Krishnaraja Congress Ticket: ಕೃಷ್ಣರಾಜ ಕ್ಷೇತ್ರದಿಂದ ಎಂ.ಕೆ ಸೋಮಶೇಖರ್‌ಗೆ ಮಣೆ
ಮೈಸೂರು, ಏಪ್ರಿಲ್ 15: ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟಿಸಿದ್ದು, ಮೈಸೂರಿನ ಕೃಷ್ಣರಾಜ ಕ್ಷೇತ್ರಕ್ಕೆ ಎಂ.ಕೆ.ಸೋಮಶೇಖರ್ ಹಾಗೂ ಚಾಮರಾಜ ಕ್ಷೇತ್ರದಲ್ಲಿ ಹರೀಶ್ ಗೌಡ ಅವರಿಗೆ ಟಿಕೆಟ್ ಘೋಷಿಸಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಚಾಮರಾಜ ಕ್ಷೇತ್ರದಲ್ಲಿ ಕಾರ್ಮಿಕರು ಹಾಗೂ ವಿದ್ಯಾವಂತರೇ ಹೆಚ್ಚು.
ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಂಕರಲಿಂಗೇಗೌಡ ಸತತ ಮೂರು ಬಾರಿ ಆಯ್ಕೆಯಾಗಿದ್ದರು. ಸದ್ಯ ಬಿಜೆಪಿಯಿಂದ ಹಾಲಿ ಶಾಸಕ ಎಲ್.ನಾಗೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ನಿಂದ ಹರೀಶ್ ಗೌಡ ಅವರಿಗೆ ಟಿಕೆಟ್ ಸಿಕ್ಕಿದೆ. ಹರೀಶ್ ಗೌಡ ಅವರು ಈ ಹಿಂದೆ ಜೆಡಿಎಸ್‌ನಲ್ಲಿ ಇದ್ದರು. ಕಳೆದ ಬಾರಿ ಜೆಡಿಎಸ್ ಹರೀಶ್ ಗೌಡ ಅವರಿಗೆ ಟಿಕೆಟ್ ನೀಡದೆ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ಟಿಕೆಟ್ ನೀಡಲಾಗಿತ್ತು. ಹಾಗಾಗಿ ಹರೀಶ್ ಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಇದೀಗ ಕಾಂಗ್ರೆಸ್ ಹೈಕಮಾಂಡ್ ಹರೀಶ್ ಗೌಡ ಅವರಿಗೆ ಟಿಕೆಟ್ ಘೋಷಿಸಿದೆ.

ಸಿದ್ದರಾಮಯ್ಯ ಅವರ ಆಪ್ತ ಶಾಸಕರಾಗಿರುವ ಎಂ.ಕೆ. ಸೋಮಶೇಖರ್ ಕಳೆದ ಚುನಾವಣೆಯಲ್ಲಿ ಇಲ್ಲಿ ಸೋಲು ಕಂಡಿದ್ದರು. ಈ ಬಾರಿ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಮತ್ತೆ ಎಂ.ಕೆ.ಸೋಮಶೇಖರ್ ಅವರಿಗೆ ಮಣೆ ಹಾಕಿದ್ದು, ಟಿಕೆಟ್ ಘೋಷಣೆ ಮಾಡಿದೆ. ಲಿಂಗಾಯತ ಸಮುದಾಯದ ಪ್ರದೀಪ್ ಕುಮಾರ್ ಹಾಗೂ ಬ್ರಾಹ್ಮಣ ಸಮುದಾಯದ ನವೀನ್ ಕುಮಾರ್ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ಇಬ್ಬರೂ ಯುವ ನಾಯಕರಿಗೆ ಮಣೆ ಹಾಕಿಲ್ಲ. ಜೆಡಿಎಸ್ ನಿಂದ ನಗರ ಪಾಲಿಕೆ ಸದಸ್ಯ ಕೆ. ವಿ.ಮಲ್ಲೇಶ್ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಲಾಗಿದೆ. ಬಿಜೆಪಿ ನಡೆ ಇನ್ನೂ ನಿಗೂಢವಾಗಿಯೇ ಇದೆ.
ಎಚ್.ಡಿ.ಕೋಟೆಗೆ ಜೆಡಿಎಸ್ ಅಭ್ಯರ್ಥಿ ಘೋಷಣೆ
ಎಚ್.ಡಿ.ಕೋಟೆಗೆ ಜಯಪ್ರಕಾಶ್ ಸಿ. ಅವರಿಗೆ ಜೆಡಿಎಸ್ ನಿಂದ ಟಿಕೆಟ್ ದೊರೆತಿದೆ. ಎಚ್.ಡಿ.ಕೋಟೆಯಲ್ಲಿ ನಾಯಕ ಸಮುದಾಯದ ಮತಗಳೇ ನಿರ್ಣಾಯಕ. ಇಲ್ಲಿ ಜೆಡಿಎಸ್ನ ಚಿಕ್ಕಮಾದು ಪ್ರಥಮ ಪ್ರಯತ್ನದಲ್ಲಿಯೇ ಗೆದ್ದಿದ್ದರು. ತಂದೆ ಅಕಾಲಿಕ ನಿಧನದ ನಂತರ ಕಳೆದ ಬಾರಿ ಅನಿಲ್ ಚಿಕ್ಕಮಾದು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಜೊತೆಗೆ ಗೆಲುವು ಕೂಡ ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಗೆದ್ದು ಬಿಜೆಪಿಗೆ ಹೋಗಿದ್ದ ಚಿಕ್ಕಣ್ಣ ಈಗ ಜೆಡಿಎಸ್ನಲ್ಲಿದ್ದಾರೆ. ಮಗ ಜಯಪ್ರಕಾಶ್‌ಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಯಿಂದ ಇನ್ನೂ ಅಭ್ಯರ್ಥಿ ಘೋಷಣೆ ಆಗಿಲ್ಲ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಟಿಕೆಟ್ ಸಿಕ್ಕಿದೆ.

ರಾಮದಾಸ್‌ಗೆ ಸಿಗುವುದೇ ಟಿಕೆಟ್?
ಬಿಜೆಪಿಯಿಂದ ಮೂರು ಬಾರಿ ಶಾಸಕರಾಗಿರುವ ರಾಮದಾಸ್ ಅವರಿಗೆ ಈ ಬಾರಿಯೂ ಟಿಕೆಟ್ ಸಿಗುತ್ತದೆಯೇ ಎಂಬ ಪ್ರಶ್ನೆ ಮತದಾರರಲ್ಲಿ ಪ್ರಶ್ನೆ ಮೂಡಿಸಿದೆ. ಅವರಿಗೆ ಟಿಕೆಟ್ ತಪ್ಪಿಸಬೇಕು ಎನ್ನುವ ಒಂದು ಗುಂಪು ಪ್ರಬಲ ಪೈಪೋಟಿ ನಡೆಸಿದೆ. ಈಗಾಗಲೇ ಪ್ರಬಲ ವಿಪ್ರ ಸಮುದಾಯ ರಾಮದಾಸ್ ವಿರುದ್ಧ ತಿರುಗಿ ಬಿದ್ದಿದೆ. ಇತ್ತ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಟಿಕೆಟ್ ಪಡೆಯಲು ಹರಸಾಹಸ ಮಾಡುತ್ತಿದ್ದಾರೆ ಎಂಬ ಮಾತು ಪ್ರಬಲವಾಗಿ ಹೇಳಿ ಬರುತ್ತಿದೆ.
ಕ್ಷೇತ್ರದ ಮತ್ತೊಬ್ಬ ಪ್ರಬಲ ಟಿಕೆಟ್ ಆಕಾಂಕ್ಷಿ ಎಂದರೆ ಅದು ಎಚ್.ವಿ.ರಾಜೀವ್. ಈ ಹಿಂದೆ ರಾಜೀವ್ ಬಿಜೆಪಿ ಸರಕಾರದ ಅವಧಿಯಲ್ಲಿ ಮುಡಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ, ಒಂದೂವರೆ ವರ್ಷ ಅಷ್ಟೇ ಅವಕಾಶ ನೀಡಲಾಗಿತ್ತು. ಈ ಬಗ್ಗೆಯೂ ರಾಜೀವ್ ಅವರಿಗೆ ಅಸಮಾಧಾನ ಇದೆ. ಈ ಹಿಂದೆ ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಕಟ್ಟಿದಾಗ ಎಚ್.ವಿ.ರಾಜೀವ್ ಕೆಜೆಪಿ ಪಕ್ಷದಿಂದ ಸ್ಪರ್ಧಿಸಿದ್ದರು. ರಾಮದಾಸ್ ಹಾಗೂ ರಾಜೀವ್ ಸ್ಪರ್ಧೆಯಿಂದ ವಿಪ್ರ ಸಮುದಾಯದ ವೋಟು ಇಬ್ಭಾಗ ಆದ ಕಾರಣ ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ.ಸೋಮಶೇಖರ್ ಸುಲಭವಾಗಿ ಗೆಲುವು ಸಾಧಿಸಿದ್ದರು.
ಒಟ್ಟು ಮೈಸೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ 4 ಸ್ಥಾನದಲ್ಲಿ ಜಯ ಸಾಧಿಸಿದ್ದರೆ, ಜೆಡಿಎಸ್ ಕೂಡ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ ಮೂರು ಸ್ಥಾನವನ್ನು ಗೆದ್ದಿತ್ತು. ಲೋಕಸಭೆ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಗೆಲುವು ಸಾಧಿಸಿದ್ದರು. ಈಗ ಇಲ್ಲಿನ ರಾಜಕೀಯ ವಾತಾವರಣ ಸಾಕಷ್ಟು ಬದಲಾಗಿದೆ.












Click it and Unblock the Notifications