ನಡೆಸಲು ಕೂಡ ಸಿದ್ಧತೆ ನಡೆಸಿದೆ. ನಿರೀಕ್ಷೆಗೂ ಮೀರಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ವಸ್ತು ಪ್ರದರ್ಶನ ಕಳೆದ ಸೆಪ್ಟೆಂಬರ್ 25ರಂದು ಆರಂಭವಾಗಿತ್ತು. 90 ದಿನಗಳವರೆಗೆ ಅಂದರೆ ಡಿಸೆಂಬರ್ 25ಕ್ಕೆ ಪ್ರದರ್ಶನ ಅಂತ್ಯಗೊಳ್ಳಬೇಕಿತ್ತು. ಆದರೆ, ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಪ್ರಾಧಿಕಾರ ಜನವರಿ 1ರವೆರೆಗೆ ಅವಧಿ ವಿಸ್ತರಣೆ ಮಾಡಿತ್ತು. ಇದೀಗ ಮತ್ತೆ 40 ದಿನಗಳ ಕಾಲ ವಿಸ್ತರಣೆ ಮಾಡುವ ಮೂಲಕ ಪ್ರವಾಸಿಗರಿಗೆ ಮನರಂಜನೆ ಕಲ್ಪಿಸಲಾಗಿದೆ. ಜೊತೆಗೆ ಪ್ರದರ್ಶನದ ವ್ಯಾಪಾರಸ್ಥರಿಗೆ ಪ್ರಾಧಿಕಾರ ನೆರವಾಗಿದೆ.












Click it and Unblock the Notifications