ಕರ್ನಾಟಕದಲ್ಲಿ ಬೌದ್ಧ ಧರ್ಮ ಗುರು ದಲೈಲಾಮಾ
ಮೈಸೂರು, ಡಿಸೆಂಬರ್ 18: ಬೌದ್ಧ ಧರ್ಮ ಗುರು ದಲೈಲಾಮ ಅವರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ಗೆ ಭೇಟಿ ನೀಡಿ, ಡಿಸೆಂಬರ್ 19 ರಿಂದ 23ರ ವರೆಗೆ 3 ದಿನಗಳ ಕಾಲ ಬೈಲಕುಪ್ಪೆ ಸೆರಜೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ದಲೈಲಾಮ ಅವರು ಡಿಸೆಂಬರ್ 19ರಂದು ವಿಮಾನದಲ್ಲಿ ಹುಬ್ಬಳ್ಳಿಗೆ ಬಂದಿಳಿದು, ಅಲ್ಲಿಂದ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆಯಲ್ಲಿರುವ ಸೆರಜೆ ಬೌದ್ಧ ಸನ್ಯಾಸಿ ಮಂದಿರಕ್ಕೆ ಭೇಟಿ ನೀಡಿ ಬಳಿಕ ವಿಶ್ರಾಂತಿ ಪಡೆಯಲಿದ್ದಾರೆ.

ಡಿಸೆಂಬರ್ 21ರಂದು ಸೆರಜೆ ದೇವಸ್ಥಾನದ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾರ್ಥನಾ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಪಿಡಬ್ಲೂಡಿವತಿಯಿಂದ ಕ್ಯಾಂಪ್ ಗೆ ಹಾದು ಹೋಗುವ ರಸ್ತೆಗಳನ್ನೆಲ್ಲ ದುರಸ್ತಿ ಕಾರ್ಯ ನಡೆದಿದೆ. ಇನ್ನು ಟಿಬೇಟಿಯನ್ ಸಂಸ್ಥೆ ವತಿಯಿಂದ ರಸ್ತೆಯ ಅಕ್ಕಪಕ್ಕದ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದು ಪ್ರವೇಶ ದ್ವಾರಗಳನ್ನು ನಿರ್ಮಿಸಿ ಸ್ವಾಗತ ಕೋರಲು ಸಿದ್ಧತೆ ಸಮಾರೋಪಾದಿಯಲ್ಲಿ ಸಾಗಿದೆ.
ರಸ್ತೆ ಗೋಡೆ ಸೇರಿದಂತೆ ಹಲವೆಡೆ ಟಿಬೇಟಿಯನ್ ಮಾದರಿಯ ಚಿತ್ರಗಳು, ರಂಗೋಲಿಗಳನ್ನು ಬಿಡಿಸಿ, ತೋರಣ ಕಟ್ಟಲಾಗಿದ್ದು, ಕ್ಯಾಂಪ್ ಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದ್ದು, ದಲೈಲಾಮ ಅವರ ಸ್ವಾಗತಕ್ಕಾಗಿ ಇಲ್ಲಿನ ಜನರು ಕಾತರದಿಂದ ಕಾಯುತ್ತಿದ್ದಾರೆ.
ಈಗಾಗಲೇ ಎಸ್ಪಿ ರವಿ ಡಿ ಚನ್ನಣ್ಣನವರು, ಅಡಿಷನಲ್ ಎಸ್ಪಿ ರುದ್ರಮುನಿಯವರ ನೇತೃತ್ವದಲ್ಲಿ ಭಾರೀ ಪೊಲೀಸ್ ಬಂದೂಬಸ್ತ್ ಕೈಗೊಳ್ಳಲಾಗಿದ್ದು, 4ಜನ ಡಿವೈಎಸ್ ಪಿ , 8ಜನ ಸಿಪಿಐ, 50ಜನ ಪಿಎಸ್ಐ, 295 ಕಾನ್ಸ್ ಟೇಬಲ್, 25 ಡಬ್ಲೂಪಿಎಸ್ , 110 ಹೋಂ ಗಾರ್ಡ್, 4ವ್ಯಾನ್ ಕೆಎಸ್ ಆರ್ ಪಿ ಮತ್ತು 3 ವ್ಯಾನ್ ಡಿಆರ್ ಸೇರಿದಂತೆ 552 ಸಿಬ್ಬಂದಿಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.












Click it and Unblock the Notifications