ಈ ಬಾರಿ ಗೆಲುವು ನನ್ನದೇ ಬರೆದಿಟ್ಟುಕೊಳ್ಳಿ : ಕಳಲೆ ವಿಶ್ವಾಸ
ನಂಜನಗೂಡು ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ 'ಒನ್ಇಂಡಿಯಾ ಕನ್ನಡ'ಕ್ಕೆ ನೀಡಿದ ಸಂದರ್ಶನದಲ್ಲಿ ಉಪಚುನಾವಣೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಅವರು ವಿ ಶ್ರೀನಿವಾಸ ಪ್ರಸಾದ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ಮೈಸೂರು, ಏಪ್ರಿಲ್ 6 : ಈ ಬಾರಿ ಗೆಲುವು ನನ್ನದೇ ಬರೆದಿಟ್ಟುಕೊಳ್ಳಿ ಎಂದು ನಂಜನಗೂಡು ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಎನ್.ಕೇಶವಮೂರ್ತಿ ವಿಶ್ವಾಸದಿಂದ ಹೇಳಿದ್ದಾರೆ.
ಏಪ್ರಿಲ್ 9, ಭಾನುವಾರದಂದು ನಡೆಯಲಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಒನ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. [ಉಪಚುನಾವಣೆ ದಿಕ್ಸೂಚಿ ಚುನಾವಣೆಯಲ್ಲ - ಸಿದ್ದರಾಮಯ್ಯ]
ನಂಜನಗೂಡು ವಿಧಾನ ಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ಚಾಲನೆ ನೀಡಿರುವ 600 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳು ಹಾಗೂ ನಾನು ಕ್ಷೇತ್ರದ ಜನತೆಯೊಂದಿಗೆ ಹೊಂದಿರುವ ನಿಕಟ ಸಂಪರ್ಕದಿಂದಾಗಿ ಈ ಉಪ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಕೇಶವ ಮೂರ್ತಿ ಹೇಳಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಚುನಾವಣೆ ಪ್ರತಿಷ್ಠೆಯ ಪ್ರಶ್ನೆ
ನಾನು ಸ್ಪರ್ಧೆಗಿಳಿಯುತ್ತಿರುವುದು ಇದು ಮೂರನೇ ಬಾರಿ. ಸಾರ್ವತ್ರಿಕ ಚುನಾವಣೆಯನ್ನು ಇದಕ್ಕೆ ಹೋಲಿಸಲಾಗುವುದಿಲ್ಲ. ಇಲ್ಲಿ ಅಭ್ಯರ್ಥಿಗಿಂತ ಬೇರೆಯವರ ಜವಾಬ್ದಾರಿಯೇ ಹೆಚ್ಚು. ಸಾಮಾನ್ಯ ಚುನಾವಣೆಯಲ್ಲಿ ಆಯಾ ಪಕ್ಷದ ಒಂದಿಬ್ಬರು ನಾಯಕರು ಮಾತ್ರ ಬರುತ್ತಾರೆ. ಆದರೆ ಈ ಚುನಾವಣೆಯಲ್ಲಿ ಬಹುತೇಕ ಮುಖಂಡರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಠಿಕಾಣಿ ಹೂಡಿದ್ದಾರೆ. ಆದ್ದರಿಂದ ಚುನಾವಣೆಗೆ ಮತ್ತಷ್ಟು ಕಳೆ ಬಂದಿದೆ.

ಕ್ಷೇತ್ರದ ಅಭಿವೃದ್ಧಿಯೇ ಶ್ರೀರಕ್ಷೆ
ವಿ.ಶ್ರೀನಿವಾಸಪ್ರಸಾದ್ ಅವರ ರಾಜೀನಾಮೆಯ ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಕ್ಷೇತ್ರದಾದ್ಯಂತ ಅಭಿವೃದ್ಧಿಯ ಮಹಾಪೂರವನ್ನೇ ಹರಿಸಿ ಕೆಲಸ ಮಾಡಿದ್ದಾರೆ. ಹಿಂದೆಯೂ ಇಲ್ಲಿ ಕೆ.ಬಿ. ಶಿವಯ್ಯ, ನನ್ನ ರಾಜಕೀಯ ಗುರು ಡಿ.ಟಿ. ಜಯಕುಮಾರ್ ಎಂ. ಮಹದೇವು ಹಾಗೂ ವಿ.ಶ್ರೀನಿವಾಸ ಪ್ರಸಾದ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆದರೆ ಈ ಪ್ರಮಾಣದ ಹಣ ಕ್ಷೇತ್ರಕ್ಕೆ ಹರಿದು ಬಂದಿರಲಿಲ್ಲ. ಅವರಿಂದ ಸಾಧ್ಯವಾಗದ 600 ಕೋಟಿ ರೂ.ಗಳ ಅಭಿವೃದ್ಧಿ ಕೆಲಸಗಳನ್ನು ಸಿದ್ದರಾಮಯ್ಯ ಸರ್ಕಾರ ಇಲ್ಲಿ ಪ್ರಾರಂಭಿಸಿದೆ. ಕ್ಷೇತ್ರದ ಜನತೆಯೊಂದಿಗೆ ನಾನು ಹೊಂದಿರುವ ನಿಕಟವಾದ ಅನುಭವ ನನಗೆ ಸಹಕಾರಿಯಾಗಿದೆ.[ಮೋದಿಗೆ ನನ್ನ ವಯಸ್ಸು ಗೊತ್ತಿದೆ, ನಾನೇ ಮುಂದಿನ ಸಿಎಂ - ಯಡಿಯೂರಪ್ಪ]

ನೀವು ಜೆಡಿಎಸ್ ತೊರೆದ ಬಗ್ಗೆ...
ನನ್ನನ್ನು ಬೆಳೆಸಿದ್ದು ಜನತಾ ದಳ. ಅಲ್ಲೇ ಬಹಳ ಕಾಲವಿದ್ದೆ. ಅದನ್ನು ಮರೆಯಲಾಗುತ್ತಿಲ್ಲ. ಆದರೆ ನನ್ನ ಮಾತೃಪಕ್ಷದ ಆಶೀರ್ವಾದದಿಂದಲೇ ನಾನೀಗ ಚುನಾವಣೆ ಎದುರಿಸುತ್ತಿದ್ದೇನೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ನೇರ ಹೋರಾಟದ ಈ ಕಣದಲ್ಲಿ ಜಾ.ದಳ ನನ್ನನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದೆ. ಜಾ.ದಳ ನನ್ನನ್ನು ಬೆಳೆಸಿದ್ದರಿಂದ ಕಾಂಗ್ರೆಸ್ ನಂತಹ ರಾಷ್ಟ್ರೀಯ ಪಕ್ಷ ನನ್ನನ್ನು ಗುರುತಿಸುವಂತಾಯಿತು.[ಅನುಕಂಪದ ಅಲೆಯಲ್ಲ, ಪತಿಯ ಜನಸೇವೆ ನನ್ನ ಗೆಲ್ಲಿಸುತ್ತೆ: ಗೀತಾ ಮಹಾದೇವಪ್ರಸಾದ್]

ವ್ಯಾಪಕ ಜನಬೆಂಬಲ...
2006 ರಲ್ಲಿ ಶಾಸಕರಾಗಿದ್ದ ಡಿ.ಟಿ. ಜಯಕುಮಾರ್ ಪಟ್ಟಣದಲ್ಲಿ ಒಳಚರಂಡಿ ಯೋಜನೆ ಪಾರಂಭಿಸಿದ್ದರು. ಈ ಕಾಮಗಾರಿ ಈವರೆಗೂ ಪೂರ್ಣವಾಗಿಲ್ಲ. ಶಾಸಕರಾಗಿದ್ದ ಎಂ.ಮಹದೇವು ಪ್ರಾರಂಭಿಸಿದ ಶ್ರೀಕಂಠೇಶ್ವರ ದೇವಾಲಯದ ಅಭಿವೃದ್ಧಿಯೂ ನಿಂತ ನೀರಾಗಿದೆ. ಇಂತಹ ಜನೋಪಯೋಗಿ ಕೆಲಸಗಳು ಜನಪತಿನಿಧಿಗಳ ಸಾಮರ್ಥ್ಯವನ್ನು ತೋರಿಸುತ್ತವೆ. ಹಾಗಾಗಿ ಪಟ್ಟಣದ ಜನತೆಯೂ ಸೇರಿದಂತೆ ಎಲ್ಲ 146 ಗಾಮ ಹಾಗೂ 28 ಗ್ರಾಮ ಪಂಚಾಯಿತಿಗಳಲ್ಲೂ ನನಗೆ ವ್ಯಾಪಕವಾದ ಬೆಂಬಲ ಗೋಚರವಾಗುತ್ತಿದೆ.[ಯಡ್ಡಿಯೂರಪ್ಪನವರದ್ದು ಉತ್ತರ ಕುಮಾರನ ಪೌರುಷ: ಉಗ್ರಪ್ಪ]

ಯಡಿಯೂರಪ್ಪ, ಶ್ರೀರಾಮುಲು, ಪ್ರಸಾದ್ ಅವರ ಸಾಮರ್ಥ್ಯದ ಬಗ್ಗೆ...
ಎಲ್ಲ ಮಹಾನ್ ನಾಯಕರೂ ಬಂದು ಮತಯಾಚಿಸಿದ್ದಾರೆ. ಆದರೆ ಇಲ್ಲಿನ ಜನತೆ ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ತೀರ್ಮಾನಿಸಿದೆ. ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು 2008 ರಲ್ಲಿ ಜಾ.ದಳದಿಂದ ಕಣಕ್ಕಿಳಿದಾಗ ಡಿ.ಟಿ. ಜಯಕುಮಾರ್ ಜಾ.ದಳ ತೊರೆದರು. ಆಗ ಮತದಾರರು ನನಗೆ 25000 ಮತಗಳನ್ನು ನೀಡಿದ್ದರು. 2013 ರಲ್ಲಿ ಎಂ.ಮಹದೇವು ನೇತೃತ್ವದಲ್ಲಿ ನಾನು ಚುನಾವಣೆಗೆ ಇಳಿದಾಗ 41 ಸಾವಿರ ಮತಗಳನ್ನು ಗಳಿಸಿದ್ದೆ. ಈಗ ನೇರ ಸ್ಪರ್ಧೆಯಿದೆ. ಇದರಲ್ಲಿ ಗೆಲುವು ಮಾತ್ರ ನನ್ನದೇ.[ಉಪಚುನಾವಣೆ: ಕಾಂಗ್ರೆಸ್ ಗೆ ಸಾಹಿತಿ, ಕಲಾವಿದರ ಬೆಂಬಲ]

ಜಾತ್ಯಾತೀತ ಮನೋಭಾವಕ್ಕೆ ಮಣೆ...
ವೀರಶೈವರೇ ಹೆಚ್ಚಿರುವ ಸಿದ್ದೇಗೌಡನ ಹುಂಡಿ, ಹೊಸಪುರ, ದಲಿತರು ಹೆಚ್ಚಿರುವ ಮುದ್ದಳ್ಳಿಯಲ್ಲಿ ನನಗೆ ಬಹುಮತ ಬಾರದಿದ್ದರೆ ಹೇಳಿ. ನಂಜನಗೂಡಿನ ಜನತೆ ಎಂದೂ ಜಾತಿ ನಾಯಕರಿಗೆ ಮಣೆ ಹಾಕಿಲ್ಲ. ಏನಿದ್ದರೂ ಜಾತ್ಯತೀತ ಮನೋಭಾವಕ್ಕಷ್ಟೆ ನನ್ನ ಮನ್ನಣೆ ಎಂದು ಮುಗುಳ್ನಗುತ್ತಲೇ ಉತ್ತರಿಸುತ್ತಾರೆ ಕೇಶವಮೂರ್ತಿ.[ಮತ ಕೇಳುವ ನೈತಿಕತೆ ಯಡಿಯೂರಪ್ಪನವರಿಗೆಲ್ಲಿದೆ ?: ಸಿದ್ದರಾಮಯ್ಯ]











Click it and Unblock the Notifications