ಉಪ ಚುನಾವಣೆ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ: ಸಿದ್ದರಾಮಯ್ಯ ಭವಿಷ್ಯ
ಮೈಸೂರು, ನವೆಂಬರ್ 4: ಶಿರಾ ಹಾಗೂ ರಾಜರಾಜೇಶ್ವರಿನಗರ ಉಪ ಚುನಾವಣೆಯ ಫಲಿತಾಂಶದ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೋಟಕ ಮಾಹಿತಿ ನೀಡಿದರು.
ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿಯಲ್ಲಿ ಸಿಎಂ ಬದಲಾವಣೆ ಮಾಡುತ್ತಾರೆ. ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯುವುದಿಲ್ಲ, I am very confident ಯಡಿಯೂರಪ್ಪ ಬದಲಾಗ್ತಾರೆ ಎಂದು ಭವಿಷ್ಯ ನುಡಿದರು.
ನನಗೆ ದೆಹಲಿಯಿಂದ ಬಂದಿರುವ ಮಾಹಿತಿ ಆಧಾರದ ಮೇಲೆ ಹೇಳುತ್ತಿದ್ದೇನೆ. ನಾನು ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದು, ಅದು ಒಂದು ಕಾರಣ ಇರಬಹುದು. ಹಲವು ದಿನದಿಂದ ಸಿಎಂ ಬದಲಾವಣೆ ಮಾಡುವ ಚಿಂತನೆಯಲ್ಲಿ ಬಿಜೆಪಿ ಇದೆ ಎಂದರು.

ಕಾಂಗ್ರೆಸ್ ಗೆಲ್ಲುವ ಸಾಧ್ಯತೆ
ಆದ್ದರಿಂದ ಉಪ ಚುನಾವಣೆ ಫಲಿತಾಂಶದ ನಂತರ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಇದೇ ವೇಳೆ ಉಪ ಚುನಾವಣೆ ಕುರಿತು ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದೆ. ಶಿರಾದಲ್ಲಿ ಜಯಚಂದ್ರ ಗೆಲ್ಲಲಿದ್ದು, ಆರ್.ಆರ್ ನಗರದಲ್ಲಿ ಕುಸುಮಾ ಗೆಲ್ಲುವ ಸಾಧ್ಯತೆ ಇದೆ. ಇದು ಕಾಂಗ್ರೆಸ್ ಪರವಾದ ಮತಗಳಾಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕರ್ತರಿಗೆ ಸಾಮಾಜಿಕ ಅಂತರದ ಪಾಠ
ಶಿರಾದಲ್ಲಿ ಕಳೆದ ಬಾರಿ ಅಪಪ್ರಚಾರ ಆಗಿತ್ತು. ಆರ್.ಆರ್ ನಗರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಗೆದ್ದಿತ್ತು. ಜೊತೆಗೆ ನಾವೆಲ್ಲ ಪ್ರಚಾರ ಮಾಡಿದಾಗಲೂ ಜನರು ಕಾಂಗ್ರೆಸ್ ಪರ ಒಲವು ತೋರಿದ್ದರು. ಈ ಎಲ್ಲ ಕಾರಣದಿಂದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ತಿಳಿಸಿದರು. ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರು ತಕ್ಷಣ ಕಾರ್ಯಕರ್ತರಿಗೆ ಸಾಮಾಜಿಕ ಅಂತರದ ಪಾಠ ಮಾಡಿದರು. ಎಲ್ಲರೂ ದೂರ ಹೋಗಿ. ನನ್ನಿಂದ 6 ಅಡಿ ದೂರ ಇರಿ. ನನ್ನ ಅಕ್ಕ ಪಕ್ಕ ನಿಂತರೂ ನಾನು ಬರುವುದಿಲ್ಲವೆಂದರು.

ಟ್ರಂಪ್ ಖಚಿತವಾಗಿ ಸೋಲುತ್ತಾರೆ
ನೀವು ಅಲ್ಲಿ ನಿಂತರೆ ನಾನು ಮಾಧ್ಯಮಗಳಿಗೂ ಮಾತನಾಡುವುದಿಲ್ಲ. ಪಕ್ಕದಲ್ಲಿ ನಿಂತಿದ್ದ ಕಾರ್ಯಕರ್ತನನ್ನು ಸಿದ್ದರಾಮಯ್ಯ ದೂರ ತಳ್ಳಿದರು. ಅಮೆರಿಕಾದಲ್ಲಿ ಮೋದಿ ಹೆಸರು ನಡೆಯೋದಿಲ್ಲ. ಟ್ರಂಪ್ ಚುನಾವಣೆಯಲ್ಲಿ ಮೋದಿ ಹೆಸರು ಹೋಳಿಕೊಂಡು ಮತ ಕೇಳಿದ್ದರು. ಟ್ರಂಪ್ ಖಚಿತವಾಗಿ ಸೋಲು ಅನುಭವಿಸುತ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸದಿಂದ ಹೇಳಿದರು.

ದೇಶದ ಅರ್ಥ ವ್ಯವಸ್ಥೆ ಹಾಳು
ಅಮೆರಿಕಾ ಚುನಾವಣೆಯೇ ಬೇರೆ, ಅಲ್ಲಿನ ಜನ ಮೋದಿ ನೋಡಿ ಮತ ಹಾಕಲ್ಲ. ಅನಿವಾಸಿ ಭಾರತೀಯರೂ ಮೋದಿ ಮುಖ ನೋಡಿಕೊಂಡು ಮತ ನೀಡಲ್ಲ. ಭಾರತದಲ್ಲೇ ಮೋದಿ ವಿರುದ್ಧ ಜನಾಭಿಪ್ರಾಯ ಶುರುವಾಗಿದೆ. ದೇಶದ ಅರ್ಥ ವ್ಯವಸ್ಥೆ ಹಾಳು ಮಾಡಿದ್ದಾರೆ. ಜಿಡಿಪಿ ಪಾತಾಳಕ್ಕೆ ಕುಸಿದಿದೆ ಎಂದರು. ಯುವ ಜನರು ನರೇಂದ್ರ ಮೋದಿ ವಿರುದ್ಧ ಸಿಟ್ಟು ಹೊರಹಾಕುತ್ತಿದ್ದಾರೆ. ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮೇಲೆ ಈರುಳ್ಳಿ ಎಸೆದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.












Click it and Unblock the Notifications