ಮುಸ್ಲಿಂಮರ ಓಲೈಕೆಗೆ ಎಚ್‌ಡಿಕೆ, ಸಿದ್ದರಾಮಯ್ಯ ನಡುವೆ ಪೈಪೋಟಿ
ಮೈಸೂರು, ಏಪ್ರಿಲ್ 07; "ಮುಸ್ಲಿಂಮರನ್ನು ಓಲೈಕೆ ಮಾಡಲು ಎಚ್‌ಡಿಕೆ, ಸಿದ್ದರಾಮಯ್ಯ ನಡುವೆ ಪೈಪೋಟಿ ಶುರುವಾಗಿದೆ. ನಮಗೆ ಹೆಚ್ಚು ಮುಸ್ಲಿಂ ಓಟುಗಳು ಬೇಕು ಎಂದು ಸ್ಪರ್ಧೆ ಮಾಡುತ್ತಿದ್ದಾರೆ" ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ ನಾರಾಯಣ ಹೇಳಿದರು.
ಗುರುವಾರ ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, "ಸಿದ್ದರಾಮಯ್ಯ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ" ಎಂದರು. ಅಲ್ ಖೈದಾ ವೀಡಿಯೋ ಹಿಂದೆ ಆರ್‌ಎಸ್ಎಸ್ ಕೈವಾಡ ಇದೆ ಎಂಬ ಸಿದ್ದರಾಮಯ್ಯ ಆರೋಪವನ್ನು ತಳ್ಳಿಹಾಕಿದರು.
"ಇಂತಹ ಸೂಕ್ಷ್ಮ ವಿಚಾರದ ಬಗ್ಗೆ ಈ ರೀತಿ ಯಾವುದೇ ಪುರಾವೆ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಮೊದಲು ಅಲ್ ಖೈದಾ ಸಂಘಟನೆಯ ಹೇಳಿಕೆ ಖಂಡಿಸಬೇಕು. ಇದನ್ನು ಬಿಟ್ಟು ಈ ರೀತಿ ಬೇಜಾವಾಬ್ದಾರಿಯಾಗಿ ಒಂದು ಸಂಘಟನೆ ಮೇಲೆ ಆರೋಪ ಮಾಡುವುದು ಸರಿಯಲ್ಲ. ಸಮಾಜ ಇದನ್ನು ಸೂಕ್ಷ್ಮವಾಗಿ ನೋಡುತ್ತಿದೆ" ಎಂದರು.

"ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಯಾವ ಬೆಲೆಯೂ ಇಲ್ಲ. ಹಿಂದೆ ಹಿಜಾಬ್ ಬಗ್ಗೆ ಮಾತಾಡುತ್ತಾ ಅದನ್ನು ಖಾವಿಗೆ ಹೋಲಿಸಿ ಜನರಿಂದ ಟೀಕೆಗೆ ಒಳಗಾಗಿದ್ದರು. ಈ ಹೇಳಿಕೆಯಿಂದಲ್ಲೂ ಸಿದ್ದರಾಮಯ್ಯ ಇದೇ ರೀತಿ ಟೀಕೆಗೆ ಒಳಗಾಗುತ್ತಾರೆ" ಎಂದು ಸಚಿವರು ಹೇಳಿದರು.
"ವೀಡಿಯೋ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರ ಬಗ್ಗೆ ಪೊಲೀಸರು ಮಾಹಿತಿಗಳನ್ನು ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಇಂತವರನ್ನು ವಿಚಾರಣೆ ಮಾಡಿ, ಹೀಗೆ ವಿಚಾರಣೆ ಮಾಡಿ ಎಂದು ನಾವು ಹೇಳುವುದು ಸರಿಯಲ್ಲ" ಎಂದು ಸಚಿವರು ಸ್ಪಷ್ಟಪಡಿಸಿದರು.
ಸಿಎಂ ಮೌನ ಮುರಿಯಬೇಕು ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, "ಮುಸ್ಲಿಂಮರ ಓಲೈಕೆ ಮಾಡಲು ಪೈಪೋಟಿ ಶುರುವಾಗಿದೆ. ನಮಗೆ ಹೆಚ್ಚು ಮುಸ್ಲಿಂ ಓಟುಗಳು ಬೇಕು ಎಂದು ಸ್ಪರ್ಧೆ ಮಾಡಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಮೌನಿಯಾಗಿಲ್ಲ. ಉತ್ತಮ ವಾಗ್ಮಿಗಳು, ಅವರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ಯಾವ ವಿಚಾರಕ್ಕೆ ಏನು ಹೇಳಬೇಕೋ ಹೇಳುತ್ತಾರೆ" ಎಂದರು.
ಬೆಲೆ ಏರಿಕೆ ವಿಚಾರವನ್ನು ಬೇರೆ ಕಡೆ ಸೆಳೆಯಲು ಭಾವನಾತ್ಮಕ ವಿಚಾರವನ್ನು ಎತ್ತಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಬಿಜೆಪಿಗೆ ಇನ್ನೂ ಅಂತಹ ಸ್ಥಿತಿ ಬಂದಿಲ್ಲ. ರಷ್ಯಾ ಉಕ್ರೇನ್ ಯುದ್ದದ ಪರಿಣಾಮ ತೈಲ ಆಮದಿನಲ್ಲಿ ವ್ಯತ್ಯಾಸವಾಗಿದೆ. ಹಣದುಬ್ಬರದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಪ್ರಧಾನಿ ಮೋದಿ ವಿಶ್ವದಲ್ಲೇ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಬೆಲೆ ಏರಿಕೆಯನ್ನೂ ಹಂತಹಂತವಾಗಿ ಕಡಿಮೆ ಮಾಡುತ್ತೇವೆ" ಎಂದು ಹೇಳಿದರು.












Click it and Unblock the Notifications