ಲೈಟ್ ಕಂಬಕ್ಕೆ ಗುದ್ದಿದ ಬಸ್, ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ
ತಿ.ನರಸೀಪುರ, ಅಕ್ಟೋಬರ್ 2: ಬ್ರೇಕ್ ವಿಫಲಗೊಂಡ ಖಾಸಗಿ ಬಸ್ ರಸ್ತೆಯುದ್ದಕ್ಕೂ ಅಡ್ಡಾದಿಡ್ಡಿ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಪಟ್ಟಣದ ಹೊಸ ತಿರುಮಕೂಡಲಿನ ಕೊಳ್ಳೇಗಾಲ ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಇಬ್ಬರು ವೃದ್ಧರು ಗಾಯಗೊಂಡಿದ್ದು, ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಪಟ್ಟಣದ ಶ್ರೀ ವೀರಭದ್ರೇಶ್ವರ ಪೆಟ್ರೋಲ್ ಬಂಕ್ ಮುಂಭಾಗ ನಿಂತಿದ್ದ ಖಾಸಗಿ ಬಸ್ (ಕೆಎ 11, 9888) ಬ್ರೇಕ್ ವಿಫಲಗೊಂಡು ಹೊಸ ತಿರುಮಕೂಲಿನತ್ತ ಇಳಿಮುಖವಾಗಿ ಚಲಿಸಿದೆ. ಇದರಿಂದ ರಸ್ತೆ ಬದಿಯಲ್ಲಿ ನಿಂತಿದ್ದ ತಾಲೂಕಿನ ಕಾರ್ಗಳ್ಳಿ ಗ್ರಾಮದ ನಿವಾಸಿ ಮಹದೇವಯ್ಯ(55) ಹಾಗೂ ಕೊಳ್ಳೇಗಾಲದವರು ಎನ್ನಲಾದ ಪುಟ್ಟಮಾದಯ್ಯ(50) ಎಂಬುವರು ಗಾಯಗೊಂಡಿದ್ದಾರೆ. ಇದೀಗ ಇವರಿಬ್ಬರು ಮೈಸೂರಿನ ಕೆ.ಆರ್.ಆಸ್ಪತ್ರೆ ಹಾಗೂ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಬಸ್ಸಿನಲ್ಲಿದ್ದ ಕ್ಲೀನರ್ ಬಸ್ಸನ್ನು ನಿಯಂತ್ರಣಕ್ಕೆ ತರಲು ಹರಸಾಹಸಪಟ್ಟರು. ಆದರೆ, ಇಳಿಜಾರಿನಲ್ಲಿ ತೆರಳುತ್ತಿದ್ದ ಬಸ್ಸಿನ ವೇಗ ಹೆಚ್ಚಾಗಿ ಹೊಸ ತಿರುಮಕೂಡಲು ವೃತ್ತದಲ್ಲಿ ಬಲಭಾಗದ ಕೊಳ್ಳೇಗಾಲ ರಸ್ತೆಗೆ ತಿರುಗಿ ರಸ್ತೆಯ ಬಲಭಾಗದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಅರ್ಧಭಾಗ ಮುರಿದು ನೆಲಕ್ಕೆ ಬಾಗಿದೆ. ಬಸ್ ಡಿಕ್ಕಿ ಹೊಡೆದ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಅವಘಡದಿಂದ ಹೊಸ ತಿರುಮಕೂಡಲಿನ ವಿದ್ಯುತ್ ಸಂಕರ್ಪವೇ ಸ್ಥಗಿತಗೊಂಡಿತ್ತು. ಹೊಸ ಕಂಬಗಳನ್ನು ಹಾಕಿ ತಂತಿ ಎಳೆದ ಬಳಿಕ ಬಸ್ಸನ್ನು ತೆರವುಗೊಳಿಸಲಾಯಿತು. ಸ್ಥಳಕ್ಕೆ ಪಟ್ಟಣ ಪೊಲೀಸ್ ಠಾಣೆಯ ಎಎಸ್‍ಐ ದೊಡ್ಡೇಗೌಡ ಅವರು ಧಾವಿಸಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.












Click it and Unblock the Notifications