ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಷ ದಸರಾ: ಸಂಸದ ಪ್ರತಾಪ್‌ ಸಿಂಹಗೆ ಯಾಕೆ ಬೇಡ?

By ಮೈಸೂರು ಪ್ರತಿನಿಧಿ
|
Google Oneindia Kannada News

Recommended Video

ಸಂಸದ ಪ್ರತಾಪ್ ಸಿಂಹನಿಂದ ಮತ್ತೊಂದು ಎಡವಟ್ಟು

ಮೈಸೂರು, ಸೆಪ್ಟೆಂಬರ್ 28: ನಾಡ ಹಬ್ಬದ ಹೆಸರಿನಲ್ಲಿ ಪ್ರತಿ ವರ್ಷ ಜನರ ತೆರಿಗೆ ಹಣದಲ್ಲಿ ಆಚರಿಸುವ ಮೈಸೂರು ದಸರಾ ಈ ಬಾರಿ ಭಿನ್ನ ಕಾರಣಕ್ಕಾಗಿ ಸುದ್ದಿಕೇಂದ್ರದಲ್ಲಿದೆ. ಸಾಂಸ್ಕೃತಿಕ ನಗರಿಯಲ್ಲೀಗ ದಸರಾ ಮತ್ತು ಮಹಿಷ ದಸರಾ ಆಚರಣೆಯ ಸುತ್ತ ವಿವಾದವೊಂದು ಬೆಳೆದು ನಿಂತಿದೆ. ಇದಕ್ಕೆ ಮುನ್ನಡಿ ಬರೆದಿದ್ದು ಸಂಸದ ಪ್ರತಾಪ್‌ ಸಿಂಹ ಸಾರ್ವಜನಿಕವಾಗಿ ತೋರಿಸಿದ ಪ್ರತಾಪ. ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಹಾಕಲಾಗಿದ್ದ ಶಾಮಿಯಾನವನ್ನು ತೆರೆವುಗೊಳಿಸುವಂತೆ ಸಿಂಹ ಕೆರಳಿ ಮಾತನಾಡಿದ್ದು ಮೊದಲು ವರದಿಯಾಯಿತು.

ಮಹಿಷ ದಸರಾ ಆಚರಣೆಗೆ ಅನುಮತಿ ನೀಡಿದ್ದು ಯಾರು ಎಂದು ಪ್ರಶ್ನಿಸಿದ್ದರು. ಪರಿಣಾಮ, ಮಹಿಷ ದಸರಾ ಆಚರಣೆಗೆ ತಡೆಯೊಡ್ಡುವ ಬೆಳವಣಿಗೆಗಳು ನಡೆದವು. ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ತಡೆಯೊಡ್ಡುವ ಹಿನ್ನೆಲೆಯಲ್ಲಿ ಸೆಕ್ಷನ್ 144 ಹೇರಲಾಯಿತು.

ಕೊನೆಗೆ, ಅಶೋಕ ಪುರಂನಲ್ಲಿ ಮಹಿಷ ದಸರಾ ಆಚರಣೆ ಸುಮಾರು 6 ಸಾವಿರ ಜನರ ಸಮ್ಮುಖದಲ್ಲಿ ಶುಕ್ರವಾರ ನಡೆಯಿತು. ಇದೀಗ ಮಹಿಷ ದಸರಾಗೆ ಬಿಜೆಪಿ ಜನಪ್ರತಿನಿಧಿಗಳು ತಡೆಯೊಡ್ಡಿರುವ ಕಾರಣಕ್ಕೆ, ಸರ್ಕಾರಿ ದಸರಾಗೆ ಪ್ರತಿಭಟನೆ ಬಿಸಿ ಮುಟ್ಟಿಸುವುದಾಗಿ ದಲಿತ ಸಂಘಟನೆಗಳು ಬೀದಿಗೆ ಇಳಿದಿವೆ.

ಈ ಮೂಲಕ ಅಂತಾರಾಷ್ಟ್ರೀಯ ಆಕರ್ಷಣೆಗೆ ಕಾರಣವಾಗಿದ್ದ ದಸರಾದ ಝಗಮಗಿಸುವ ಬೆಳಕಿನಲ್ಲಿ ಸ್ಥಳೀಯ ಸಂಸ್ಕೃತಿ ಹಾಗೂ ಪ್ರತಿಸಂಸ್ಕೃತಿಗಳ ನಡುವೆ ಇರುವ ಕಂದಕವೊಂದರ ದರ್ಶನ ಹೊರಜಗತ್ತಿಗೂ ಆಗಿಹೋಗಿದೆ.

ಇಷ್ಟಕ್ಕೂ ಏನಿದು ಮಹಿಷ ದಸರಾ, ಯಾಕೆ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಇದರ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಹೊರಟರೆ ಮೈಸೂರಿನ ಇತಿಹಾಸ ಹಾಗೂ ಅದರ ಸುತ್ತ ಇರುವ ಎರಡು ಭಿನ್ನ ಪ್ರತಿಪಾದನೆಗಳು ಕಣ್ಣಿಗೆ ಬೀಳುತ್ತವೆ. ಅವುಗಳನ್ನು ಸರಳವಾಗಿ ವಿವರಿಸುವ ಪ್ರಯತ್ನ ಮಾಡಿದೆ ಈ ವರದಿ.

 ಮಹಿಷಾಸುರ ಎಂಬ ರಾಜ

ಮಹಿಷಾಸುರ ಎಂಬ ರಾಜ

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರೆ ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿ ಮೊದಲು ಕಣ್ಣಿಗೆ ಬೀಳುವುದು ಮಹಿಷಾಸುರನ ಬೃಹತ್ ಪ್ರತಿಮೆ. ಸಾಂಸ್ಕೃತಿಕ ನಗರಿಗೆ ಮೈಸೂರು ಎಂಬ ಹೆಸರು ಬರಲು ಕಾರಣ ಮಹಿಷಾಸುರ ಎಂದು ಇತಿಹಾಸ ತಜ್ಞರು ವಿಶ್ಲೇಷಿಸುತ್ತಾರೆ. ಇವತ್ತಿಗೂ ಅರಮನೆಯಲ್ಲಿ ದಸರಾ ಆಚರಣೆ ವೇಳೆ ಮಹಿಷ ಮಂಡಲದ ನಾಯಕನನ್ನು ನೆನಪಿಸಿಕೊಳ್ಳಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಬೌದ್ಧ ಧರ್ಮದ ಅನುಯಾಯಿಯಾಗಿದ್ದ ಮಹಿಷ ಮೂಲ ನಿವಾಸಿಗಳಿಗೆ ರಾಜನಾಗಿದ್ದ ಮತ್ತು ಆತ ಅತ್ಯಂತ ಜನಪರವಾದ ಆಡಳಿತ ನೀಡಿದ ಎಂಬುದನ್ನು ಇತಿಹಾಸಕಾರರು ಹೇಳುತ್ತಾರೆ.

 ತದ್ವಿರುದ್ಧವಾದ ಮತ್ತೊಂದು ಇತಿಹಾಸ

ತದ್ವಿರುದ್ಧವಾದ ಮತ್ತೊಂದು ಇತಿಹಾಸ

ಇದಕ್ಕೆ ತದ್ವಿರುದ್ಧ ನೆಲೆಯಲ್ಲಿ ಇನ್ನೊಂದು ಆಯಾಮದಿಂದ ಮಹಿಷನ ಸುತ್ತ ಇತಿಹಾಸವೊಂದನ್ನು ಕಟ್ಟಿಕೊಡಲಾಗಿದೆ. ವಿಜಯನಗರ ಅರಸರ ಕಾಲದಲ್ಲಿ ದಸರಾ ಆಚರಣೆಗೆ ಬಂತು. ಆಗ ಇದನ್ನು ಮಹಾನವಮಿ ಎಂದು ಕರೆಯಲಾಗುತಿತ್ತು. ವಿಜಯನಗರ ಸಾಮ್ರಾಜ್ಯ ಆಳಿದ ನಂತರ ರಾಜ್ಯದ ದಕ್ಷಿಣ ಭಾಗದ ಅರಸರಾದ ಯದು ವಂಶದ ಮೈಸೂರು ರಾಜರು ಇದನ್ನು ಮುಂದುವರೆಸಿಕೊಂಡು ಬಂದರು. ಮೈಸೂರಿನ ಅರಸ ರಾಜ ಒಡೆಯರ್‌ ಅವರ ಕಾಲದಲ್ಲಿ 1610ರಲ್ಲಿ ಮೊದಲ ಬಾರಿಗೆ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆ ಮಾಡಲಾಗಿದ್ದು, ನಂತರ ಇದನ್ನು ಸತತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಮೈಸೂರಿನ ಜನರಿಗೆ ತೊಂದರೆ ಕೊಡುತ್ತಿದ್ದ ಕಾರಣಕ್ಕಾಗಿ ನಾಡ ದೇವಿ ಚಾಮುಂಡೇಶ್ವರಿಯು ಮಹಿಷಾಸುರನನ್ನು ಸಂಹರಿಸಿದ ವಿಜಯವನ್ನು 9 ದಿನಗಳವರೆಗೆ ಆಚರಿಸಿಕೊಂಡು ಬರಲಾಗುತ್ತಿದೆ ಎಂಬುದು ದಸರಾಗೆ ಇರುವ ಹಿನ್ನೆಲೆ.

 ಕಳಂಕ ತೊಳೆಯುವ ಉದ್ದೇಶದ ಆಚರಣೆ

ಕಳಂಕ ತೊಳೆಯುವ ಉದ್ದೇಶದ ಆಚರಣೆ

ಇಂತಹದೊಂದು ಇತಿಹಾಸವನ್ನು ಒಪ್ಪದ ಮೈಸೂರಿನ ಪ್ರಗತಿಪರರು ಹಾಗೂ ದಲಿತ ಸಂಘಟನೆಗಳು ಮಹಿಷನ ಸುತ್ತ ಇರುವ ಕಳಂಕವನ್ನು ತೊಳೆಯುವ ಉದ್ದೇಶದಿಂದ 7 ವರ್ಷಗಳ ಹಿಂದೆ ಮಹಿಷ ದಸರಾ ಹೆಸರಿನಲ್ಲಿ ಆಚರಣೆಯೊಂದನ್ನು ಹುಟ್ಟುಹಾಕಿದರು. "ನಾವು ಯಾರ ವಿರುದ್ಧವೂ ಅಲ್ಲ. ಮೂಲ ನಿವಾಸಿಗಳ ಇತಿಹಾಸವನ್ನು ತಿರುಚಲಾಗಿದೆ. ಇದನ್ನು ಮುಂದಿನ ಪೀಳಿಗೆ ನಂಬಿಕೊಳ್ಳುವ ಅಪಾಯ ಇದೆ. ಹೀಗಾಗಿ ಮಹಿಷ ಎಂಬ ನಮ್ಮ ಜನರ ರಾಜನ ಸುತ್ತ ಕಟ್ಟಿರುವ ಸುಳ್ಳಿನ ಕಂತೆಯನ್ನು ಒಡೆಯುವ ಕಾರಣಕ್ಕೆ ಆಚರಣೆಯನ್ನು ಜಾರಿಗೆ ತಂದೆವು. ಅದಕ್ಕೆ ಈ ಬಾರಿ ಬಿಜೆಪಿ ರಾಜಕಾರಣಿಗಳು ವಿರೋಧ ವ್ಯಕ್ತಪಡಿಸಿದರು. ದಲಿತ ವಿರೋಧಿಗಳಾಗಿರುವ ಇವರಿಂದ ಇದು ನಿರೀಕ್ಷಿತ ನಡೆಯೇ ಆಗಿದೆ'' ಎನ್ನುತ್ತಾರೆ ಉಪನ್ಯಾಸಕ ಮಹೇಶ್ ಚಂದ್ರ ಗುರು.

ಸೈದ್ಧಾಂತಿಕ ಕಿತ್ತಾಟದ ಮತ್ತೊಂದು ಮುಖ

ಸೈದ್ಧಾಂತಿಕ ಕಿತ್ತಾಟದ ಮತ್ತೊಂದು ಮುಖ

ಹಾಗೆ ನೋಡಿದರೆ ಇದು ಈ ದೇಶದಲ್ಲಿ ಜಾರಿಯಲ್ಲಿರುವ ಬಲ- ಎಡ ಸಿದ್ಧಾಂತವಾದಿಗಳ ನಡುವಿನ ಸಂಘರ್ಷದ ಇನ್ನೊಂದು ಮುಖದಂತೆ ಕಾಣಿಸುತ್ತಿದೆ. ಹೊರಗಿನಿಂದ ಬಂದವರು ಹಾಗೂ ಮೂಲ ನಿವಾಸಿಗಳು ಎಂಬ ಭಿನ್ನ ನೆಲೆಯ ಇತಿಹಾಸದ ವ್ಯಾಖ್ಯಾನದ ಪರ- ವಿರೋಧಗಳ ನೆಲೆಯೇ ಇಲ್ಲಿಯೂ ಕಾಣಿಸುತ್ತದೆ. ಪ್ರಶ್ನೆ ಇರುವುದು ಆಚರಣೆಗಳ ವಿಚಾರ ಬಂದಾಗ. ಅದನ್ನು ಒಪ್ಪಬಹುದು ಅಥವಾ ಒಪ್ಪದೆಯೇ ಇರಬಹುದು. ಆದರೆ ಇನ್ನೊಬ್ಬರ ಆಚರಣೆಯನ್ನೇ ತಡೆಯುವುದು, ಅದೂ ಸಾಂವಿಧಾನಿಕ ಅಧಿಕಾರ ಬಳಸಿ ತಡೆಯೊಡ್ಡುವುದು ಎಷ್ಟು ಸರಿ ಎಂಬುದು? ಇದೀಗ ಮಹಿಷ ದಸರಾ ಆಚರಣೆಗೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸರ್ಕಾರಿ ದಸರಾಗೆ ಮೈಸೂರಿನಲ್ಲಿಯೇ ವಿರೋಧ ವ್ಯಕ್ತವಾಗಿದೆ. ಇಂತಹ ಸೈದ್ಧಾಂತಿಕ ಸಂಘರ್ಷದ ಪರಿಣಾಮ ಸಾಂಸ್ಕೃತಿಕ ಸಂಕೇತವೊಂದರ ಮೇಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ.

English summary
Mysore Dasara, which is celebrated every year in people's tax money in the name of dasara festival, is in the news for a different reason. In the cultural city, there is controversy surrounding the celebration of Dasara and Mahisha Dasara. Pratap simha, the MP, publicly opposed this. Why does MP Pratap simha not need Mahisha Dasara?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X