ಪ್ರಪಂಚದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಮೊದಲ ಮಹಿಳಾ ಸೇನಾಧಿಕಾರಿಯಾಗಿ ಮೈಸೂರಿನ ಸುಪ್ರಿತಾ ನೇಮಕ
ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲು ದೇಶದ ಮೊದಲ ಭಾರತೀಯ ಸೇನಾ ಅಧಿಕಾರಿಯಾಗಿ (ಆರ್ಮಿ ಏರ್‌ಡಿಫೆನ್ಸ್) ಮೈಸೂರಿನ ಸುಪ್ರಿತಾ ಸಿ.ಟಿ. ಆಯ್ಕೆಯಾಗಿದ್ದಾರೆ.
ಮೂಲತಃ ಚಾಮರಾಜನಗರದ ಸುಪ್ರಿತಾ ಮೈಸೂರಿನ ಸರ್ದಾರ್ ವಲ್ಲಭಬಾಯಿ ನಗರದ ನಿವಾಸಿ. ಇವರ ತಂದೆ ತಿರುಮಲ್ಲೇಶ್ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ತಲಕಾಡು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ನಿರ್ಮಲ ಗೃಹಿಣಿಯಾಗಿದ್ದು, ಅಕ್ಕ ಸುಶ್ಮಿತಾ ಮೈಸೂರು ಆಯುರ್ವೇದ ಆಸ್ಪತ್ರೆಯಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಭಾಗದಲ್ಲಿ ತಜ್ಞ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸುಪ್ರಿತಾ ಅವರು ಮೈಸೂರಿನ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಎಲ್ಎಲ್‌ಬಿ ಪದವಿ ಹಾಗೂ ಎನ್‌ಸಿಸಿ, ಏರ್ ವಿಂಗ್ 'ಸಿ' ಸರ್ಟಿಫಿಕೇಟ್ ಪಡೆದಿದ್ದರು. 2021ರಲ್ಲಿ ಭಾರತೀಯ ಸೇನಾ ಪಡೆ ಸಿಯಾಚಿನ್‌ನಲ್ಲಿ ಸುಪ್ರಿತಾ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿ ತರಬೇತಿಯ ನಂತರ ವಾಯುಪಡೆಗೆ ನಿಯೋಜನೆಯಾಗಿದ್ದರು.
2024ರಲ್ಲಿ ಪತಿ ಮೇಜರ್ ಜೆರ್ರಿ ಬ್ಲೇಜ್ ಅವರೊಂದಿಗೆ ರಾಜಪಥ್ ಪೆರೇಡ್‌ನಲ್ಲಿ ಭಾಗವಹಿಸಿದ್ದರು. ಅನಂತನಾಗ್, ಜಬ್ಬಾಲ್ಪರ್ ಹಾಗೂ ಲೇಹ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ಕಠಿಣ ತರಬೇತಿಯಲ್ಲಿ ತೇರ್ಗಡೆಯಾಗಿ ಬಳಿಕ ಸಿಯಾಚಿನ್‌ಗೆ ಆಯ್ಕೆಯಾಗಿದ್ದಾರೆ.
ಸೇನೆಯಿಂದ ಟ್ವೀಟ್
"ಅಡೆತಡೆಗಳನ್ನು ಮುರಿಯುವುದು....ಸವಾಲುಗಳನ್ನು ಜಯಿಸುವುದು....ಸಿಯಾಚಿನ್ ವಾರಿಯರ್ಸ್‌ನ ಲೀಗ್‌ಗೆ ಕ್ಯಾಪ್ಟನ್ ಸುಪ್ರೀತಾ ಸಿ ಟಿ ಸೇರಿದ್ದಾರೆ. ಆಕೆಯ ನಿರಂತರ ಶಕ್ತಿ ಮತ್ತು ದೃಢಸಂಕಲ್ಪದೊಂದಿಗೆ, ಆಕೆ ಈಗ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕಾರ್ಯಾಚರಣೆಗೆ ನಿಯೋಜನೆಗೊಂಡಿದ್ದಾಳೆ" ಎಂದು ಭಾರತೀಯ ಸೇನೆಯ ಹೆಚ್ಚುವರಿ ಡೈರೆಕ್ಟರೇಟ್ ಜನರಲ್ ಆಫ್ ಪಬ್ಲಿಕ್ ಇನ್ಫಾರ್ಮೇಶನ್ (ADG PI) ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.












Click it and Unblock the Notifications