ಬಿಜೆಪಿ, ಕಾಂಗ್ರೆಸ್ ನಿಂದ ರಾಜ್ಯ ಹಾಳಾಗಿದೆ ಎಂದ ದೇವೇಗೌಡರು
ನಂಜನಗೂಡು ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಬಗ್ಗೆ ತೀರ್ಮಾನವಾಗಿಲ್ಲ. ಕಾಂಗ್ರೆಸ್-ಬಿಜೆಪಿಯಿಂದ ರಾಜ್ಯ ಹಾಳಾಗಿದೆ ಎಂದು ನಂಜನಗೂಡಿನಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ
ಮೈಸೂರು, ಮಾರ್ಚ್ 2: ಮಾಜಿ ಪ್ರಧಾನಿ ದೇವೆಗೌಡ ಹಾಗೂ ಪತ್ನಿ ಚೆನ್ನಮ್ಮ ಗುರುವಾರ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲಕ್ಕೆ ತೆರಳಿ, ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು, ಉಪಚುನಾವಣೆ ಕುರಿತು ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ಮುಖಂಡರ ಜೊತೆ ಇನ್ನೂ ಚರ್ಚಿಸಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.[ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆ ಅಧಿಕಾರ: ದೇವೇಗೌಡ]

ಬಿಜೆಪಿ ಹಾಗೂ ಕಾಂಗ್ರೆಸ್ ಡೈರಿ ಪ್ರಕರಣದ ಕುರಿತು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಚರ್ಚೆ ಮಾಡುವುದು ಉಪಯೋಗವಿಲ್ಲ. ಈ ಎರಡು ಪಕ್ಷಗಳಿಂದ ರಾಜ್ಯದ ವ್ಯವಸ್ಥೆಯೇ ಹಾಳಾಗಿದೆ. ಆದ್ದರಿಂದ ಯಾರ ಕುರಿತು ಮಾತನಾಡಿದರೂ ನಿಷ್ಪ್ರಯೋಜಕ ಎಂದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಅನ್ನು ಮತದಾರರು ಕೈಹಿಡಿದು, ಎಚ್.ಡಿ.ಕುಮಾರಸ್ವಾಮಿ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.[ಸಭ್ಯತೆಯ ಎಲ್ಲೆ ಮೀರಲಾರೆ: ಹೆಚ್.ಡಿ.ದೇವೇಗೌಡ ಸ್ಪಷ್ಟನೆ]
ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ನಗರಾಧ್ಯಕ್ಷ ಭಾಸ್ಕರ್, ಶಿವಕುಮಾರ್, ಸಣ್ಣಪ್ಪಗೌಡ, ಹರ್ಷ, ದೇವರಸನ ಹಳ್ಳಿ ರವಿ ಸೇರಿದಂತೆ ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.












Click it and Unblock the Notifications