ಚಿತ್ರಗಳು : ಸಿದ್ದರಾಮಯ್ಯ ಮೈಸೂರು ನಗರ ಪ್ರದಕ್ಷಿಣೆ
ಮೈಸೂರು, ಜುಲೈ 30 : ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಲು ನಗರ ಪ್ರದಕ್ಷಿಣೆ ನಡೆಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿಯೂ ನಗರ ಪ್ರದಕ್ಷಿಣೆ ಆರಂಭಿಸಿದ್ದಾರೆ. ಪಾಲಿಕೆ ಮತ್ತು ಲೋಕೋಪಯೋಗಿ ಇಲಾಖೆ ಕೈಗೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಬುಧವಾರ ಸರ್ಕಾರಿ ಅತಿಥಿ ಗೃಹದಿಂದ ಆರಂಭಗೊಂಡ ಮುಖ್ಯಮಂತ್ರಿಗಳ ನಗರ ಪ್ರದಕ್ಷಿಣೆ ಮೊದಲು ಪಿಪಲ್ಸ್ ಪಾರ್ಕ್ ತಲುಪಿತು. ಸ್ಥಳ ಪರಿಶೀಲಿಸಿದ ಮುಖ್ಯಮಂತ್ರಿಗಳು ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಂಥಾಲಯ ನಿರ್ಮಾಣ ಮಾಡುವ ಕುರಿತು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. [ಸಿದ್ದರಾಮಯ್ಯ ಬೆಂಗಳೂರು ಪ್ರದಕ್ಷಿಣೆ]
ಹಾರ್ಡಿಂಗ್ ವೃತ್ತ, ಪುರಭವನದ ಬಳಿಯ ಕಾಮಗಾರಿ, ದೇವರಾಜ ಮಾರುಕಟ್ಟೆ, ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು. ಕುಪ್ಪಣ್ಣ ಪಾರ್ಕ್‌ಗೆ ಭೇಟಿ ನೀಡಿ 8 ಕೋಟಿ ವೆಚ್ಚದಲ್ಲಿ ಗಾಜಿನ ಮನೆ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಮೈಸೂರು ಮಹಾನಗರ ಪಾಲಿಕೆ ಮೇಯರ್ ಆರ್.ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ. ಬಿ.ಪುಷ್ಪ ಅಮರನಾಥ್, ಶಾಸಕರಾದ ವಾಸು, ಸೋಮಶೇಖರ್, ಮುಡಾ ಅಧ್ಯಕ್ಷರಾದ ಮೋಹನ್ ಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಜೊತೆಗಿದ್ದರು.

ಪುರಭವನ ಬಳಿ ಕಾಮಗಾರಿ ವೀಕ್ಷಣೆ
ಪುರಭವನ ಮುಂಭಾಗದಲ್ಲಿ ಲೋಕೋಪಯೋಗಿ ಇಲಾಖೆ 4.95 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿ ಗೋಪುರ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ ಸಿದ್ದರಾಮಯ್ಯ ಅವರು, ನಿಗದಿಪಡಿಸಿರುವ ದಿನದೊಳಗೆ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಸೂಚಿಸಿದರು.

ದೇವರಾಜ ಮಾರುಕಟ್ಟೆಗೆ ಭೇಟಿ
ಶಿಥಿಲಗೊಂಡಿರುವ ದೇವರಾಜ ಮಾರುಕಟ್ಟೆಯ ಕಟ್ಟಡದ ಪಾರಂಪರಿಕತನವನ್ನು ಉಳಿಸಿಕೊಂಡು ಹೋಗಲು ಕೈಗೆತ್ತಿಕೊಳ್ಳಬೇಕಾದ 9 ಕೋಟಿ ರೂ. ಅಂದಾಜಿಸಲಾದ ಕಾಮಗಾರಿಗಾಗಿ ಮಾರುಕಟ್ಟೆಯ ಸ್ಥಳ ಪರಿಶೀಲನೆ ನಡೆಸಿದರು.

ಅಂಬೇಡ್ಕರ್ ಭವನ ಕಾಮಗಾರಿ ವೀಕ್ಷಣೆ
ಮೈಸೂರು ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತಿಯ ಒಟ್ಟು 14.66 ಕೋಟಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿಯನ್ನು ಪರಿಶೀಲಿಸಿದರು.

ಪಡುವಾರಹಳ್ಳಿಗೆ ಭೇಟಿ
ಪಡುವಾರಹಳ್ಳಿಯಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ನಿರ್ಮಾವಾಗುತ್ತಿರುವ ಸರ್ಕಾರಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, 33.60 ಕೋಟಿ ರೂ ವೆಚ್ಚದ ವಿದ್ಯಾರ್ಥಿನಿಲಯ ಕಟ್ಟಡಗಳ ಕಾಮಗಾರಿಯನ್ನು ಮುಖ್ಯಮಂತ್ರಿ ಅವರು ಪರಿಶೀಲಿದರು.

ಕುಪ್ಪಣ್ಣ ಪಾರ್ಕ್‌ಗೆ ಭೇಟಿ
ಬೆಂಗಳೂರಿನ ಲಾಲ್ ಬಾಗ್ ಮಾದರಿಯಲ್ಲಿ ಕುಪ್ಪಣ್ಣ ಪಾರ್ಕ್‍ನಲ್ಲಿ 8 ಕೋಟಿ ವೆಚ್ಚದಲ್ಲಿ ಗಾಜಿನ ಮನೆ ನಿರ್ಮಾಣ ಮಾಡಲಾಗುತ್ತದೆ. ಕಾಮಗಾರಿಗಳನ್ನು ಬರುವ ದಸರಾ ಆರಂಭಕ್ಕೂ ಮುನ್ನ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ದಸರಾ ಆರಂಭಗೊಳ್ಳುವ ಮೊದಲು ಮತ್ತೊಮ್ಮೆ ಮೈಸೂರು ನಗರ ಪ್ರದಕ್ಷಿಣೆ ನಡೆಸಲಾಗುತ್ತದೆ ಎಂದರು.

100 ಕೋಟಿ ಕಾಮಗಾರಿಗಳು
ಮೈಸೂರು ನಗರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಒತ್ತು ನೀಡಿ 100 ಕೋಟಿ ರೂ. ವಿಶೇಷ ಅನುದಾನದಲ್ಲಿ ಒಟ್ಟು 119 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 53 ಕಾಮಗಾರಿಗಳು ಪೂರ್ಣಗೊಂಡಿವೆ. ಇದಲ್ಲದೇ 47 ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, ಉಳಿದ 10 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.












Click it and Unblock the Notifications