ಸಿಎಂಗೆ ಈ ಸ್ಥಿತಿ ಬರೋಕೆ ನೀನೇ ಕಾರಣ: ಕೈ ನಾಯಕರು ಕೆರಳಿದ್ದು ಯಾರ ಮೇಲೆ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಪ್ರಕರಣವು ಸಿಎಂ ಸಿದ್ದರಾಮಯ್ಯ ಅವರನ್ನು ಬೇತಾಳದಂತೆ ಬೆನ್ನತ್ತಿದೆ. ಇದೇ ವಿಚಾರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿಯನ್ನು ಕೂಡ ಅಲುಗಾಡಿಸಿದೆ. ಇಷ್ಟಕ್ಕೆಲ್ಲ ಕಾರಣರಾದ ವ್ಯಕ್ತಿಯೊಬ್ಬರ ಮೇಲೆ ಕಾಂಗ್ರೆಸ್ ನಾಯಕರು ಕೆಂಡಾಮಂಡಲವಾಗಿದ್ದಾರೆ.
ಹೌದು, ಇಂದಿನಿಂದ ಮೂರು ದಿನಗಳ ಕಾಲ ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಬರಮಾಡಿಕೊಳ್ಳಲು ಅಲ್ಲಿನ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಮೈಸೂರು ಏರ್‌ಪೋರ್ಟ್ ಬಳಿ ಜಮಾಯಿಸಿದ್ದರು.

ಈ ವೇಳೆ ಸಿದ್ದರಾಮಯ್ಯ ಅವರ ಸ್ವಾಗತಕ್ಕೆ ಬಂದಿದ್ದ ಸ್ವಪಕ್ಷದವರೇ ಆದ ಮುಡಾ ಅಧ್ಯಕ್ಷ ಕೆ.ಮರಿಗೌಡ ಅವರಿಗೆ ಕಾಂಗ್ರೆಸ್ ನಾಯಕರು ಘೇರಾವ್ ಹಾಕಿ, ಹೈಡ್ರಾಮ ನಡೆಸಿರುವ ಘಟನೆ ವರದಿಯಾಗಿದೆ. ʼಇಷ್ಟಕ್ಕೆಲ್ಲ ನೀನೇ ಕಾರಣ....ಸಿಎಂ ಸಿದ್ದರಾಮಯ್ಯ ಅವರನ್ನು ಈ ಸ್ಥಿತಿಗೆ ತಂದಿದ್ದು ನೀನೇ' ಎಂದು ಮರಿಗೌಡ ಅವರ ವಿರುದ್ಧ ಎಲ್ಲರೂ ರೌಂಡಪ್ ಆಗಿದ್ದಾರೆ.
ಕೊನೆಗೆ ಮರಿಗೌಡ ಅವರನ್ನು ಅಲ್ಲಿಂದ ಕಾರು ಹತ್ತಿಸಿ ಕಳಿಸಿಬಿಟ್ಟರು ಎನ್ನಲಾಗಿದೆ. ಸಿಎಂ ಆಪ್ತನೂ ಎನ್ನಲಾದ ಮರಿಗೌಡ ಅಲ್ಲಿದ್ದವರ ಮನವೊಲಿಸಲು ಮುಂದಾದರೂ ಅವರ ಕೋಪ ತಣ್ಣಗಾಗಲಿಲ್ಲ. ಕೆಲವರು ಏಕವಚನದಲ್ಲಿ ಹಾಗೂ ಅವಾಚ್ಯ ಶಬ್ಧಗಳಿಂದ ಮರಿಗೌಡ ಅವರನ್ನು ನಿಂದಿಸಿದ್ದಾರೆ.
ನಿನ್ನ ಭಾಷಣ ನಮ್ಮತ್ರ ಬೇಡ, ಮೊದಲು ಇಲ್ಲಿಂದ ಜಾಗ ಖಾಲಿ ಮಾಡು. ಇಲ್ಲಾಂದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ವಾರ್ನ್ ಕೂಡ ಮಾಡಿದ್ದಾರಂತೆ. ಪರಿಸ್ಥಿತಿ ಬೇರೆ ಕಡೆ ತಿರುಗುವ ಮುನ್ನವೇ ಮರಿಗೌಡ ಅಲ್ಲಿಂದ ಹೊರಟಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ ಕಾಂಗ್ರೆಸ್ ಮುಖಂಡರೆಲ್ಲ ಮರೀಗೌಡ ಅವರಿಗೆ ಧಿಕ್ಕಾರ ಕೂಗಿದ್ದಾರೆ. ನಿನ್ನೊಬ್ಬನಿಂದಲೇ ಇಂದು ಸಿಎಂ ಸಿದ್ದರಾಮಯ್ಯ ಅವರಿಗೆ ಇಂತಹ ಪರಿಸ್ಥಿತಿ ಬಂದಿದೆ. ನೀನೇ ಕಾರಣ ಇದಕ್ಕೆಲ್ಲ ಎಂದು ಜೋರಾಗಿ ಕೋಪದ ಮಾತುಗಳನ್ನಾಡಿದ್ದಾರೆ ಎಂದು ವರದಿಯಾಗಿದೆ.
ಬಳಿಕ ವಿಶೇಷ ವಿಮಾನದಲ್ಲಿ ಮೈಸೂರಿಗೆ ಬಂದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡರು. ಈ ವೇಳೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಸಂವಿಧಾನದಿಂದ ಆಯ್ಕೆಯಾದ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ದೇಶದಲ್ಲಿ ಎಲ್ಲೆಲ್ಲಿ ವಿರೋಧಪಕ್ಷಗಳ ಸರ್ಕಾರವಿದೆಯೋ, ಅಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಇ.ಡಿ ಹಾಗೂ ರಾಜಭವನದ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.
ರಾಷ್ಟ್ರಪತಿಗಳಾಗಲಿ ಅಥವಾ ರಾಜ್ಯಪಾಲರಾಗಲಿ ಸಂವಿಧಾನದ ಪ್ರಕಾರ ಕೆಲಸ ಮಾಡಲು ನೇಮಕಗೊಂಡವರು. ಯಾವುದೇ ಚುನಾವಣೆಯ ಮೂಲಕ ಆಯ್ಕೆಯಾದವರಲ್ಲ. ಅವರು ಸಂವಿಧಾನದಲ್ಲಿ ಪ್ರಮುಖರು. ಆದರೆ ಜನಪ್ರತಿನಿಧಿಗಳು ಚುನಾವಣೆಯ ಮೂಲಕ ಆಯ್ಕೆಯಾಗಿ ಆಡಳಿತದಲ್ಲಿ ಪ್ರಮುಖರು. ಇಂತಹ ಪ್ರಮುಖ ವ್ಯತ್ಯಾಸವಿರುವಾಗ ಯಾವುದೇ ರಾಜ್ಯದ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಈ ವಿಷಯದ ಕುರಿತು ರಾಷ್ಟ್ರದಾದ್ಯಂತ ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು.
ಮುಡಾ ಪ್ರಕರಣದಲ್ಲಿ ಕಾನೂನು ಪ್ರಕಾರ ಹೋರಾಟ ಮಾಡುತ್ತೇನೆ. ನನ್ನ ಜೊತೆಗಿನ ಜನ ಬೆಂಬಲದಿಂದ ಬೆದರಿರುವ ಪ್ರತಿಪಕ್ಷಗಳು, ನನ್ನ ಮೇಲೆ ರಾಜಕೀಯ ಪ್ರೇರಿತ ಕೇಸ್ ಹಾಕಿರುವುದು ಇದೇ ಮೊದಲು. ನ್ಯಾಯ ನನ್ನ ಪರವಾಗಿದೆ, ಇದನ್ನು ಎದುರಿಸಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಸರ್ಕಾರಕ್ಕೆ ಕಳೆದ ಚುನಾವಣೆಯಲ್ಲಿ ಜನರ ಆಶೀರ್ವಾದ ಸಿಕ್ಕಿದೆ, ಅದಕ್ಕೆ ತಕ್ಕಂತೆ ನಾವು ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದೇವೆ. ಈ ಐದು ವರ್ಷದ ಅವಧಿಯಲ್ಲಿ ರಾಜ್ಯವನ್ನು ಅಭಿವೃದ್ಧಿಗೊಳಿಸಬೇಕೆಂದು ಜನಾದೇಶವಿದೆ. ಇದಕ್ಕೆ ರಾಜ್ಯಪಾಲರು ಅಡ್ಡಿಪಡಿಸಬಾರದು, ಅಡ್ಡಿಪಡಿಸಿದರೆ ನಾವು ಅನಿವಾರ್ಯವಾಗಿ ಪ್ರತಿರೋಧ ವ್ಯಕ್ತಪಡಿಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು.












Click it and Unblock the Notifications