ಉಪಚುನಾವಣೆ ದಿಕ್ಸೂಚಿ ಚುನಾವಣೆಯಲ್ಲ – ಸಿದ್ದರಾಮಯ್ಯ
"ನೋಡಿ ನಾವು ಮತಯಾಚನೆ ಮಾಡುವ ಪರಿ ನೋಡಿದ್ರೆ ಜನರು ನಮಗೆ ಓಟು ಹಾಕೋದು ಪಕ್ಕಾ ಆಗಿದೆ. ಇದರಲ್ಲಿ ಡೌಟ್ ಇಲ್ಲ,” ಎಂದು ಮುಗುಳ್ನಗುತ್ತಲೇ ತಮ್ಮ ಮಾತಿನ ವರಸೆ ಶುರುವಿಟ್ಟುಕೊಂಡವರು ಮುಖ್ಯಮಂತ್ರಿ ಸಿದ್ಧರಾಮಯ್ಯ.
ಮೈಸೂರು, ಏಪ್ರಿಲ್ 6 : "ನೋಡಿ ನಾವು ಮತಯಾಚನೆ ಮಾಡುವ ಪರಿ ನೋಡಿದ್ರೆ ಜನರು ನಮಗೆ ಓಟು ಹಾಕೋದು ಪಕ್ಕಾ ಆಗಿದೆ. ಇದರಲ್ಲಿ ಡೌಟ್ ಇಲ್ಲ," ಎಂದು ಮುಗುಳ್ನಗುತ್ತಲೇ ತಮ್ಮ ಮಾತಿನ ವರಸೆ ಶುರುವಿಟ್ಟುಕೊಂಡವರು ಮುಖ್ಯಮಂತ್ರಿ ಸಿದ್ಧರಾಮಯ್ಯ.
ನಂಜನಗೂಡು ಮತ್ತು ಗುಂಡ್ಲುಪೇಟೆ "ಉಪಚುನಾವಣೆ ಘೋಷಣೆಯಾದ ಮೇಲಂತೂ ನೋಡ್ರಿ, ನಮಗೆ ನಿದ್ದೆ, ಊಟ ಏನು ಸೇರಿದಹಂಗೆ ಆಗಿದೆ. ನಿಜಾ ಹೇಳಬೇಕಂದ್ರೆ ಈ ಚುನಾವಣೆಯಲ್ಲಿ ಗೆಲುವು-ಸೋಲಿನ ಕಿತ್ತಾಟಕ್ಕಿಂತ ಉತ್ತಮ ಕಾಯಕ ಗೆಲ್ಲುತ್ತದೆ ಎಂಬ ಕಾರಣಕ್ಕೆ ಸರ್ವ ಸನ್ನದ್ಧವಾಗಿದೆ ನಮ್ಮ ಕಾಂಗ್ರೆಸ್ ಟೀಂ," ಎಂದು ಒನ್ ಇಂಡಿಯಾಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಸಿಎಂ ಹೇಳುತ್ತಿದ್ದಂತೆ ಅಕ್ಕ-ಪಕ್ಕದ ಕಾರ್ಯಕರ್ತರ ಮೊಗದಲ್ಲಿ ನಗುವಿನ ಛಾಯೆ ಮೂಡುತ್ತಿತ್ತು.[ಅನುಕಂಪದ ಅಲೆಯಲ್ಲ, ಪತಿಯ ಜನಸೇವೆ ನನ್ನ ಗೆಲ್ಲಿಸುತ್ತೆ: ಗೀತಾ ಮಹಾದೇವಪ್ರಸಾದ್]
ಚುನಾವಣೆ ಪ್ರಚಾರಕ್ಕೆಂದು ಮೈಸೂರಿಗೆ ಆಗಮಿಸಿದ ದಿನದಂದಲೂ ನನ್ನ ದಿನಚರಿಯೇ ಅದಲು ಬದಲಾಗಿದೆ. ಬೆಳಿಗ್ಗೆ 5.30ಕ್ಕೆ ಎದ್ದು ಸ್ವಲ್ಪ ವ್ಯಾಯಾಮ, ಪೂಜೆ ಮುಗಿಸುತ್ತಿದ್ದಂತೆ 7 ಗಂಟೆಗಾಗಲೇ ಇಡೀ ಕಾರ್ಯಕರ್ತರ ದಂಡೇ ಮನೆಯ ಮುಂದೆ ನನಗಾಗಿ ಕಾಯುತ್ತಿರುತ್ತಾರೆ. ತಿಂಡಿ ತಿನ್ನುತ್ತೇನೋ, ಹಾಗೆಯೇ ಬಿಡುತ್ತೇನೋ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಇಡೀ ಕೈ ಪಾಳಯದ ದಂಡೇ ಉರಿ ಬಿಸಿಲೆನ್ನದೇ ನಮ್ಮ ಉಮೇದುವಾರರನ್ನು ಗೆಲ್ಲಿಸಲು ಸರ್ವ ಪ್ರಯತ್ನಕ್ಕೆ ಕೈ ಹಾಕಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಜತೆಗೆ ನಡೆಸಿದ ಸಂದರ್ಶನ ಇಲ್ಲಿದೆ.

ಎರಡೂ ಉಪಚುನಾವಣೆ ಅಕಾಲಿಕವೇ…
ನಮ್ಮ ಪಕ್ಷಕ್ಕೆ ಒಂದರ ಹಿಂದೆ ಒಂದು ಶಾಕ್ ಕಾದಿತ್ತು. ಆರಾಮಾಗಿ ನಡೆದುಕೊಂಡು ಹೋಗುತ್ತಿದ್ದ ಸರಕಾರಕ್ಕೆ ಇದಕ್ಕಿದ್ದ ಹಾಗೆ ಬರಸಿಡಿಲು ಎದುರಾಯಿತು. ಕೇವಲ ಅಧಿಕಾರದ ವ್ಯಾಮೋಹದ ದಾಹಕ್ಕಾಗಿ ಬಿಜೆಪಿಗೆ ಜಂಪ್ ಆದ ಶ್ರೀನಿವಾಸ್ ಪ್ರಸಾದ್ ನಮ್ಮ ಪಕ್ಷವನ್ನು ತೊರೆದರು. ಹಾಗೆಯೇ ಮತ್ತೋರ್ವ ನನ್ನ ಆಪ್ತ ಮಹದೇವ್ ಪ್ರಸಾದ್ ಅಕಾಲಿಕ ನಿಧನ ನನ್ನ ಮನಸ್ಸಿನಲ್ಲಿ ಏರುಪೇರನ್ನುಂಟು ಮಾಡಿದ್ದರಲ್ಲಿ ಸಂಶಯವೇ ಇಲ್ಲ. ಕೇವಲ ಒಂದು ವರುಷದ ಅಧಿಕಾರದ ಆಸೆಗಾಗಿ ಗೆಲುವು ಸಾಧಿಸುವ ಹಾಗೂ ಹಣ ವ್ಯಯ ಮಾಡುವ ಅನಿವಾರ್ಯತೆ ಇರಲಿಲ್ಲ. ನನಗೆ ಈ ವರುಷ ಎಲ್ಲವೂ ಶಾಕ್.. ಎಂದು ತಮ್ಮ ಮಗನ ಸಾವನ್ನು ಮನದಲ್ಲೇ ಮೆಲುಕು ಹಾಕಿ ದುಃಖಿತರಾದರು ಸಿದ್ಧರಾಮಯ್ಯ.

ನೀವೆ ಗೆಲ್ಲುತ್ತೀರಾ ಎನ್ನುವ ಕಾನ್ಫಿಡೆನ್ಸ್ ನಿಮಗೆ ಬಂದಿದ್ದಾರೂ ಹೇಗೆ…?
ಈ ಪ್ರಶ್ನೆ ಕೇಳುತ್ತಿದ್ದಂತೆಯೇ ನಕ್ಕು, ಮತ್ತೊಮ್ಮೆ ದಿಟ್ಟಿಸಿ ನೋಡಿದ ಸಿದ್ದರಾಮಯ್ಯನವರು, "ನೋಡಿ.. ಇದು ಕಾನ್ಫಿಡೆನ್ಸ್ ಅನ್ನುವುದಕ್ಕಿಂತ ಗೆದ್ದೆ ಗೆಲ್ಲುತ್ತೇವೆ ಎಂಬ ಮನಸ್ಥಿತಿ ಎನ್ನಿ.. ಕಾರಣ ಸಣ್ಣದು. ಕಾಂಗ್ರೆಸ್ ಎಂದಿಗೂ ಕೂಡ ನಮಗಾಗಿ ಮತ ಹಾಕಿ ಎಂದಿಲ್ಲ. ನಿಮ್ಮ ಏಳಿಗೆಗಾಗಿ ಮತ ಹಾಕಿ ಎನ್ನುತ್ತಿದೆ. ಆದರೆ ಬಿಜೆಪಿ ಮುಖಂಡರ ವರಸೆಯೇ ಬೇರೆ. ಅವರು ಮತ ಕೇಳುತ್ತಿರುವುದು ಯಡಿಯೂರಪ್ಪರವರನ್ನು ಸಿಎಂ ಮಾಡಲು ಮತ ಹಾಕಿ ಎನ್ನುತ್ತಿದೆ. ಹಾಗೆಯೇ ಯಡಿಯೂರಪ್ಪರವರು ಸಹ ನಾನು ಸಿಎಂ ಆಗಬೇಕಲ್ವಾ... ಅದಕ್ಕೋಸ್ಕರ ವೋಟ್ ಹಾಕಿ ಎನ್ನುತ್ತಿದ್ದಾರೆ.. ಜನ ಬದಲಾಗಿದ್ದಾರೆ ಸ್ವಾಮಿ.. ನಿಮ್ಮ ಸ್ವಾರ್ಥ ಬಿಡಿ.. ನಿಮ್ಮ ಗೆಲುವು ನಿಶ್ಚಿತ," ಎಂದರು.[ಮೋದಿಗೆ ನನ್ನ ವಯಸ್ಸು ಗೊತ್ತಿದೆ, ನಾನೇ ಮುಂದಿನ ಸಿಎಂ - ಯಡಿಯೂರಪ್ಪ]

ಗೀತಾ ಮಹದೇವ್ ಪ್ರಸಾದ್ ರವರನ್ನೇ ಕಣಕ್ಕಿಳಿಸುವ ಹಿಂದಿನ ತಂತ್ರಗಾರಿಕೆ?
ಮಹದೇವ್ ಪ್ರಸಾದ್ ನಿಧನದ ಬಳಿಕ ತೆರವಾದ ಸ್ಥಾನಕ್ಕೆ ಸರಿಯೆನಿಸುವ ಏಕೈಕ ವ್ಯಕ್ತಿ ಆಕೆ ಮಾತ್ರ. ಮಹದೇವ್ ಪ್ರಸಾದ್ ಬದುಕಿದ್ದಾಗ ನನ್ನ ಬಳಿ ತಮ್ಮ ಹೆಂಡತಿಯೂ ಕೂಡ ನನಗೆ ಸಲಹೆ - ಸೂಚನೆಗಳನ್ನು ನೀಡುತ್ತಾಳೆ. ಆಕೆಯ ತಂತ್ರಗಾರಿಕೆಯನ್ನು ಅಳವಡಿಸಿಕೊಂಡು ಗೆದ್ದಿದ್ದೇನೆ ಎಂದು ಅನೇಕ ಬಾರಿ ಹೇಳಿಕೊಂಡಿದ್ದರು. ಅದಷ್ಟೇ ಅಲ್ಲ ಆಕೆ ಬುದ್ಧಿವಂತೆ, ವಿದ್ಯಾವಂತೆ, ವಾಕ್ ಚತುರೆ. ಹಾಗಾಗಿ ಮತದಾರ ಮಹದೇವ್ ಪ್ರಸಾದ್ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳಲು ಆಕೆಯೇ ಸೂಕ್ತವೆಂದೆನಿಸಿತು. ಹಾಗಾಗಿ ಅವರೇ ನಮ್ಮ ಪಕ್ಷದಿಂದ ಸ್ಫರ್ಧಿಸಲು ಕೇಳಿದೆ. ಅವರು ಒಪ್ಪಿದರೂ ಕೂಡ.

ಪ್ರಚಾರಕ್ಕೆ ಬೇರೆ ಅರ್ಥ ಕಲ್ಪಿಸುವ ಅನಿವಾರ್ಯತೆ ಇಲ್ಲ….
ಎಲ್ಲಾ ಚುನಾವಣೆಗಳು, ಉಪಚುನಾವಣೆಗಳು ಘೋಷಣೆಯಾದಾಗ ಆಯಾ ಪಕ್ಷದ ನಾಯಕರು ಬಂದು ಪ್ರಚಾರ ಕಾರ್ಯದಲ್ಲಿ ತೊಡಗುವುದು ಸಹಜ. ಆಯಾ ಪಕ್ಷಗಳು ಸಹ ತಮ್ಮ ನಾಯಕರನ್ನು ಮತಬೇಟೆಗೆ ಇಳಿಸುತ್ತವೆ. ನಾವು ಬರ ಪರಿಸ್ಥಿತಿಯಲ್ಲೂ ಎಲ್ಲಾ ಕಡೆ ಅಧ್ಯಯನ ನಡೆಸಿದ್ದೇವೆ. ನಾವು ಬರ ಬಂದಾಗ ತೆರಳಿಲ್ಲ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ನಾವು ವರದಿ ಮಾಡಿ ನೀಡಿದ ಹಣವನ್ನು ಕೇಂದ್ರದಿಂದ ನೀಡಿಯೇ ಇಲ್ಲದ ಸರಕಾರ ಬಿಜೆಪಿ. ಅಲ್ಲಿನ ಯಾವ ನಾಯಕರೂ ಕೂಡ ಎಲ್ಲಿಯೂ ವೀಕ್ಷಣೆ ನಡೆಸಿಲ್ಲ. ಮೊದಲು ಬರ ಪರಿಹಾರಕ್ಕೆ ಕೇಂದ್ರ ಸರಕಾರವನ್ನು ಒಪ್ಪಿಸುವುದನ್ನು ಯಡಿಯೂರಪ್ಪ ಕಲಿಯಲಿ.[ಯಡ್ಡಿಯೂರಪ್ಪನವರದ್ದು ಉತ್ತರ ಕುಮಾರನ ಪೌರುಷ: ಉಗ್ರಪ್ಪ]

ನಾನು ಯಾರನ್ನೂ ಟೀಕಿಸಿಲ್ಲ…
ಪಕ್ಷದ ಕಾರ್ಯಕರ್ತರು ಚುನಾವಣೆ ಪ್ರಚಾರ ಮಾಡಿ ಎಂದರೆ ಈ ಬಿಜೆಪಿ ಮುಖಂಡರು ಬರೀ ನನ್ನನ್ನು ತೆಗಳುವುದರಲ್ಲಿಯೇ ಟೈಂ ಪಾಸ್ ಮಾಡುತ್ತಿದ್ದಾರೆ. ಇದುವರೆಗೂ ನಾನು ಎರಡೂ ಕ್ಷೇತ್ರದಲ್ಲಿ ಸರಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಿದ್ದೇನೆ ವಿನಃ ಬಿಜೆಪಿಯವರನ್ನು ಎಲ್ಲಿಯೂ ಟೀಕಿಸಿಲ್ಲ. ಅಂತಹ ಕೀಳು ಮಟ್ಟದ ರಾಜಕಾರಣ ನನಗೆ ಬೇಕಾಗಿಯೂ ಇಲ್ಲ.

ಮುಂದಿನ ಚುನಾವಣೆಯಲ್ಲಿ ಸ್ಫರ್ಧಿಸುತ್ತೀರಾ…?
ಮುಂದಿನ ಚುನಾವಣೆಯಲ್ಲಿ ಸ್ಫರ್ಧಿಸುವ ಕುರಿತಾಗಿ ಹೈಕಮಾಂಡ್ ನಿರ್ಧಾರವೇ ಅಂತಿಮ. ಸ್ಪರ್ಧಿಸುವುದಿದ್ದರೆ ಚಾಮುಂಡಿ ಅಥವಾ ವರುಣಾದಿಂದಲೇ ಸ್ಫರ್ಧಿಸುತ್ತೇನೆ. ಇನ್ನು ಯತೀಂದ್ರರನ್ನು ಕಣಕ್ಕಿಳಿಸುವ ಕುರಿತು ಯೋಚಿಸಿಲ್ಲ ಎಂದು ಮಾತನಾಡುತ್ತಲೇ ಅತ್ತ ಕಡೆಯಿಂದ ಸರ್ ಮುಂದಿನ ಕಾರ್ಯಕ್ರಮಕ್ಕೆ ಹೋಗೋಣ್ವಾ ಎಂದಾಗ ಮುಗುಳ್ನಕ್ಕು ಹೊರಟುನಿಂತರು ಸಿಎಂ.











Click it and Unblock the Notifications