ಸರ್ಕಾರದ ಮುಂದೆ ರೈತರ ಸಾಲು ಸಾಲು ಬೇಡಿಕೆ: ಕೊನೆಯ ಅಸ್ತ್ರಕ್ಕೆ ಮುಂದಾದ ಮೈಸೂರಿನ ಅನ್ನದಾತರು
ಮೈಸೂರು, ಸೆಪ್ಟೆಂಬರ್ 19: ತಿಂಗಳ ಕೊನೆಯೊಳಗೆ ರೈತರ ಸಮಸ್ಯೆ ಬಗೆಹರಿಸಿದಿದ್ದರೆ ಮುಖ್ಯಮಂತ್ರಿಗಳ ನಿವಾಸದ ಮುಂದೆ ರೈತರ ನಿರಂತರ ಧರಣಿ ನಡೆಸುತ್ತೇವೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿ ಕೆರೆಹುಂಡಿ ಭಾಗ್ಯರಾಜ್ ತಿಳಿಸಿದ್ದಾರೆ. ರೈತರ ಸಮಸ್ಯೆ ಬಹಳ ಕಠಿಣವಾಗಿದ್ದು ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ತಕ್ಷಣ ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ರೈತರು ಆಗ್ರಹಿಸಿದ್ದಾರೆ.
ಮೈಸೂರಿನ ಕುವೆಂಪು ಪಾರ್ಕಿನಲ್ಲಿ ನಡೆದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ರೈತರ ಕುಂದು ಕೊರತೆ ಸಭೆಯಲ್ಲಿ ರೈತರು ತಮ್ಮ ಮುಂದಿನ ನಿಲುವನ್ನು ತಿಳಿಸಿದ್ದಾರೆ.

ರೈತರ ಕಬ್ಬಿನ ಬಾಕಿ ಪ್ರತಿ ಟನ್ ಕಬ್ಬಿಗೆ ಸರ್ಕಾರದ ಹೆಚ್ಚುವರಿ 150 ರೂಪಾಯಿ ಆದೇಶದ ಪ್ರಕಾರ 950 ಕೋಟಿ ರೂಪಾಯಿ ರೈತರಿಗೆ ಕಾರ್ಖಾನೆಗಳಿಂದ ಕೋಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ 4000 ನಿಗದಿ ಮಾಡಬೇಕು. ಕಾರ್ಖಾನೆಯ ಮುಂಭಾಗ ಎಪಿಎಂಸಿಯ ಮುಖಾಂತರ ತೂಕದ ಯಂತ್ರ ಅಳವಡಿಕೆ ಮಾಡಬೇಕು. ಕಟಾವು ಸಾಗಾಣಿಕೆ ವೆಚ್ಚದ ಮಾನದಂಡ ಇಲ್ಲ ಜೊತೆಗೆ ಕಾರ್ಖಾನೆಗಳಿಂದ ಮೋಸ ಆಗುತ್ತಿದ್ದು ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಭಾಗ್ಯರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಪಂಪು ಸೆಟ್ಟುಗಳಿಗೆ ಹೊಸ ಸಂಪರ್ಕ ಪಡೆಯಲು ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು. ಪಂಪ್ಸೆಟ್ಟುಗಳ ಆರ್ ಆರ್ ನಂಬರ್‌ಗೆ ಆಧಾರ್ ಲಿಂಕ್ ಕೈಬಿಡಬೇಕು. ಹಾಲು ಉತ್ಪಾದಕರಿಗೆ ಸರ್ಕಾರದಿಂದ ಕೊಡುತ್ತಿದ್ದ ಕಳೆದ ವರ್ಷದ ಪ್ರೋತ್ಸಾಹ ಧನದ 700 ಕೋಟಿ ಬಾಕಿಯನ್ನು ತಕ್ಷಣ ರೈತರಿಗೆ ನೀಡಬೇಕು. ರೈತರ ಹೆಸರಿನಲ್ಲಿ ಹಾಲಿನ ದರ ಏರಿಕೆ ಮಾಡಿರುವುದನ್ನು ಮತ್ತು ಮುಂದೆ ಮುಖ್ಯಮಂತ್ರಿಗಳು ಸುಳಿವು ನೀಡುವ ರೀತಿ ಹಾಲಿನ ದರ ಏರಿಕೆಯ ಹೆಚ್ಚುವರಿ ಹಣವನ್ನು ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ಅಧಿವೇಶನದಲ್ಲಿ ನಾಲೆಗಳಿಗೆ ವಿದ್ಯುತ್ ಮೋಟಾರ್ ಅಳವಡಿಸಿ ಕೃಷಿಗೆ ನೀರು ತೆಗೆದುಕೊಂಡರೆ ಎರಡು ವರ್ಷ ಜೈಲು ಮತ್ತು ಎರಡು ಲಕ್ಷದವರೆಗಿನ ದಂಡವನ್ನು ತಕ್ಷಣ ಕೈಬಿಡಬೇಕು. ಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು. ಜಿಂದಾಲ್‌ಗೆಗೆ ಭೂಮಿ ನೀಡುವುದನ್ನು ಕೈಬಿಡಬೇಕು. ಎಲ್ಲಾ ಬೆಳೆಗಳಿಗೂ ಕಾನೂನು ಬದ್ಧ ಎಂಎಸ್‌ಪಿಯನ್ನು ಘೋಷಣೆ ಮಾಡಬೇಕು.

ಕಾಡು ಪ್ರಾಣಿಗಳ ಹಾವಳಿಗೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡು ಕಾಡಿನಿಂದ ನಾಡಿಗೆ ಪ್ರಾಣಿಗಳು ಬರದಂತೆ ತಡೆಯಬೇಕು. ಆನೆ ಚಿರತೆ ಕಾಡು ಹಂದಿ ಮತ್ತು ನವಿಲು ಜಿಂಕೆ ಗಳ ಬೆಳೆ ನಷ್ಟಕ್ಕೆ ವೈಜ್ಞಾನಿಕ ಬೆಳೆ ನಷ್ಟ ನೀಡಬೇಕು. ಬಾಳೆ ಬೆಳೆಗಾರರಿಗೆ ಕಳೆದ ಮೂರು ತಿಂಗಳ ಹಿಂದೆ ಮೈಸೂರು ಮತ್ತು ಚಾಮರಾಜನಗರದಲ್ಲಿ ತೀವ್ರ ಬಿರುಗಾಳಿಯಿಂದ ನೊಂದಿರುವ ರೈತರಿಗೆ ವಿಶೇಷ ಪ್ಯಾಕೇಜ್ ಮೂಲಕ ಬೆಳೆ ನಷ್ಟ ನೀಡಲು ರೈತರು ಒತ್ತಾಯಿಸಿದ್ದಾರೆ.
ಈ ಎಲ್ಲಾ ಬೇಡಿಕೆಗಳನ್ನು ಒತ್ತಾಯಿಸಿ ನಿರಂತರ ಚಳುವಳಿಯನ್ನು ನಡೆಸಿದರೂ ಸರ್ಕಾರ ಕ್ರಮ ಕೈಗೊಳ್ಳದ ಕಾರಣ ಮುಖ್ಯಮಂತ್ರಿಗಳ ನಿವಾಸದ ಮುಂದೆ ನಿರಂತರ ಧರಣಿ ನಡೆಸಲು ಇಂದಿನ ಸಭೆಯಲ್ಲಿ ರೈತರು ತೀರ್ಮಾನಿಸಿದ್ದಾರೆ. ಮುಖ್ಯಮಂತ್ರಿಗಳು ಮೈಸೂರಿಗೆ ಬಂದಾಗ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ಅಥವಾ ಭೇಟಿ ಮಾಡಿಸಿ ಸಮಸ್ಯೆ ಬಗೆಹರಿಸಲು ಕೋರುತ್ತೇವೆ. ಇಲ್ಲವಾದರೆ ನಿರಂತರ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಮುಖಂಡರು ತಿಳಿಸಿದ್ದಾರೆ.












Click it and Unblock the Notifications