ಚಾಮರಾಜನಗರ ಆಕ್ಸಿಜನ್ ದುರಂತ: ಮೈಸೂರು ಜಿಲ್ಲಾಡಳಿತದಿಂದ ಸ್ಪಷ್ಟನೆ
ಮೈಸೂರು, ಮೇ 3: ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯ ಕಾರಣಕ್ಕೆ 24 ಕೊರೊನಾ ಸೋಂಕಿತ ರೋಗಿಗಳು ಮೃತಪಟ್ಟಿರುವ ಬಗ್ಗೆ ಮೈಸೂರು ಜಿಲ್ಲಾಡಳಿತ ಸ್ಪಷ್ಟನೆ ನೀಡಿದ್ದು, ಮೈಸೂರಿನಿಂದ ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಅಲ್ಲಿನ ಕೋವಿಡ್ ಕೇಂದ್ರದಲ್ಲಿ ಆಕ್ಸಿಜನ್ ಕೊರತೆ ಉಂಟಾದ ಬೆನ್ನಲ್ಲೇ ಭಾನುವಾರ ರಾತ್ರಿ 12.30ರ ವೇಳೆಯಲ್ಲಿ ಮೈಸೂರಿನಿಂದ ಚಾಮರಾಜನಗರಕ್ಕೆ ಒಟ್ಟು 250 ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದೆ. ಆಕ್ಸಿಜನ್ ಲಿಕ್ವಿಡ್ ಬಳ್ಳಾರಿಯಿಂದ ಚಾಮರಾಜನಗರಕ್ಕೆ ಬರಬೇಕಿತ್ತು. ಅದು ಸರಿಯಾದ ಸಮಯದಲ್ಲಿ ಬಂದಿದ್ದೇಯಾ ಇಲ್ಲವೋ ಗೊತ್ತಿಲ್ಲ ಎಂದು ತಿಳಿಸಿದೆ.

ಆದರೆ, ಚಾಮರಾಜನಗರದವರ ಬೇಡಿಕೆಯಂತೆ ಮಾನವೀಯ ದೃಷ್ಟಿಯಿಂದ ಆಕ್ಸಿಜನ್ ಸಿಲಿಂಡರ್ ಕಳಿಸಲಾಗಿದ್ದು, ಈ ವಿಚಾರದಲ್ಲಿ ಮೈಸೂರು ಜಿಲ್ಲಾಡಳಿತ ವಿಳಂಬ ಮಾಡಿಲ್ಲ. ನಾವು ಅಧಿಕೃತವಾಗಿ 250 ಆಕ್ಸಿಜನ್ ಸಿಲಿಂಡರ್ ಭಾನುವಾರ ಮಧ್ಯರಾತ್ರಿಯ ವೇಳೆಗೆ ಕಳಿಸಿರುವುದು ದಾಖಲೆಯಲ್ಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ ಸ್ಪಷ್ಟಪಡಿಸಿದೆ.

ಮೈಸೂರಿನ ಸದರನ್ ಗ್ಯಾಸ್ ನಿಂದ 210 ಹಾಗೂ ಮೈಸೂರು ಜಿಲ್ಲಾ ಆಸ್ಪತ್ರೆಯಿಂದ 40 ಆಕ್ಸಿಜನ್ ಗ್ಯಾಸ್ ಸಿಲಿಂಡರ್ ಚಾಮರಾಜನಗರಕ್ಕೆ ಭಾನುವಾರ ಮಧ್ಯರಾತ್ರಿಯೆ ರವಾನೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾಡಳಿತದಿಂದ ಮಾಹಿತಿ ನೀಡಲಾಗಿದೆ.












Click it and Unblock the Notifications