ವಿಜಯ್ ಪ್ರಕಾಶ್ ಹಾಡಿಗೆ ಭಾವುಕರಾಗಿ ಕಣ್ಣೀರು ಹಾಕಿದ ಕುಮಾರಸ್ವಾಮಿ
Recommended Video

ಮೈಸೂರು, ಅಕ್ಟೋಬರ್ 13: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಭಾವುಕ ಹೃದಯ ತುಂಬಿ ಬಂದು ನಿನ್ನೆ ಕಾರ್ಯಕ್ರಮವೊಂದರಲ್ಲಿ ಕಣ್ಣೀರು ಹಾಕಿದ್ದಾರೆ.
ಹೌದು, ನಿನ್ನೆ ಮೈಸೂರಿನ ದಸರಾದ 'ಯುವ ದಸರಾ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಅವರು, ಹಾಡೊಂದನ್ನು ಕೇಳಿ ಭಾವುಕರಾಗಿ ಕಣ್ಣೀರು ಹಾಕಿದರು.
ನಡೆದದ್ದು ಇಷ್ಟು, ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ವೇದಿಕೆ ಮೇಲೆ 'ಒಳಿತು ಮಾಡು ಮನುಸಾ, ನೀ ಇರೋದು ಮೂರು ದಿವಸ' ಹಾಡು ಹಾಡಿದರು. ಇದು ಕುಮಾರಸ್ವಾಮಿ ಅವರ ಮನಸ್ಸು ತಾಗಿತು.

ಹಾಡು ಮುಗಿಯುತ್ತಿದ್ದಂತೆ ಕುಮಾರಸ್ವಾಮಿ ಅವರು, ಹಾಡನ್ನು ಮತ್ತೊಮ್ಮೆ ಹಾಡುವಂತೆ ವಿಜಯ್‌ಪ್ರಕಾಶ್ ಅವರಲ್ಲಿ ಮನವಿ ಮಾಡಿಕೊಂಡರು. ಅಂತೆಯೇ ವಿಜಯ್ ಪ್ರಕಾಶ್ ಅವರು ತಮ್ಮ ಸುಶ್ರಾವ್ಯ ಕಂಠದಿಂದ ಮತ್ತೊಮ್ಮೆ ಭಾವಪೂರ್ಣವಾಗಿ ಹಾಡು ಹಾಡಿದರು.
ಹಾಡು ಕೇಳುತ್ತಾ, ಕೇಳುತ್ತಾ ಸಿಎಂ ಕುಮಾರಸ್ವಾಮಿ ಅವರ ಕಣ್ಣಾಲಿಗಳು ಒದ್ದೆಯಾದವು. ಹಾಡು ಮುಗಿಯುವಷ್ಟರಲ್ಲಿ ಹಲವು ಬಾರಿ ಅವರು ಕಣ್ಣೀರು ಒರೆಸುಕೊಂಡರು. ವೇದಿಕೆ ಮೇಲಿದ್ದ ದೊಡ್ಡ ಪರದೆಯ ಮೇಲೆ ಕುಮಾರಸ್ವಾಮಿ ಅವರು ಕಣ್ಣೀರು ಒರೆಸಿಕೊಳ್ಳುತ್ತಿರುವ ದೃಶ್ಯಗಳು ಕಾಣುತ್ತಿತ್ತು.
ಕುಮಾರಸ್ವಾಮಿ ಅವರು ಭಾವುಕರಾಗಿರುವುದು ಇದೇ ಮೊದಲೇನಲ್ಲ, ಕೆಲವು ದಿನಗಳ ಹಿಂದೆ ಪಕ್ಷದ ಕಾರ್ಯಕ್ರಮವೊಂದರಲ್ಲಿ 'ನಾನು ನೆಮ್ಮದಿಯಿಂದ ಸಿಎಂ ಕುರ್ಚಿಯ ಮೇಲೆ ಕೂತಿಲ್ಲ' ಎಂದು ಹೇಳಿ ಕಣ್ಣೀರು ಒರೆಸಿಕೊಂಡಿದ್ದರು ಇದು ವಿವಾದಕ್ಕೂ ಕಾರಣವಾಗಿತ್ತು.











Click it and Unblock the Notifications