ಮೈಸೂರಿನಲ್ಲಿ ಚುನಾವಣೆ ಕಾವಿನ ಮಧ್ಯೆ ಹೆಚ್ಚುತ್ತಿದೆ ಸರಗಳ್ಳತನ
ಮೈಸೂರು, ಏಪ್ರಿಲ್ 5:ಮೈಸೂರಿನಲ್ಲಿ ದಿನೇ ದಿನೇ ಚುನಾವಣಾ ಕಣ ರಂಗೇರುತ್ತಿದೆ.ಇತ್ತ ಎಲ್ಲಾ ಖಾಕಿ ಪಡೆ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮತ್ತೊಂದು ಕಡೆ ದಿನದಿಂದ ದಿನಕ್ಕೆ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿವೆ.
ಮಾರ್ಚ್ ತಿಂಗಳಲ್ಲಿ 9 ಕಡೆ ಸರಗಳ್ಳತನ ನಡೆದಿದೆ. ಆದರೂ ಸರಗಳ್ಳರ ಜಾಡು ಪತ್ತೆಯಾಗಿಲ್ಲ. ಕಳೆದೊಂದು ವಾರದಿಂದ ನಿತ್ಯವೂ ಸರಗಳ್ಳತನ ನಡೆಯುತ್ತಿದೆ. ಒಂಟಿ ಮಹಿಳೆಯರೇ ಕಳ್ಳರ ಗುರಿಯಾಗಿದ್ದಾರೆ. ವೃದ್ಧ ಮಹಿಳೆಯರೂ ಸಹ ಸರ ಕಳೆದುಕೊಳ್ಳುತ್ತಿದ್ದಾರೆ.
ಕೃಷ್ಣರಾಜ ಹಾಗೂ ದೇವರಾಜ ಉಪವಿಭಾಗಗಳಲ್ಲಿ ಹೆಚ್ಚಾಗಿ ಈ ಪ್ರಕರಣಗಳು ನಡೆದಿದ್ದು, ಕಳ್ಳರು ತಮ್ಮ ಕಾರ್ಯಕ್ಷೇತ್ರವನ್ನು ಇನ್ನಷ್ಟು ವಿಸ್ತರಿಸಿಕೊಂಡಿದ್ದಾರೆ. ಸಂಜೆ ವೇಳೆಯಲ್ಲಿ ಮಾತ್ರ ಕೈಚಳಕ ತೋರುತ್ತಿದ್ದ ಕಳ್ಳರು ಇದೀಗ ಮಧ್ಯಾಹ್ನದ ವೇಳೆಯೂ ಕಳವಿಗೆ ಇಳಿದಿದ್ದಾರೆ. ಹೆಚ್ಚಾಗಿ ಸರಣಿ ಕಳ್ಳತನಗಳನ್ನು ಮಾಡದ ಇವರು ಒಂದು ಅಥವಾ ಎರಡು ಕಳವಿಗಷ್ಟೇ ಸೀಮಿತರಾಗಿ ಕೃತ್ಯ ಎಸಗುತ್ತಿದ್ದಾರೆ.

ಎಲ್ಲೂ ತಮ್ಮ ಕುರುಹು ಬಿಟ್ಟುಕೊಡದೇ ಪೊಲೀಸರ ಕಣ್ಣು ತಪ್ಪಿಸುತ್ತಿದ್ದಾರೆ. ಹಲವು ಪ್ರಕರಣಗಳಲ್ಲಿ ಹಿಂಭಾಗದಿಂದ ಬಂದು ಸರ ಕಿತ್ತುಕೊಂಡು ಹೋಗಿದ್ದಾರೆ. ಇದರಿಂದ ಕಳ್ಳರ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ನಿರ್ಜನ ಪ್ರದೇಶಗಳು ಹಾಗೂ ವಿರಳ ಜನಸಂಚಾರ ಇರುವ ಅವಧಿಯಲ್ಲಿ ಹೆಚ್ಚು ಕಳ್ಳತನಗಳು ನಡೆದಿವೆ.
ಕೆಲವು ವೇಳೆ ಒಬ್ಬನೇ ವ್ಯಕ್ತಿ ಈ ಕೃತ್ಯ ಎಸಗಿದ್ದರೆ, ಮತ್ತೆ ಕೆಲವೆಡೆ ಇಬ್ಬರು ಭಾಗಿಯಾಗಿರುವುದು ಕಂಡು ಬಂದಿದೆ.ಒಟ್ಟಾರೆ ಪೊಲೀಸರು ಒಂದೆಡೆ ಬ್ಯುಸಿಯಾದರೆ, ಇತ್ತ ಕಡೆ ಕಳ್ಳರು ತಮ್ಮ ಕೈಚಳಕ ತೋರಿಸುವಲ್ಲಿ ಭಾಗಿಯಾಗುತ್ತಿರುವುದು ಜನರ ನಿದ್ದೆಗೆಡಿಸುತ್ತಿದೆ.












Click it and Unblock the Notifications