ಸಿಎಂ ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತರಾಗಿದ್ದಾರೆ:ಶೋಭಾ ಕರಂದ್ಲಾಜೆ
ಮೈಸೂರು, ಜುಲೈ.27: ಇತ್ತ ಶಾಸಕ ಶ್ರೀರಾಮುಲು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೆಂಬಲವಾಗಿ ನಿಂತರೆ, ಇನ್ನೊಂದೆಡೆ ತಮ್ಮದೇ ಪಕ್ಷದ ನಾಯಕಿ ಸಂಸದೆ ಶೋಭಾ ಕರಂದ್ಲಾಜೆ ಪ್ರತ್ಯೇಕ ರಾಜ್ಯದ ಕೂಗಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
2ನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿರುವ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕೆಂಬ ಬೇಡಿಕೆ ಸರಿಯಲ್ಲ. ಪ್ರತ್ಯೇಕ ರಾಜ್ಯವಾದರೆ ಎಲ್ಲಾ ಸಮಸ್ಯೆಗಳಿಗೂ ಉತ್ತರ ಸಿಗುವುದಿಲ್ಲ.
ಕೃಷ್ಣ, ಮಹದಾಯಿ, ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ನ್ಯಾಯ ಸಿಗಬೇಕಾದರೆ ಇಡೀ ರಾಜ್ಯದ ಜನರು ಒಗ್ಗಟ್ಟಿನಿಂದ ಇರಬೇಕು.
ಆಂಧ್ರ, ತೆಲಂಗಾಣ ಪ್ರತ್ಯೇಕ ರಾಜ್ಯದಗಳಾದ ನಂತರ ಆ ರಾಜ್ಯಗಳು ದುರ್ಬಲವಾಗಿವೆ. ಆ ರಾಜ್ಯಗಳ ಸ್ಥಿತಿ ನಮಗೆ ಬರಬಾರದು. ಉತ್ತರ ಕರ್ನಾಟಕದ ಜನರ ಜೊತೆ ಬಿಜೆಪಿ ಸದಾಕಾಲ ಇರಲಿದೆ. ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಬಂದ್ ಗೆ ಕರೆ ನೀಡಿರುವುದಕ್ಕೆ ಆತಂಕ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ರಾಜನಿದ್ದಂತೆ. ರಾಜ್ಯದ ಎಲ್ಲಾ ಭಾಗಗಳ ಜನರ ಸಮಸ್ಯೆಗೆ ಮುಖ್ಯಮಂತ್ರಿ ಸ್ಪಂದಿಸಬೇಕು. ಆದರೆ ರಾಜ್ಯದ ಮುಖ್ಯಮಂತ್ರಿ ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತರಾಗಿದ್ದಾರೆ.
ಇದೇ ಕಾರಣದಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕೆಂಬ ಕೂಗು ಎದ್ದಿದೆ. ಎಂದು ಸಿ.ಎಂ ಕುಮಾರಸ್ವಾಮಿ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಟೀಕಾಪ್ರಹಾರ ನಡೆಸಿದರು. ರಾಜ್ಯ ಸಮ್ಮಿಶ್ರ ಸರ್ಕಾರ ಇನ್ನೂ ಟೇಕ್ ಆಫ್ ಆಗಿಯೇ ಇಲ್ಲ
ರೈತರ ಸಾಲಮನ್ನಾ ವಿಚಾರದಲ್ಲಿ ಈಗಲೂ ಗೊಂದಲ ಮುಂದುವರಿದಿದೆ. ಪರಿಣಾಮ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರವೂ 20ರಿಂದ 30ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಂದು ಶೋಭಾ ಅವರು ಮೈಸೂರಿನಲ್ಲಿ ವಾಗ್ದಾಳಿ ನಡೆಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಸಾವಿರ ಮೆಟ್ಟಿಲುಗನ್ನೇರಿ ಬಂದ ಶೋಭಾ ಕರಂದ್ಲಾಜೆಗೆ ಶಾಸಕ ನಾಗೇಂದ್ರ, ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದರು.












Click it and Unblock the Notifications